ರಾಜ್ಯದಲ್ಲಿ 10 ಜಿಲ್ಲೆಗಳು ಕೋವಿಡ್-19 ಹಾಟ್‍ಸ್ಪಾಟ್: ಸಚಿವ ಬಿ.ಶ್ರೀರಾಮುಲು

Update: 2020-04-11 11:41 GMT

ಬಳ್ಳಾರಿ, ಎ.11: ಕೋವಿಡ್-19ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 10 ಜಿಲ್ಲೆಗಳನ್ನು ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದ್ದು, ಆ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ. ಇಲ್ಲಿಯೂ ಕೊರೋನ ನಿಯಂತ್ರಣಕ್ಕೆ ಬರುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಜೊತೆ ನಡೆಸಿದ ನಡೆಸಿದ ವಿಡಿಯೋ ಕಾನ್ಫರೆನ್ಸ್ ಕುರಿತು ಮಾಹಿತಿ ಹಂಚಿಕೊಂಡದರು. ರಾಜ್ಯದಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 6 ಜನರು ಸಾವನ್ನಪ್ಪಿದ್ದಾರೆ. 30 ಜನರು ಗುಣಮುಖರಾಗಿದ್ದಾರೆ ಎಂದರು.

ಹೊಸದಿಲ್ಲಿಗೆ ಹೋಗಿ ಬಂದವರಲ್ಲಿ 40 ಜನರಿಗೆ ಪಾಸಿಟಿವ್ ದೃಢವಾಗಿದೆ. 16,334 ಮಂದಿ ಅಂತರಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ. ಎಲ್ಲ ಅಂತರಾರಾಷ್ಟ್ರೀಯ ಪ್ರಯಾಣಿಕರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ಸೋಂಕು ಪಾಸಿಟಿವ್ ಆಗಿರುವವರಲ್ಲಿ 1,804 ಪ್ರಥಮ ಮತ್ತು 5,533 ದ್ವಿತೀಯ ಸಂಪರ್ಕಕ್ಕೆ ಬಂದಿದ್ದು, ಅವರೆಲ್ಲರ ಮೇಲೂ ನಿಗಾವಹಿಸಲಾಗಿದೆ. 7,613 ಜನರ ಸ್ಯಾಂಪಲ್‍ಗಳನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ರವಾನಿಸಲಾಗಿತ್ತು. 7,176 ಸ್ಯಾಂಪಲ್ಸ್ ವರದಿ ನೆಗೆಟಿವ್ ಬಂದಿದೆ. 437 ಜನರ ವರದಿ ಬರಬೇಕಿದೆ ಎಂದು ಶ್ರೀರಾಮುಲು ತಿಳಿಸಿದರು.

ರಾಜ್ಯದಲ್ಲಿ 10 ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಉತರ ಕರ್ನಾಟಕದ 13 ಜಿಲ್ಲೆಗಳಲ್ಲಿ, ಕಲಬುರಗಿ ಮತ್ತು ಬಳ್ಳಾರಿಯಲ್ಲಿ ಮಾತ್ರ ಎರಡು ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ಭಾಗಕ್ಕೆ ಇನ್ನೆರೆಡು ಪ್ರಯೋಗಾಲಯಗಳ ಅಗತ್ಯವಿದ್ದು, ಒದಗಿಸಿಕೊಡುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ ಹಾಟ್‍ಸ್ಪಾಟ್‍ಗಳಲ್ಲಿ ಒಂದಾಗಿರುವ ಮೈಸೂರು ಜಿಲ್ಲೆಯಲ್ಲಿ 37 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆಯೊಂದರಲ್ಲೆ 26 ಪಾಸಿಟಿವ್ ಆಗಿರುವುದು ಅತ್ಯಂತ ಆತಂಕಕಾರಿ. ಈ ಕಾರ್ಖಾನೆಗೆ ಸೆಮಿಲಿಕ್ವಿಡ್ ಕಂಟೈನರ್ ಚೀನಾದಿಂದ ಬಂದಿದ್ದು, ಅದರ ಸ್ಯಾಂಪಲ್ ಅನ್ನು ಪುಣೆಯ ಎನ್‍ಎಬಿ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಇದುವರೆಗೆ ವರದಿ ಬಂದಿಲ್ಲ ಎಂದು ಶ್ರೀರಾಮುಲು ತಿಳಿಸಿದರು.

ಈ ಕಾರ್ಖಾನೆಗೆ ಜಪಾನಿನ ಮೂವರು ಟೆಕ್ನಿಶಿಯನ್‍ಗಳು ಹಾಗೂ ದಿಲ್ಲಿಯ ಓರ್ವ ಟೆಕ್ನಿಶಿಯನ್ ಬಂದಿದ್ದ ಎಂಬ ಮಾಹಿತಿ ಇದ್ದು, ಈಗಾಗಲೆ ಜಪಾನ್ ದೇಶಕ್ಕೂ ಈ ಸಂಬಂಧ ಪತ್ರ ಬರೆಯಲಾಗಿದೆ. ರಾಜ್ಯಕ್ಕೆ ಒಂದು ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್‍ಗಳು ಎ.13ರೊಳಗೆ ಆಗಮಿಸಲಿವೆ. 10 ಲಕ್ಷ ಪಿಪಿಇ ಕಿಟ್‍ಗಳು, 18.33 ಲಕ್ಷ ಎನ್-95 ಮಾಸ್ಕ್, 54 ಲಕ್ಷ ತ್ರಿಬಲ್ ಲೇಯರ್ ಮಾಸ್ಕ್, ಡೈಡ್ರಾಕ್ಸಿಕ್ಲೋರೋಕ್ವೀನ್ ಪಾಸ್ಪಲೇಟ್ ಟ್ಯಾಬ್ಲೆಟ್ಸ್ 2.80 ಲಕ್ಷ, 324 ವೆಂಟಿಲೇಟರ್ ಗಳನ್ನು ತರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News