ಲಾಕ್‍ಡೌನ್ ಸಂದರ್ಭದಲ್ಲೇ ರಮಝಾನ್: ಮಸೀದಿ-ದರ್ಗಾಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ

Update: 2020-04-16 11:47 GMT

ಬೆಂಗಳೂರು, ಎ.16: ಲಾಕ್‍ಡೌನ್ ಸಂದರ್ಭದಲ್ಲೇ ಮುಸ್ಲಿಮರ ಪವಿತ್ರ ರಮಝಾನ್ ತಿಂಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯು ಎಲ್ಲ ಮಸೀದಿಗಳು, ದರ್ಗಾಗಳ ಆಡಳಿತ ಸಮಿತಿಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಗುರುವಾರ ನಗರದ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಕಾರ್ಯದರ್ಶಿ ಎ.ಬಿ.ಇಬ್ರಾಹಿಮ್ ಈ ವಿಷಯವನ್ನು ತಿಳಿಸಿದರು.

ಈ ಹಿಂದೆಯೆ ಸೂಚಿಸಿರುವಂತೆ ಪ್ರತಿ ದಿನದ ಐದು ಹೊತ್ತಿನ ನಮಾಝ್, ಶುಕ್ರವಾರದ ವಿಶೇಷ ನಮಾಝ್ ಹಾಗೂ ರಮಝಾನ್ ಮಾಸದಲ್ಲಿ ನಿರ್ವಹಿಸುವ ತರಾವೀಹ್ ನಮಾಝ್ ಅನ್ನು ಯಾವುದೇ ಕಾರಣಕ್ಕೂ ಗುಂಪುಗೂಡಿ ನಿರ್ವಹಿಸುವಂತಿಲ್ಲ, ಮಸೀದಿಗೆ ಬರುವಂತಿಲ್ಲ.

ಮಸೀದಿಯ ಸಿಬ್ಬಂದಿಗಳನ್ನು ಬಳಸಿಕೊಂಡು ಧಾರ್ಮಿಕ ಪ್ರವಚನ ನೀಡುವುದಾಗಲಿ, ಶುಕ್ರವಾರದ ವಿಶೇಷ ನಮಾಝ್ ಹಾಗೂ ತರಾವೀಹ್ ನಮಾಝ್ ನಿರ್ವಹಿಸುವಂತಿಲ್ಲ. ಮಸೀದಿಯ ಸಿಬ್ಬಂದಿಗಳು ಮಸೀದಿಯಲ್ಲಿ ನಮಾಝ್ ಮಾಡುವಾಗ ಧ್ವನಿವರ್ಧಕ ಬಳಸಬಾರದು. ಮುಅಝ್ಝಿನ್ ಅಥವಾ ಇಮಾಮ್ ಈ ಹಿಂದಿನಂತೆ ಸಹರಿ ಸಮಯ ಮುಕ್ತಾಯಗೊಳ್ಳುವ ಹಾಗೂ ಇಫ್ತಾರ್ ಸಮಯ ಆರಂಭಗೊಳ್ಳುವ ಸೂಚನೆಯನ್ನು ನೀಡಬಹುದಾಗಿದೆ.

ಸಹರಿ ಅಥವಾ ಇಫ್ತಾರ್ ಕೂಟಗಳನ್ನು ಆಯೋಜಿಸುವಂತಿಲ್ಲ. ಮೊಹಲ್ಲಾಗಳಲ್ಲಿ ಹಂಚುವ ಉದ್ದೇಶದಿಂದ ಮಸೀದಿಯ ಆವರಣದೊಳಗೆ ಗಂಜಿ, ಪಾನೀಯಗಳನ್ನು ಸಿದ್ಧಪಡಿಸುವಂತಿಲ್ಲ. ಅಲ್ಲದೆ, ಮಸೀದಿ ಹಾಗೂ ದರ್ಗಾಗಳ ಬಳಿ ತಿಂಡಿ ತಿನಿಸುಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವಂತಿಲ್ಲ ಎಂದು ಇಬ್ರಾಹಿಮ್ ಸೂಚಿಸಿದರು.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವಕ್ಫ್ ಸಂಸ್ಥೆಗಳ ಎಲ್ಲ ಆಡಳಿತ ಸಮಿತಿಗಳು ಈ ಆದೇಶವನ್ನು ಪಾಲನೆ ಮಾಡಬೇಕು. ಹಾಗೂ ಈ ಹಿಂದೆ ವಕ್ಫ್ ಬೋರ್ಡ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊರಡಿಸಿರುವ ಆದೇಶವನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು.

