ಲಾಕ್‌ಡೌನ್‌ನ ದುರ್ಬಳಕೆಯಾಗದಿರಲಿ

Update: 2020-04-17 04:15 GMT

ಯುದ್ಧ-ಮಾರಕ ಸಾಂಕ್ರಾಮಿಕ ಕಾಯಿಲೆ ಮೊದಲಾದ ಅನಿವಾರ್ಯ ಸಂದರ್ಭಗಳಲ್ಲಿ ಸರಕಾರ ‘ತುರ್ತುಪರಿಸ್ಥಿತಿ’ಯನ್ನು ಘೋಷಿಸುವುದಿದೆ. ಕೆಲವೊಮ್ಮೆ ಇವುಗಳನ್ನು ನೆಪ ಮಾಡಿಕೊಂಡು ಪ್ರಭುತ್ವ ತನ್ನ ದುರುದ್ದೇಶಗಳನ್ನು ಸಾಧಿಸಲು ತುರ್ತುಪರಿಸ್ಥಿತಿ ಹೇರುವುದೂ ಇದೆ. ಇಂದಿರಾಗಾಂಧಿ ಅವರು ‘ದೇಶದ ಆಂತರಿಕ ಭದ್ರತೆಗೆ ಅಪಾಯವಿದೆ’ ಎಂಬ ನೆಪವನ್ನು ಮುಂದಿಟ್ಟುಕೊಂಡು ತುರ್ತುಪರಿಸ್ಥಿತಿಯನ್ನು ಹೇರಿದ್ದರು. ಆದರೆ ಬಳಿಕ ನಡೆದದ್ದೇ ಬೇರೆ. ಈ ತುರ್ತು ಪರಿಸ್ಥಿತಿಯ ಸಂದರ್ಭದ ಲಾಭವನ್ನು ಹಲವರು ಹಲವು ರೀತಿಯಲ್ಲಿ ತಮ್ಮದಾಗಿಸಿಕೊಂಡರು. ಸಂಜಯ್‌ಗಾಂಧಿಯ ನೇತೃತ್ವದಲ್ಲಿ ಜನ ಸಾಮಾನ್ಯರ ಮೇಲೆ ದಮನಗಳು ನಡೆದವು. ಬಲವಂತವಾಗಿ ಜನರ ಮೇಲೆ ಪ್ರಭುತ್ವದ ಹಿತಾಸಕ್ತಿಯನ್ನು ಹೇರಲಾಯಿತು. ಇದೇ ಸಂದರ್ಭದಲ್ಲಿ, ಭೂಸುಧಾರಣೆಯಂತಹ ಕಾಯ್ದೆಗಳನ್ನು ಜಾರಿಗೊಳಿಸುವುದಕ್ಕೂ ಇದನ್ನು ಬಳಸಿಕೊಳ್ಳಲಾಯಿತು. ಜಮೀನ್ದಾರರಿಂದ ಭೂಮಿಯನ್ನು ಗೇಣಿದಾರರಿಗೆ ಕಿತ್ತುಕೊಡುವಲ್ಲಿ ತುರ್ತು ಪರಿಸ್ಥಿತಿ ಸಂದರ್ಭದ ಸರ್ವಾಧಿಕಾರವನ್ನು ಕೆಲವು ಮುಖ್ಯಮಂತ್ರಿಗಳು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡರು. ಆದರೆ ಪ್ರಜಾಪ್ರಭುತ್ವವನ್ನು ಅಮಾನತಿನಲ್ಲಿಟ್ಟು, ತುರ್ತುಪರಿಸ್ಥಿತಿಯನ್ನು ಹೇರುವ ಸಂದರ್ಭದಲ್ಲಿ ಅದರ ದುರ್ಬಳಕೆಯ ಸಂದರ್ಭವೇ ಅಧಿಕ. ಇಷ್ಟಕ್ಕೂ ತುರ್ತುಪರಿಸ್ಥಿತಿ ಹೇರುವಿಕೆಯೇ ಸಂವಿಧಾನದ ಬಹುದೊಡ್ಡ ದುರ್ಬಳಕೆಯಾಗಿದೆ.

