ಲಾಕ್‍ಡೌನ್ ಯೋಚಿಸದೆ ತೆಗೆದುಕೊಂಡ ಆತುರದ ನಿರ್ಧಾರ: ಮಾಜಿ ಪ್ರಧಾನಿ ದೇವೇಗೌಡ

Update: 2020-04-10 16:57 GMT

ಬೆಂಗಳೂರು, ಎ.10: ಕೊರೋನ ವೈರಾಣುವಿನ ಸಂಕಷ್ಟದ ಸಮಯದಲ್ಲಿ ಲಾಕ್‍ಡೌನ್‍ನಿಂದಾಗಿ ರಾಜ್ಯದ ಹಾಗೂ ದೇಶದ ರೈತರು ಕಂಗಾಲಾಗಿದ್ದು, ರೈತರ, ಕೃಷಿ ಕಾರ್ಮಿಕರ, ದಿನಗೂಲಿ ನೌಕರರ ಪಾಲಿಗೆ ಲಾಕ್‍ಡೌನ್ ಮಾಡಿರುವುದು ಮುಂದಾಲೋಚನೆ ಇಲ್ಲದ, ಸರಿಯಾಗಿ ಯೋಚಿಸದೆ ತೆಗೆದುಕೊಂಡ ಆತುರದ ನಿರ್ಧಾರದಂತೆ ಕಾಣುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ದೇಶದಲ್ಲಿ ಕೊರೋನ ವೈರಾಣುವಿನ ಸೋಂಕು ಕಾಣಿಸಿಕೊಂಡಿದ್ದು, ಜನವರಿ 30ರಂದು. ಆದರೂ, ಎರಡು ತಿಂಗಳುಗಳ ಕಾಲ ಸುಮ್ಮನಿದ್ದು, ಮುಂದಾಲೋಚನೆ ಇಲ್ಲದೆ, ಸರಿಯಾಗಿ ಚಿಂತಿಸದೆ ತರಾತುರಿಯಲ್ಲಿ ತೆಗೆದುಕೊಂಡ ಆತುರದ ನಿರ್ಧಾರದಿಂದ ರೈತರು ಅತೀ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.

ಲಾಕ್‍ಡೌನ್ ಮಾಡುವ ಮುನ್ನ ಇದರಿಂದ ರೈತರಿಗೆ, ಕೃಷಿ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಹಾಗೂ ಇತರರಿಗೆ ಆಗುವ ಸಾಧಕ ಬಾಧಕಗಳ ಬಗ್ಗೆ ಸುದೀರ್ಘವಾಗಿ ರಾಜ್ಯಗಳ ಸರಕಾರಗಳು, ಅನುಭವಿ ಪ್ರಜೆಗಳು, ಕ್ರಿಯಾಶೀಲ ಅಧಿಕಾರಿಗಳು, ಪ್ರಗತಿಪರ ರೈತರು, ರೈತರ ಅಭಿವೃದ್ಧಿಗೆ ರಾಜ್ಯದ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಥಾಪಿಸಿರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳೊಡನೆ, ಸಗಟು ವ್ಯಾಪಾರಸ್ಥರೊಡನೆ ಸುಧೀರ್ಘವಾಗಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ದೇವೇಗೌಡ ತಿಳಿಸಿದ್ದಾರೆ.

ಲಾಕ್‍ಡೌನ್‍ನಿಂದಾಗಿ ಎಲ್ಲ ಸಂಚಾರವನ್ನು ನಿರ್ಬಂಧಗೊಳಿಸಿದ ಮೇಲೆ ತೋಟಗಾರಿಕಾ ಉತ್ಪನ್ನಗಳನ್ನು ಗ್ರಾಮ ಮಟ್ಟದಲ್ಲೆ ಹಾಲನ್ನು ಸಂಗ್ರಹಿಸುವಂತೆ ಸೂಕ್ತ ಬೆಲೆ ನಿಗದಿ ಮಾಡಿ ಸರಕಾರವೇ ಸಂಬಂಧಪಟ್ಟ ಸಂಘ ಸಂಸ್ಥೆಗಳ ಮುಖಾಂತರ ಕೊಂಡು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಿತ್ತು. ಸದ್ಯಕ್ಕೆ ರಾಜ್ಯದಲ್ಲಿ ತೋಟಗಾರಿಕಾ ಸಹಕಾರಿ ಮಹಾಮಂಡಲ, ಹಾಪ್‍ಕಾಮ್ಸ್, ರಾಷ್ಟ್ರೀಯ ಹೈನು ಅಭಿವೃದ್ಧಿ ಸಂಸ್ಥೆಯ ಸಫಲ್, ಕರ್ನಾಟಕ ಸಹಕಾರಿ ಮಾರಾಟ ಮಹಾಮಂಡಲ, ರಾಷ್ಟ್ರಮಟ್ಟದ ನ್ಯಾಪೆಡ್, ಕೇಂದ್ರ ಹಾಗೂ ರಾಜ್ಯಗಳ ಉಗ್ರಾಣಗಳ ಸಂಸ್ಥೆ, ಎಪಿಎಂಸಿ ಇವೇ ಮುಂತಾದ ಪ್ರದೇಶದಲ್ಲಿ ತೋಟಗಾರಿಕಾ ಉತ್ಪನ್ನಗಳನ್ನು ರೈತರಿಂದ ಕೊಳ್ಳಲು ವ್ಯವಸ್ಥೆ ಮಾಡಬೇಕಾಗಿತ್ತು ಮತ್ತು ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಲಾಕ್‍ಡೌನ್‍ನಿಂದ ತೋಟಗಾರಿಕಾ ಉತ್ಪನ್ನಗಳ ಸಂಗ್ರಹಣೆ, ಸಾಗಾಣಿಕೆ ಹಾಗೂ ಮಾರಾಟಕ್ಕೆ ನಿರ್ಬಂಧ ವಿಧಿಸಬಾರದು. ಏಕೆಂದರೆ, ಅವು ಬೇಗ ಬಾಡುವ ಹಾಗೂ ಕೊಳೆತು ಹೋಗುವ ಪದಾರ್ಥಗಳು. ತೋಟಗಾರಿಕಾ ಉತ್ಪನ್ನಗಳ ಎಲ್ಲ ಸಂಸ್ಕರಣಾ ಘಟಕಗಳಿಗೂ ಅವುಗಳ ಎಲ್ಲ ಕಾರ್ಯಚಟುವಟಿಕೆಗಳಿಗೆ, ಲಾಕ್‍ಡೌನ್‍ನಿಂದ ಪೂರ್ಣ ವಿನಾಯಿತಿ ನೀಡಬೇಕು ಎಂದು ದೇವೇಗೌಡ ಕೋರಿದ್ದಾರೆ.