ತಬ್ಲೀಗ್ ಜಮಾಅತ್: ರಾಜ್ಯದಿಂದ ಹೊಸದಿಲ್ಲಿಯ ನಿಝಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯದಿಂದ 698 ಮಂದಿ ತಬ್ಲೀಗ್ ಜಮಾಅತ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 28 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಎಲ್ಲರನ್ನೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಬ್ರಾಹಿಮ್ ಹೇಳಿದರು.

ತಬ್ಲೀಗ್ ಜಮಾಅತ್ ಕಾರ್ಯಕ್ರಮಕ್ಕೆ ಹೋಗಿ ಬಂದವರೆಲ್ಲ ಸೋಂಕಿತರು ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇವತ್ತು ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವವರು. ಇವತ್ತು ರೈತರು ಬೆಳೆದಂತಹ ತೋಟಗಾರಿಕೆ ಬೆಳೆಗಳನ್ನು ಖರೀದಿಸಲು ಮುಂದಾಗುವ ಅಲ್ಪಸಂಖ್ಯಾತರನ್ನು ತಮ್ಮ ಗ್ರಾಮಗಳಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂಬ ದೂರುಗಳು ಸಾಕಷ್ಟು ಪ್ರಮಾಣದಲ್ಲಿ ಬಂದಿವೆ ಎಂದು ಅವರು ತಿಳಿಸಿದರು.

ಇಂತಹ ಬೆಳವಣಿಗೆಯಿಂದ ರೈತರು ಬೆಳೆದ ಹಣ್ಣುಗಳನ್ನು ಯಾರೊಬ್ಬರೂ ಖರೀದಿಸಲು ಮುಂದೆ ಬರದಿದ್ದರೆ ರೈತ ಸಂಕಷ್ಟಕ್ಕೆ ಸಿಲುಕುತ್ತಾನೆ. ವ್ಯಾಪಾರಿ ನಷ್ಟ ಅನುಭವಿಸುತ್ತಾನೆ. ಜೊತೆಗೆ ಸಾರ್ವಜನಿಕರು ಅಗತ್ಯ ಪ್ರಮಾಣದ ಹಣ್ಣು ಹಂಪಲು ಸಿಗದೆ ಹೈರಾಣಾಗುತ್ತಾರೆ. ಈ ಕೋವಿಡ್-19 ಯಾವುದೋ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಇವತ್ತು ಇಡೀ ಸಮಾಜ ಈ ಪಿಡುಗಿನ ವಿರುದ್ಧ ಹೋರಾಡಬೇಕಿದೆ ಎಂದು ಅವರು ಮನವಿ ಮಾಡಿದರು.

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ಮಾತನಾಡಿ, ರಾಜ್ಯದ 33 ಸಾವಿರ ವಕ್ಫ್ ಸಂಸ್ಥೆಗಳಿಗೂ ಸರಕಾರದ ಈ ಆದೇಶವನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಮಾರತ್-ಎ-ಶರಿಯಾ ನೀಡಿರುವ ಮಾರ್ಗಸೂಚಿಗಳನ್ನು ವಕ್ಫ್ ಸಂಸ್ಥೆಗಳಿಗೆ ಕಳುಹಿಸಲಾಗಿದೆ ಎಂದರು.

ಕೋವಿಡ್-19 ವಿರುದ್ಧದ ಹೋರಾಟದ ಕುರಿತು ಸರಕಾರ ಕೈಗೊಳ್ಳುತ್ತಿರುವ ಎಲ್ಲ ಕ್ರಮಗಳಿಗೂ ವಕ್ಫ್ ಬೋರ್ಡ್ ಪೂರಕವಾಗಿ ಕೆಲಸ ಮಾಡುತ್ತಿದೆ. ಸರಕಾರದ ನಿರ್ದೇಶನಗಳು ಹಾಗೂ ಇಮಾರತ್-ಎ-ಶರಿಯಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬ ಮುಸ್ಲಿಮರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.