 ಇಂದಿರಾಗಾಂಧಿಯ ಆಡಳಿತದ ಆನಂತರ ಈ ದೇಶದಲ್ಲಿ ಮತ್ತೆ ತುರ್ತುಪರಿಸ್ಥಿತಿಯನ್ನು ನೋಡುವ ಸಂದರ್ಭ ಜನರಿಗೆ ಒದಗಲಿಲ್ಲ. ಆದರೆ ಕಳೆದ ಆರುವರ್ಷಗಳಲ್ಲಿ ಹಲವು ಬಾರಿ ಪ್ರಜಾಸತ್ತೆಯ ವೇಷದಲ್ಲೇ ಈ ದೇಶದ ಜನರು ಪದೇ ಪದೇ ತುರ್ತುಪರಿಸ್ಥಿತಿಯ ಕಹಿ ಅನುಭವವನ್ನು ತನ್ನದಾಗಿಸಿಕೊಂಡಿದ್ದಾರೆ. ಇಂದು ಭಾರತದಲ್ಲಿ ‘ಸರಕಾರವನ್ನು ಪ್ರಶ್ನಿಸುವುದು, ಟೀಕಿಸುವುದು ದೇಶದ್ರೋಹ’ ಎಂಬಂತಾಗಿದೆ. ಇದು ತುರ್ತುಪರಿಸ್ಥಿತಿಯ ಪ್ರಮುಖ ಲಕ್ಷಣಗಳಲ್ಲಿ ಒಂದು. ಯಾಕೆಂದರೆ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರ ಸದಾ ಪ್ರಜೆಗಳಿಂದ ಪ್ರಶ್ನೆಗೊಳಗಾಗುತ್ತದೆ. ಸರಕಾರವನ್ನು ಟೀಕಿಸುವುದೆಂದರೆ ದೇಶವನ್ನು ಟೀಕಿಸಿದಂತೆ ಅಲ್ಲವೇ ಅಲ್ಲ. ಯಾರೆಲ್ಲ ದೇಶದ ಕುರಿತಂತೆ ಕಾಳಜಿಯನ್ನು ಹೊಂದಿದ್ದಾರೆಯೋ, ಅವರೆಲ್ಲರೂ ಸರಕಾರದ ನೀತಿಗಳನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಟೀಕಿಸಲೇಬೇಕಾಗುತ್ತದೆ. ಆದರೆ ಜನರು ನಿಧಾನಕ್ಕೆ ಅಂತಹ ಸ್ವಾತಂತ್ರವನ್ನು ಕಳೆದುಕೊಳ್ಳುತ್ತಿದ್ದಾರೆ. ಅಧಿಕೃತವಾಗಿ ಅಲ್ಲದೇ ಇದ್ದರೂ, ಪರೋಕ್ಷವಾಗಿ ದೇಶ ತುರ್ತುಪರಿಸ್ಥಿತಿಯ ಸನ್ನಿವೇಶಕ್ಕೆ ಮುಖಾಮುಖಿಯಾಗಿದೆ. ರಾತ್ರೋ ರಾತ್ರಿ ನಡೆದ ನೋಟು ನಿಷೇಧ ಮತ್ತು ಅನಂತರದ ಬೆಳವಣಿಗೆಗಳು ಕೂಡ ಇದರ ಭಾಗವೇ ಆಗಿದೆ. ಇಂದಿಗೂ ನೋಟು ನಿಷೇಧದ ವೈಫಲ್ಯವನ್ನು ಸರಕಾರ ಬಹಿರಂಗವಾಗಿ ಹೊತ್ತುಕೊಂಡಿಲ್ಲ. ಆಗಿರುವ ಅನಾಹುತಗಳಿಗೆ ಕ್ಷಮೆಯಾಚನೆಯನ್ನೂ ಮಾಡಿಲ್ಲ. ಪ್ರಜೆಗಳನ್ನು ಗೌರವಿಸುವ ಸರಕಾರವೇ ಆಗಿದ್ದರೆ, ನೋಟು ನಿಷೇಧದಿಂದ ಜನರಿಗಾದ ತೊಂದರೆ, ದೇಶದ ಆರ್ಥಿಕತೆಗೆ ಒದಗಿದ ದುಃಸ್ಥಿತಿ ಇವೆಲ್ಲವನ್ನು ಮುಂದಿಟ್ಟು ಸರಕಾರ ಅಥವಾ ಪ್ರಧಾನಿ ದೇಶದ ಕ್ಷಮೆಯಾಚಿಸಬೇಕಾಗಿತ್ತು. ಇಂದಿಗೂ ನೋಟು ನಿಷೇಧದ ವೈಫಲ್ಯವನ್ನು