ಚಿಕ್ಕಮಗಳೂರು: ಗ್ರೀನ್‍ಝೋನ್ ಪಟ್ಟ ಕಾಯ್ದಕೊಳ್ಳಲು ಲಾಕ್‍ಡೌನ್ ನಿರ್ಬಂಧ ಮತ್ತಷ್ಟು ಬಿಗಿ

Update: 2020-04-16 13:18 GMT

ಚಿಕ್ಕಮಗಳೂರು, ಎ.16: ಕೊರೋನಾ ಸೋಂಕು ನಿಯಂತ್ರಣಕ್ಕೆ ಪ್ರಧಾನಿ ಮೋದಿ ದೇಶಾದ್ಯಂತ ಎರಡನೇ ಹಂತದ ಲಾಕ್‍ಡೌನ್ ಘೋಷಣೆ ಮಾಡಿದ್ದು, ಮೇ 3ರವರಗೆ ಲಾಕ್‍ಡೌನ್ ಜಾರಿಯನ್ನು ವಿಸ್ತರಣೆ ಮಾಡಿದ್ದಾರೆ. ಲಾಕ್‍ಡೌನ್ ವಿಸ್ತರಣೆ ಬೆನ್ನಲ್ಲೇ ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲಾದ್ಯಂತ ಜನರ ಓಡಾಟ, ವಾಹನಗಳ ಸಂಚಾರ ನಿಯಂತ್ರಣಕ್ಕೆ ಕೈಗೊಂಡಿರುವ ಬಂದೋಬಸ್ತ್ ಅನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಜಿಲ್ಲಾದ್ಯಂತ ಚಕ್‍ಪೋಸ್ಟ್‍ಗಳಲ್ಲಿ ಹೆಚ್ಚಿನ ಸಿಬ್ಬಂದಿ ನೇಮಿಸಿ ವಾಹನಗಳ, ಸಾರ್ವಜನಿಕರ ಪರಿಶೀಲನೆಯನ್ನು ತೀವ್ರಗೊಳಿಸಲಾಗಿದೆ.. ಅಗತ್ಯ ವಸ್ತುಗಳ ಸೇವೆ, ಸರಕು ಸಾಗಣೆ, ತುರ್ತು ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಉಳಿದಂತೆ ಜನಸಂಚಾರಕ್ಕೆ ಕಡಿವಾಣ ಹಾಕುವ ಬಂದೋಬಸ್ತ್‍ಅನ್ನು ಪೊಲೀಸರು ಎಂದಿನಂತೆ ಮುಂದುವರಿಸಿದ್ದಾರೆ. ಕೃಷಿ ಚಟುವಟಿಕೆ ಮೇಲಿನ ಲಾಕ್‍ಡೌನ್ ನಿರ್ಬಂಧ ಸಡಿಲಿಸಿರುವುದರಿಂದ ಹೊಲಗದ್ದೆಗಳಿಗೆ ಹೋಗುವ ರೈತರು ಹಾಗೂ ಅವರ ವಾಹನಗಳನ್ನು ಪಹಣಿ ದಾಖಲೆ ಪರಿಶೀಲಿಸಿ ಬಿಡುವ ತಪಾಸಣೆ ಆರಂಭವಾಗಿದೆ.

ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳಿಂದ ನಗರ ಸೇರಿದಂತೆ ಜಿಲ್ಲಾದ್ಯಂತ ಜನಸಂಚಾರ ಕಡಿಮೆಯಾಗಿದೆ. ವಿನಾಃಕಾರಣ ಸಂಚರಿಸುವರ ವಾಹನಗಳನ್ನು ವಶಕ್ಕೆ ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಲಾಕ್‍ಡೌನ್ ಉಲ್ಲಂಘಿಸಿ ಸಂಚರಿಸುತ್ತಿದ್ದ 1,500 ಹೆಚ್ಚು ದ್ವಿಚಕ್ರ ವಾಹನ ಹಾಗೂ 130ಕ್ಕೂ ಹೆಚ್ಚು ಕಾರುಗಳನ್ನು ಜಿಲ್ಲಾದ್ಯಂತ ಪೊಲೀಸರು ಇದುವರೆಗೂ ವಶಪಡಿಸಿಕೊಂಡಿದ್ದಾರೆ. ನಕಲಿ ಪಾಸ್‍ಗಳ ಮಾರಾಟ ಜಾಲ ಪತ್ತೆಯಾದ ಬಳಿಕ ಚೆಕ್‍ಪೋಸ್ಟ್‍ಗಳಲ್ಲಿ ಪಾಸ್‍ಗಳ ಅಸಲಿತನ ಪರಿಶೀಲಿಸುವ ಕೆಲಸಕ್ಕೂ ಪೊಲೀಸರು ಮುಂದಾಗಿದ್ದಾರೆ.

ನೆರೆಯ ಜಿಲ್ಲೆಯ ಜನರು ಜಿಲ್ಲೆಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದ್ದು, ಜಿಲ್ಲೆಯ ಗಡಿ ಪ್ರದೇಶದ ಚಕ್‍ಪೋಸ್ಟ್‍ಗಳನ್ನು ಇನಷ್ಟು ಬಿಗಿಗೊಳಿಸಲಾಗಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಬೇರಾವುದೇ ವಾಹನಗಳ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹಾಕಲಾಗಿದೆ. ಗಡಿ ಪ್ರದೇಶಕ್ಕೆ ಬರುವ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಪೊಲೀಸ್ ಇಲಾಖೆ ಅನುಮತಿ ಪತ್ರ ಪಡೆದ ವಾಹನಗಳಿಗೆ ಮಾತ್ರ ಜಿಲ್ಲೆಯಿಂದ ಹೊರ ಹೋಗಲು ಅವಕಾಶ ನೀಡಲಾಗುತ್ತಿದ್ದು, ಹೊರ ಜಿಲ್ಲೆಗಳಿಗೆ ಹೋಗಿ ಬಂದವರಿಗೆ 14 ದಿನಗಳ ಹೋಂ ಕ್ವಾರಂಟೈನ್ ಅನ್ನು ಕಡ್ಡಾಯ ಮಾಡಲಾಗಿದೆ. 

ಸಾರ್ವಜನಿಕರ ಅನುಕೂಲಕ್ಕಾಗಿ ಕೆಲವು ಸರಕಾರಿ ಕಚೇರಿಗಳನ್ನು ತೆರೆಯಲಾಗಿದ್ದು, ಇದುವರೆಗೂ ಮನೆಗಳಲ್ಲಿದ್ದ ಸಿಬ್ಬಂದಿ ಎಂದಿನಂತೆ ಗುರುವಾರದಿಂದ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ತುರ್ತು ಸರಕಾರಿ ಕೆಲಸ ಕಾರ್ಯಗಳಿಗೆ ಹೊರತುಪಡಿಸಿ ಉಳಿದಂತೆ ಸರಕಾರಿ ಕಚೇರಿಗಳಿಗೆ ಭೇಟಿನೀಡುವ ಸಾರ್ವಜನಿಕರ ಸಂಖ್ಯೆಯೂ ಎಂದಿನಂತೆ ಗುರುವಾರವೂ ವಿರಳವಾಗಿತ್ತು. ಸರ್ಕಾರದ ಆದೇಶದಂತೆ ಬಡವರು ಮತ್ತು ಕೊಳಚೆ ಪ್ರದೇಶದ ಜನರಿಗೆ 7,500 ಲೀಟರ್ ಹಾಲು ವಿತರಣೆ ಕಾರ್ಯ ಅಬಾಧಿತವಾಗಿ ನಡೆಯುತ್ತಿದೆಯಾದರೂ ಗ್ರಾಮೀಣ ಭಾಗದ ಸ್ಲಮ್‍ಗಳು, ಎಸ್ಸಿ ಎಸ್ಟಿ ಕಾಲನಿಗಳಿಗೆ ಹಾಲು ವಿತರಣೆಯ ಯೋಜನೆ ಮುಟ್ಟುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ಕೊರೊನಾ ವೈರಸ್ ಜಿಲ್ಲೆಗೆ ಪ್ರವೇಶಿಸದಂತೆ ತಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎರಡನೇ ಹಂತದ ಲಾಕ್‍ಡೌನ್ ಇನಷ್ಟು ಬಿಗಿಗೊಳಿಸಿದ್ದು, ಸಾರ್ವಜನಿಕರ ತಿರುಗಾಟಕ್ಕೆ ಬ್ರೇಕ್ ಬಿದ್ದಿದೆ. ಎ.20ರವರೆಗೆ ಜಿಲ್ಲೆ ಕೊರೋನಾ ಮುಕ್ತ ಜಿಲ್ಲೆಯಾಗಿದ್ದಲ್ಲಿ ಲಾಕ್‍ಡೌನ್ನಿಂದ ವಿನಾಯಿತಿ ಸಿಗಲಿದೆ ಎಂಬ ಕಾರಣಕ್ಕೆ ಜಿಲ್ಲಾಡಳಿತ ಲಾಕ್‍ಡೌನ್ ನಿರ್ಬಂಧಗಳನ್ನು ಕಾಯ್ದುಕೊಳ್ಳಲು ತೀವ್ರವಾಗಿ ಶ್ರಮಿಸುತ್ತಿದೆ.