ತೋಟಗಾರಿಕಾ ಉತ್ಪನ್ನಗಳನ್ನು ಜಿಲ್ಲೆಯ, ರಾಜ್ಯದ ಹಾಗೂ ದೇಶದ ಪ್ರದೇಶಕ್ಕೆ ಯಾವುದೆ ಅಡೆತಡೆಗಳಿಲ್ಲದೆ ಸಾಗಾಣಿಕೆ ಹಾಗೂ ಮಾರುಕಟ್ಟೆಗೆ ಅನುವು ಮಾಡಿಕೊಡಬೇಕು. ಸಂಸ್ಕರಿಸಿದ ಪದಾರ್ಥಗಳ ರಫ್ತಿಗೆ ಯಾವುದೆ ನಿರ್ಬಂಧಗಳಿರಬಾರದು. ಎಲ್ಲ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಕಾರ್ಯಗಳಿಗೆ ಯಾವುದೆ ನಿರ್ಬಂಧಗಳಿರಬಾರದು ಎಂದು ಅವರು ತಿಳಿಸಿದ್ದಾರೆ.

ತೋಟಗಾರಿಕಾ ಉತ್ಪನ್ನಗಳ ವ್ಯವಸ್ಥಿತ ಮಾರುಕಟ್ಟೆಗೆ ರಾಷ್ಟ್ರೀಯ ಸರಳು(ನ್ಯಾಷನಲ್ ಗ್ರೀಡ್) ರಚಿಸಬೇಕು. ಇದರಿಂದ ಉತ್ಪಾದನೆ ಹೆಚ್ಚಿರುವ ಪ್ರದೇಶಗಳಿಂದ ಉತ್ಪಾದನೆ ಇರದ, ಬೇಡಿಕೆ ಇರುವ ಪ್ರದೇಶಗಳಿಗೆ ಕಳುಹಿಸುವ ವ್ಯವಸ್ಥೆಯಾಗಬೇಕು. ಇದರಿಂದ, ಬೆಳೆಗಾರರಿಗೆ ಹಾಗೂ ಬಳಕೆದಾರರಿಗೆ ಅನುಕೂಲವಾಗುತ್ತದೆ ಎಂದು ದೇವೇಗೌಡ ಹೇಳಿದ್ದಾರೆ.

ಸರಕಾರ ಪರಿಹಾರ ನೀಡಲಿ

ತೋಟಗಾರಿಕಾ ಉತ್ಪನ್ನಗಳ ಮಾರುಕಟ್ಟೆ ಸಮಸ್ಯೆಯನ್ನು ಸದ್ಯಕ್ಕೆ ಬಗೆಹರಿಸಲು ಸಾಧ್ಯ ಇಲ್ಲವೆಂದರೆ, ರೈತರಿಗೆ ಬೆಳೆಯ ಉತ್ಪಾದನೆಯ ಮೇಲೆ ಸರಕಾರ ಪರಿಹಾರವನ್ನು ಕೊಡಬೇಕು. ಸೂಚಿಸಿರುವ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತಂದು ಪಾಲನೆ ಮಾಡದೆ ಹೋದರೆ, ಹಣ್ಣು, ತರಕಾರಿಗಳ ಉತ್ಪಾದನೆ ಕುಂಠಿತವಾಗಿ ರಾಜ್ಯ, ದೇಶದಲ್ಲಿ ಆಹಾರ ಪದಾರ್ಥಗಳ ಅಭಾವವು ಉಂಟಾಗಿ ಜನ ದಂಗೆ ಏಳಬಹುದು ಹಾಗೂ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿ ಕೊರೋನ ವೈರಾಣುವಿಗಿಂತ ಹೆಚ್ಚಿನ ಅನಾಹುತಗಳಾಗಬಹುದು. ಅದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದು.

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News