ಪ್ರಶ್ನಿಸಿದರೆ ತನಿಖಾ ಸಂಸ್ಥೆಗಳ ಮೂಲಕ ಅವರನ್ನು ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತದೆ. ಸರಕಾರವನ್ನು ಟೀಕಿಸುವ ಪತ್ರಿಕೆಗಳ ವಿರುದ್ಧವೇ ತನಿಖಾ ಸಂಸ್ಥೆಗಳನ್ನು ಛೂ ಬಿಡುವ ಪ್ರವೃತ್ತಿ ಕಳೆದ ಐದು ವರ್ಷಗಳಿಂದ ಹೆಚ್ಚಾಗುತ್ತಿದೆ. ಇದೀಗ ಸರಕಾರ ‘ಕೊರೋನ ವೈರಸ್’ನ್ನು ಮುಂದಿಟ್ಟುಕೊಂಡು ಘೋಷಿಸಲಾದ ಅಘೋಷಿತ ತುರ್ತುಪರಿಸ್ಥಿತಿಯನ್ನು ಸರಕಾರ ತನ್ನದೇ ಉದ್ದೇಶಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆಯೇ ಎಂಬ ಅನುಮಾನ ಜನರನ್ನು ಕಾಡತೊಡಗಿದೆ. ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಸದ್ಯದ ಸ್ಥಿತಿಯಲ್ಲಿ ಅನಿವಾರ್ಯ. ಇದರಲ್ಲಿ ಎರಡು ಮಾತಿಲ್ಲ. ಆದರೆ ಈ ಲಾಕ್‌ಡೌನ್ ಹೇರುವ ಮುನ್ನ ಅದು ಬೀರಬಹುದಾದ ಇನ್ನಿತರ ದುಷ್ಪರಿಣಾಮಗಳನ್ನು ಎದುರಿಸಲು ಎಲ್ಲ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸುವುದು ಕೇಂದ್ರ ಸರಕಾರದ ಕರ್ತವ್ಯವಾಗಿತ್ತು. ಪ್ರಧಾನಿ ಮೋದಿ ಒಂದು ದಿನದ ‘ಜನತಾ ಕರ್ಫ್ಯೂ’ ಘೋಷಿಸುವಾಗ ಜನರಿಗೆ ಎರಡು ದಿನಗಳ ಕಾಲಾವಕಾಶ ನೀಡಿದ್ದರು. ಆದರೆ ದೇಶಾದ್ಯಂತ ‘ಲಾಕ್‌ಡೌನ್’ ಘೋಷಿಸುವಾಗ ಯಾವುದೇ ಕಾಲಾವಕಾಶ ನೀಡಿರಲಿಲ್ಲ. ಕನಿಷ್ಠ ಸೌಹಾರ್ದವಾಗಿಯಾದರೂ ರಾಜ್ಯ ಸರಕಾರಗಳ ಜೊತೆಗೆ ಸಮಾಲೋಚನೆ ನಡೆಸಿರಲಿಲ್ಲ. ಪರಿಣಾಮವಾಗಿ, ಕೊರೋನಕ್ಕಿಂತ ಹಸಿವಿನಿಂದ ಸಾಯುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಜೊತೆಗೆ, ವಲಸೆ ಕಾರ್ಮಿಕರ ಸಮಸ್ಯೆ ಇಡೀ ಲಾಕ್‌ಡೌನ್ ಉದ್ದೇಶವನ್ನೇ ಅಣಕಿಸತೊಡಗಿದೆ. ಕಳೆದ ಮಂಗಳವಾರ ಈ ಲಾಕ್‌ಡೌನ್‌ನ್ನು ವಿಸ್ತರಿಸುವ ಸಂದರ್ಭದಲ್ಲಿ ಮಾತ್ರ ಕೇಂದ್ರ ಸರಕಾರ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಮಾಲೋಚನೆ ನಡೆಸಿತು. ‘ಮುಖ್ಯಮಂತ್ರಿಗಳ ಆಗ್ರಹದಂತೆ ಲಾಕ್‌ಡೌನ್‌ನ್ನು ವಿಸ್ತರಿಸಿದ್ದೇನೆ’ ಎಂದು ಪ್ರಧಾನಿ ದೇಶಕ್ಕೆ ಸ್ಪಷ್ಟಪಡಿಸಿದರು. ಲಾಕ್‌ಡೌನ್ ಘೋಷಿಸುವ ಸಂದರ್ಭದಲ್ಲಿ ಯಾವುದೇ ರಾಜ್ಯದ ಮುಖ್ಯಮಂತ್ರಿಯ ಜೊತೆಗೆ ಚರ್ಚಿಸದ ನರೇಂದ್ರಮೋದಿಯವರು, ವಿಸ್ತರಿಸುವ ಸಂದರ್ಭದಲ್ಲಿ ಮಾತ್ರ ಅದರ ಹೊಣೆಯನ್ನು ರಾಜ್ಯದ ತಲೆಗೆ ಯಾಕೆ ಕಟ್ಟಿದರು? ಯಾವುದೇ ಪೂರ್ವತಯಾರಿ ಇಲ್ಲದೆ ಘೋಷಿಸಲ್ಪಟ್ಟ ಲಾಕ್‌ಡೌನ್ ದುಷ್ಪರಿಣಾಮಗಳು ಒಂದೊಂದಾಗಿ ಹೊರಬರುತ್ತಿದ್ದಂತೆಯೇ ಪ್ರಧಾನಿ ಎಚ್ಚರಗೊಂಡಿದ್ದಾರೆ. ಈ ದುಷ್ಪರಿಣಾಮಗಳನ್ನು ತನ್ನ ತಲೆಗೆ ಹೊರಿಸಬಾರದು ಎನ್ನುವ ಕಾರಣಕ್ಕಾಗಿ, ರಾಜ್ಯಗಳ ಜೊತೆಗೆ ಸಮಾಲೋಚನೆ ನಡೆಸುವ ಪ್ರಹಸನ ನಡೆಸಿದರು.

ಈ ಲಾಕ್‌ಡೌನ್‌ನ್ನು ಕೇಂದ್ರ ಸರಕಾರ ಕೊರೋನ ವೈರಸನ್ನು ತಡೆಯಲು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ ಎಂದರೆ ನಿರಾಸೆಯಾಗುತ್ತದೆ. ಮೂರು ಬಾರಿ ಟಿವಿಯಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಂಡು ದೇಶವನ್ನುದ್ದೇಶಿಸಿ ಮಾತನಾಡಿದರಾದರೂ, ಕೊರೋನಾ ವಿರುದ್ಧ ಕಾರ್ಯಾಚರಣೆಯ ಯಾವ ವಿವರಗಳನ್ನೂ ಅವರು ನೀಡಲಿಲ್ಲ. ಇಂದು ಕೊರೋನ ವಿರುದ್ಧ ಆಯಾ ರಾಜ್ಯ ಸರಕಾರಗಳೇ ಹೋರಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಬೇಕಾಗಿರುವ ಅಗತ್ಯದ ಅನುದಾನಗಳನ್ನು ರಾಜ್ಯಸರಕಾಗಳು ಕೇಳುತ್ತಿದ್ದರೂ ಈ ಬಗ್ಗೆ ಕೇಂದ್ರ ವೌನ ತಾಳಿದೆ. ಕೇವಲ ಲಾಕ್‌ಡೌನ್ ಕಾರಣದಿಂದಲೇ ಕೊರೋನ ತೊಲಗುತ್ತದೆ ಎಂದು ಕೇಂದ್ರ ಸರಕಾರ ಭಾವಿಸಿದಂತಿದೆ. ಇದೇ ಸಂದರ್ಭದಲ್ಲಿ ಸರಕಾರ ಲಾಕ್‌ಡೌನ್‌ನ್ನು ತನ್ನ ರಾಜಕೀಯ ಉದ್ದೇಶಗಳಿಗೆ ದುರ್ಬಳಕೆ ಮಾಡುತ್ತಿದೆಯೇ ಎಂದು ದೇಶ ಶಂಕಿಸುವಂತಾಗಿದೆ. ಲಾಕ್‌ಡೌನ್ ಸಂದರ್ಭವನ್ನು ಬಳಸಿಕೊಂಡು ಹಲವೆಡೆ ಸಿಎಎ ವಿರುದ್ಧದ ಹೋರಾಟಗಾರರನ್ನು ಬಂಧಿಸುವ ಕೆಲಸ ಮುಂದುವರಿಯುತ್ತಿದೆ. ಹಾಗೆಯೇ ಸರಕಾರದ ನೀತಿಯ ವಿರುದ್ಧ ಮಾತನಾಡುವ ಪತ್ರಕರ್ತರ ಮೇಲೆ ದೌರ್ಜನ್ಯ ಎಸಗುವುದಕ್ಕೂ ಲಾಕ್‌ಡೌನ್ ಸಂದರ್ಭ ದುರ್ಬಳಕೆಯಾಗುತ್ತಿದೆ. ಆದಿತ್ಯನಾಥ್ ಸರಕಾರ ಕೊರೋನ ಕುರಿತಂತೆ ತಳೆದ ಬೇಜವಾಬ್ದಾರಿ ನಿಲುವನ್ನು ವರದಿ ಮಾಡಿದ ಕಾರಣಕ್ಕಾಗಿ ‘ದಿ ವೈರ್’ ಮುಖ್ಯಸ್ಥರ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿದರು ಮಾತ್ರವಲ್ಲ, ಲಾಕ್‌ಡೌನ್ ಜಾರಿಯಲ್ಲಿರುವಾಗಲೇ ನೂರಾರು ಕಿಲೋಮೀಟರ್ ದೂರದಲ್ಲಿರುವ ಕೋರ್ಟ್‌ಗೆ ಹಾಜರಾಗಲು ನ್ಯಾಯಾಧೀಶರು ಆದೇಶಿಸಿದರು. ದಿ ವೈರ್ ಸರಕಾರದ ‘ಜನ ವಿರೋಧಿ’ ನೀತಿಗಳನ್ನು ಹಲವು ವರ್ಷಗಳಿಂದ ಬಹಿರಂಗಗೊಳಿಸುತ್ತಾ ಬಂದಿದೆ. ಇದೀಗ ಲಾಕ್‌ಡೌನ್ ಸಂದರ್ಭವನ್ನು ಬಳಸಿಕೊಂಡು ಸರಕಾರ ಅದರ ಮುಖ್ಯಸ್ಥರನ್ನು ಬಂಧಿಸುವ ಸಂಚನ್ನು ನಡೆಸಿದೆ. ಲಾಕ್‌ಡೌನ್‌ನ್ನು ಬಳಸಿಕೊಂಡೇ ದಲಿತ ಪರ ಹೋರಾಟಗಾರ, ಪ್ರಖರ ಅಂಬೇಡ್ಕರ್‌ವಾದಿ ಆನಂದ್‌ತೇಲ್ತುಂಬ್ಡೆಯನ್ನು ಕೂಡ ಸರಕಾರ ಬಂಧಿಸಿತು. ಈ ಸಂದರ್ಭದಲ್ಲಿ ಜನಪರ ಹೋರಾಟಗಾರರು ಬೀದಿಗಿಳಿಯಲಾರರು ಎನ್ನುವುದನ್ನು ಅರಿತುಕೊಂಡೇ ಆತುರಾತುರವಾಗಿ ಅವರ ಬಂಧನ ನಡೆದಿದೆ. ಕೊರೋನ ವೈರಸ್ ವಿರುದ್ಧ ಕಾರ್ಯಯೋಜನೆಗಳನ್ನು ರೂಪಿಸಲು ಬಳಕೆಯಾಗಬೇಕಾದ ಲಾಕ್‌ಡೌನ್, ಪ್ರಜಾಸತ್ತೆಯ ಪರವಾಗಿ ಧ್ವನಿಯೆತ್ತುತ್ತಾ ಬರುತ್ತಿರುವ ಮಾನವ ಹಕ್ಕು ಹೋರಾಟಗಾರರ ದಮನಕ್ಕೆ ಬಳಕೆಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ. ಲಾಕ್‌ಡೌನ್ ಮುಗಿಯುವಷ್ಟರಲ್ಲಿ ಕೊರೋನ ಅಳಿಯುತ್ತದೆಯೋ ಉಳಿಯುತ್ತಿದೆಯೋ ಆದರೆ, ಈ ದೇಶದ ಅರ್ಥ ವ್ಯವಸ್ಥೆಯ ಜೊತೆ ಜೊತೆಗೇ ಸಂವಿಧಾನವೂ ಅರ್ಥ ಕಳೆದುಕೊಳ್ಳುವ ಎಲ್ಲ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News