ಜಿಲ್ಲೆಯ ಜನರ ಚಿತ್ತ ಎ.20ರತ್ತ

ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬರದಿರುವ ಹಿನ್ನೆಲೆಯಲ್ಲಿ ಎ.14ಕ್ಕೆ ಲಾಕ್‍ಡೌನ್‍ನಿಂದ ಕಾಫಿನಾಡು ವಿನಾಯಿತಿ ಪಡೆದುಕೊಳ್ಳಲಿದೆ ಎಂಬ ಆಶಾ ಭಾವನೆ ಹೊಂದಿದ್ದರು. ಮನೆಯಲ್ಲೇ ಲಾಕ್ ಆಗಿ ಬೇಸತ್ತಿದ್ದ ಜನರ ಮೊಗದಲ್ಲಿ ಮಂದಹಾಸಕ್ಕೂ ಕಾರಣವಾಗಿತ್ತು. ಆದರೆ, ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮೇ 3ರವರೆಗೂ ಲಾಕ್‍ಡೌನ್ ವಿಸ್ತರಿಸಿದ್ದು, ಎ.20ರ ಬಳಿಕ ಆಯಾ ಜಿಲ್ಲೆಯ ಪರಿಸ್ಥಿತಿ ಅವಲೋಕಿಸಿ ಲಾಕ್‍ಡೌನ್ ಸಡಲಿಕೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಿಎಂ ಕೂಡ ಇದನ್ನು ಒತ್ತಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಅವರೂ, ಚಿಕ್ಕಮಗಳೂರು ಜಿಲ್ಲೆ ಕೊರೋನಾ ಮುಕ್ತವಾಗಿದ್ದು, ಜಿಲ್ಲೆಯು ಗ್ರೀನ್ ಝೋನ್‍ನಲ್ಲಿರುವುದರಿಂದ ಎ.20ರವರೆಗೆ ಈ ಪರಿಸ್ಥಿತಿಯನ್ನು ಕಾಯ್ದುಕೊಂಡಲ್ಲಿ ಎ.21ರಿಂದ ಜಿಲ್ಲೆಗೆ ಲಾಕ್‍ಡೌನ್‍ನಿಂದ ವಿನಾಯಿತಿ ಸಿಗುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಪುನರುಚ್ಛರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರ ಚಿತ್ತ ಎ.20ರ ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News