ಮನೆಯಲ್ಲಿಯೇ ಸುರಕ್ಷಿತವಾಗಿದ್ದುಕೊಂಡು ಪವಿತ್ರ ರಮಝಾನ್ ಮಾಸದ ಉಪವಾಸ, ಪ್ರಾರ್ಥನೆಗಳನ್ನು ಆಚರಿಸಿ. ಯಾವುದೆ ಕಾರಣಕ್ಕೂ ಲಾಕ್‍ಡೌನ್ ಉಲ್ಲಂಘನೆ ಮಾಡಬೇಡಿ. ರಮಾಝಾನ್ ತಿಂಗಳಲ್ಲಿ ಬಡವರು, ಅಶಕ್ತರಿಗೆ ನೆರವು ನೀಡುವುದನ್ನು ಮುಂದುವರಿಸಿ. ಝಕಾತ್ ಹಾಗೂ ಸ್ವದಖಾ ಮೂಲಕ ನಿಮ್ಮ ಸಂಬಂಧಿಕರು, ನೆರೆಹೊರೆಯವರು ಹಾಗೂ ನೆರವಿನ ಅಗತ್ಯ ಇರುವಂತಹ ಸರ್ವ ಧರ್ಮೀಯರಿಗೂ ನೆರವು ನೀಡಿ ಎಂದು ಮುಹಮ್ಮದ್ ಯೂಸುಫ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಕ್ಫ್ ಬೋರ್ಡ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಸ್ಲಾಹುದ್ದೀನ್ ಗದ್ಯಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಬ್ಲೀಗ್ ಜಮಾಅತ್‍ಗೂ ನಮಗೂ ಸಂಬಂಧವಿಲ್ಲ

ನಮ್ಮ ರಾಜ್ಯದಲ್ಲಿ ತಬ್ಲೀಗ್ ಜಮಾಅತ್ ಎರಡು ಗುಂಪುಗಳಾಗಿ 2015ರಲ್ಲಿ ವಿಭಜನೆಯಾಗಿದೆ. ನಮ್ಮ ಕೇಂದ್ರ ಸ್ಥಾನ ಶಿವಾಜಿನಗರದ ಸುಲ್ತಾನ್ ಶಾ. ಕೊರೋನ ವೈರಸ್ ಮಹಾಮಾರಿಯ ಬಗ್ಗೆ ಸರಕಾರ ಮುನ್ನೆಚ್ಚರಿಕೆ ನೀಡುತ್ತಿದ್ದಂತೆ ನಮ್ಮ ಕೇಂದ್ರ ಸ್ಥಾನದಲ್ಲಿದ್ದ ಎಲ್ಲರನ್ನೂ ತೆರವುಗೊಳಿಸಲಾಗಿದೆ. ನಿಝಾಮುದ್ದೀನ್ ಕೇಂದ್ರಕ್ಕೂ ನಮಗೂ ಸಂಬಂಧವಿಲ್ಲ. ಮಾಧ್ಯಮಗಳಲ್ಲಿ ನಿಝಾಮುದ್ದೀನ್ ಪ್ರಕರಣವನ್ನು ಮುಂದಿಟ್ಟುಕೊಂಡು ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ಸರಿಯಲ್ಲ. ದೇಶದಲ್ಲಿ ಕೊರೋನ ಸೋಂಕು ದೃಢಪಟ್ಟಿರುವವರೆಲ್ಲ ಒಂದೆ ಸಮುದಾಯಕ್ಕೆ ಸೇರಿದ್ದಾರೆಯೇ ?. ಸೋಂಕಿಗೆ ಯಾವುದೆ ಧರ್ಮ, ಜಾತಿ ಇಲ್ಲ ಎಂಬುದು ಅರ್ಥ ಮಾಡಿಕೊಳ್ಳಬೇಕು.

-ಡಾ.ಮುಹಮ್ಮದ್ ಯೂಸುಫ್, ವಕ್ಫ್ ಬೋರ್ಡ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News