ಪಡಿತರ ವಿತರಣೆಯಲ್ಲಿ ಅವ್ಯವಹಾರ ಆರೋಪ: 7ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳಿಗೆ ಬೀಗ

Update: 2020-04-11 10:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.11: ಎರಡು ತಿಂಗಳ ಪಡಿತರ ವಿತರಿಸಲು ಹಣ ಸ್ವೀಕರಿಸಿದ ರಾಜ್ಯದ ವಿವಿಧ ಜಿಲ್ಲೆಗಳ 7ಕ್ಕೂ ಅಧಿಕ ಪಡಿತರ ಮಳಿಗೆಗಳನ್ನು ಅಮಾನತುಗೊಳಿಸಲಾಗಿದೆ. ಪರಿಶೀಲನೆಗೆ ಆಗಮಿಸಿದ ಅಧಿಕಾರಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಅಲ್ಲದೆ, ಪಡಿತರ ವಿತರಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಆರೋಪದಲ್ಲಿ ಬೆಂಗಳೂರು ಉತ್ತರ ತಾಲೂಕು ನ್ಯಾಯ ಬೆಲೆ ಅಂಗಡಿ ಸಂಖ್ಯೆ 15ಅನ್ನು ಅಮಾನತುಪಡಿಸಲಾಗಿದೆ.

ಈ ನ್ಯಾಯ ಬೆಲೆ ಅಂಗಡಿಯ ಪಡಿತರ ಚೀಟಿದಾರರಿಗೆ ಚಿಕ್ಕಬಿದರಕಲ್ಲು ಜ್ಞಾನಜ್ಯೋತಿ ಮಹಿಳಾ ಸಂಘದ 243ನೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ತಾತ್ಕಾಲಿಕ ಅವಕಾಶ ಕಲ್ಪಿಸಲಾಗಿದೆ. ಅಳತೆಯಲ್ಲಿ ಮೋಸ ಮಾಡಿದ ಹಾಗೂ ಹಣ ಪಡೆದ ಆರೋಪದಲ್ಲಿ ಲಿಂಗಸುಗೂರು ತಾಲೂಕಿನ ಆಶಿಹಾಳ ತಾಂಡಾ ನ್ಯಾಯ ಬೆಲೆ ಅಂಗಡಿಯ ಪರವಾನಿಗೆ ರದ್ದುಪಡಿಸಲಾಗಿದೆ.

ಅಲ್ಲಿನ ಪಡಿತರದಾರರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ನಿಗದಿತ ಪ್ರಮಾಣದ ಪಡಿತರ ವಿತರಿಸದ ಹಾಗೂ ಹಣ ಪಡೆದ ಆರೋಪದಲ್ಲಿ ಸಿರಿವಾರ ತಾಲೂಕಿನ ಎನ್.ಹೊಸೂರು ಗ್ರಾಮದ ಹನುಮಯ್ಯ ಅವರ ನ್ಯಾಯಬೆಲೆ ಅಂಗಡಿಯನ್ನು ಅಮಾನತುಗೊಳಿಸಲಾಗಿದೆ. ಕಡಿಮೆ ಪ್ರಮಾಣದಲ್ಲಿ ಪಡಿತರ ವಿತರಿಸಿದ, ಹಣ ಪಡೆದ ಆರೋಪದಲ್ಲಿ ದೇವದುರ್ಗ ತಾಲೂಕಿನ ಗಾಣದಾಳ ಗ್ರಾಮದ ನ್ಯಾಯಬೆಲೆ ಅಂಗಡಿಯ ಪಡಿತರ ಅಂಗಡಿಯನ್ನು ಅಮಾನತುಗೊಳಿಸಲಾಗಿದೆ.

ಅಕ್ರಮವಾಗಿ ಪಡಿತರದಾರರಿಂದ 20 ರೂ. ಪಡೆಯುತ್ತಿದ್ದ ಹಾಗೂ ವಹಿವಾಟಿನಲ್ಲಿ ನ್ಯೂನತೆ ಕಂಡುಬಂದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕಾಯ್ದಿರಿಸಿ ಗೌರಿಬಿದನೂರು ತಾಲೂಕಿನ ಕಸಬಾ ಹೋಬಳಿ ಇಡಗೂರು ನ್ಯಾಯಬೆಲೆಯ ಅಂಗಡಿಯನ್ನು ಅಮಾನತುಗೊಳಿಸಲಾಗಿದೆ. ಅದೇ ರೀತಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿ ಅಜ್ಜವಾರ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಜಿಲ್ಲಾ ನೋಡಲ್ ಅಧಿಕಾರಿಗಳ ತಂಡ ಭೇಟಿ ನೀಡಿದಾಗ ಕಂಡುಬಂದ ನ್ಯೂನತೆ ಹಿನ್ನೆಲೆಯಲ್ಲಿ ಅಂಗಡಿಯನ್ನು ಅಮಾನತುಪಡಿಸಲಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಕೇಶವಾರ ಗ್ರಾಮದ ನ್ಯಾಯಬೆಲೆ ಅಂಗಡಿಯನ್ನು ಕೂಡ ಅಮಾನತುಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News