ಕೇವಲ 13 ದಿನಗಳಲ್ಲಿ 10ರಿಂದ 20 ಲಕ್ಷ ತಲುಪಿದ ಕೊರೋನ ಪ್ರಕರಣ

Update: 2020-04-16 03:44 GMT

ಹೊಸದಿಲ್ಲಿ, ಎ.16: ವಿಶ್ವಾದ್ಯಂತ ಕೋವಿಡ್-19 ಸೋಂಕಿತರ ಸಂಖ್ಯೆ ಬುಧವಾರ 20 ಲಕ್ಷ ದಾಟಿದೆ. ವಿಶ್ವದ ಯಾವ ಖಂಡವನ್ನೂ ಬಿಡದೇ, ಅಲ್ಲೋಲ ಕಲ್ಲೋಲಗೊಳಿಸಿರುವ ಮಾರಕ ವೈರಸ್, ಆರ್ಥಿಕತೆಗಳನ್ನು ಕೂಡಾ ಧ್ವಂಸಗೊಳಿಸಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಚೇತರಿಸಿಕೊಳ್ಳಲು ವರ್ಷಗಳೇ ಬೇಕಾಗಬಹುದು.

ವಿಶ್ವದಲ್ಲಿ ಸೋಂಕಿತ ಸಂಖ್ಯೆ 10 ಲಕ್ಷದ ಗಡಿ ದಾಟಲು ಮೊದಲ ಪ್ರಕರಣ ಕಾಣಿಸಿಕೊಂಡ ಬಳಿಕ 93 ದಿನಗಳು ಬೇಕಾದವು. ಆದರೆ ಮತ್ತೆ ಕೇವಲ 13 ದಿನಗಳ ಅಂತರದಲ್ಲಿ ಸಂಖ್ಯೆ ದುಪ್ಪಟ್ಟಾಗಿದೆ. ಅಮೆರಿಕ ಹಾಗೂ ಯೂರೋಪ್‌ನಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಇದಕ್ಕೆ ಕಾರಣ. ಇದುವರೆಗೆ 1,30,802 ಮಂದಿ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ ಎಂದು ವರ್ಲ್ಡ್‌ಮೀಟರ್ಸ್‌.ಇನ್ಫೋ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

ಒಟ್ಟು ಸೋಂಕಿನ ಪ್ರಕರಣಗಳ ಪೈಕಿ ಅಮೆರಿಕ ಹಾಗೂ ಯೂರೋಪ್‌ನಲ್ಲಿ ಶೇಕಡ 78ರಷ್ಟು ಪ್ರಕರಣಗಳು ಇವೆ. ಅಂತೆಯೇ ಒಟ್ಟು ಸಾವಿನ ಪೈಕಿ ಈ ಖಂಡಗಳ ಪಾಲು ಶೇಕಡ 86. ವಿಶ್ವದ ಅತಿದೊಡ್ಡ ಹಾಟ್‌ಸ್ಪಾಟ್ ಎನಿಸಿಕೊಂಡಿರುವ ಅಮೆರಿಕದಲ್ಲಿ ಒಂದೇ ದಿನ 2,228 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 26 ಸಾವಿರವನ್ನು ದಾಟಿದೆ. ನ್ಯೂಯಾರ್ಕ್‌ನಲ್ಲೇ 10 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಸೋಂಕಿನಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಇತರ ದೇಶಗಳೆಂದರೆ ಇಟಲಿ, ಫ್ರಾನ್ಸ್, ಸ್ಪೇನ್ ಮತ್ತು ಬ್ರಿಟನ್. ಒಟ್ಟು ಜನಸಂಖ್ಯೆಯ ಪೈಕಿ ಗರಿಷ್ಠ ಪ್ರಮಾಣದಲ್ಲಿ ಜನ ಮೃತಪಟ್ಟಿರುವುದು ಸ್ಪೇನ್‌ನಲ್ಲಿ. ಸ್ಪೇನ್‌ನಲ್ಲಿ ಪ್ರತಿ 10 ಲಕ್ಷ ಮಂದಿಯ ಪೈಕಿ 390 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News