ಬೇಜವಾಬ್ದಾರಿಗೆ ಬೆಲೆ ತೆರುತ್ತಿರುವ ರಾಜ್ಯ

Update: 2020-04-18 05:37 GMT

ಕೊರೋನ ಸೋಂಕು ರಾಜ್ಯದಲ್ಲಿ ದಿನೇ ದಿನ ವ್ಯಾಪಿಸುತ್ತಿದೆ. ಸಾಧಾರಣವಾಗಿ ಮಂಗಳೂರಿನಂತಹ ನಗರಗಳಲ್ಲಿ ಸುದ್ದಿ ಮಾಡಬೇಕಾಗಿದ್ದ ಕೊರೋನ, ಬೆಳಗಾವಿ, ಕಲಬುರಗಿಯಂತಹ ಜಿಲ್ಲೆಗಳಲ್ಲಿ ತೀವ್ರವಾಗಿ ಹರಡುತ್ತಿರುವುದು ಆಘಾತಕಾರಿಯಾಗಿದೆ. ವಿಮಾನ ನಿಲ್ದಾಣಗಳ ಮೂಲಕ, ಶ್ರೀಮಂತರಿಂದ ಹರಡುವ ವೈರಸ್ ಎಂದೇ ನಂಬಲಾಗಿದ್ದರೂ, ಮನುಷ್ಯನ ಮೂರ್ಖತನ, ಅವಿವೇಕತನದ ಫಲವಾಗಿ ಅದು ತಳಸ್ತರದಲ್ಲೂ ವಿಸ್ತರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಭಾರತದ ಮಟ್ಟಿಗೆ ಕೊರೋನ ವೈರಸ್, ತಾನಾಗಿಯೇ ಆಹ್ವಾನಿಸಿಕೊಂಡ ಮಹಾಮಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಮೆರಿಕ, ಇಂಗ್ಲೆಂಡ್, ಚೀನಾದಂತಹ ದೇಶಗಳಿಗೆ ಸೀಮಿತವಾಗಬೇಕಾಗಿದ್ದ ರೋಗವನ್ನು ಭಾರತ, ಬೇಜವಾಬ್ದಾರಿಯಿಂದ ತಾನಾಗಿಯೇ ಆಹ್ವಾನಿಸಿಕೊಂಡಿತು. ವಿದೇಶಗಳಲ್ಲಿ ಕೊರೋನ ಸಾಂಕ್ರಾಮಿಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಭಾರತ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗಿತ್ತು. ಫೆಬ್ರವರಿ ಆರಂಭದಿಂದಲೇ ವಿದೇಶದಿಂದ ಆಗಮಿಸುತ್ತಿರುವ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್ ಏರ್ಪಡಿಸಿದ್ದರೆ ಇಂದು ಇಡೀ ಭಾರತವನ್ನು ‘ಲಾಕ್‌ಡೌನ್’ ಮಾಡಬೇಕಾದ ಅಗತ್ಯವಿರಲಿಲ್ಲ. ಪ್ರಧಾನಿಯವರು ತಮ್ಮ ಭಾಷಣದಲ್ಲಿ ಅದೇನೇ ಸಮರ್ಥನೆಯನ್ನು ಕೊಟ್ಟರೂ ವಾಸ್ತವ ಅದಕ್ಕೆ ವ್ಯತಿರಿಕ್ತವಾಗಿ ಅವರ ವಿರುದ್ಧ ಮಾತನಾಡುತ್ತಿದೆ.

‘ಒಂದೇ ಒಂದು ಕೊರೋನ ಪ್ರಕರಣ ವರದಿಯಾಗುವ ಮೊದಲೇ ಏರ್‌ಪೋರ್ಟ್‌ನಲ್ಲಿ ಸ್ಕ್ರೀನಿಂಗ್ ಆರಂಭಿಸಲಾಗಿತ್ತು’ ಎಂದು ಮೋದಿಯವರು ಹೇಳುತ್ತಿದ್ದಾರೆ. ಆದರೆ ಭಾರತದಲ್ಲಿ ಮೊದಲ ಕೊರೋನ ವೈರಸ್ ಪ್ರಕರಣ ಜ. 30ರಂದು ವರದಿಯಾಗಿತ್ತು. ಚೀನಾದಿಂದ ಕೇರಳಕ್ಕೆ ಮರಳಿದ್ದ ವಿದ್ಯಾರ್ಥಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಕೊರೋನ ಕುರಿತಂತೆ ವಿಶ್ವಸಂಸ್ಥೆಯೂ ಜನವರಿಯಲ್ಲೇ ವಿಶ್ವವನ್ನು ಎಚ್ಚರಿಸಿತ್ತು. ಆದರೆ ಭಾರತ ಕೊರೋನವನ್ನು ಗಂಭೀರವಾಗಿ ಸ್ವೀಕರಿಸಿ ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದು ಫೆಬ್ರವರಿ 26ರ ಅನಂತರ. ಮಾರ್ಚ್ ನಾಲ್ಕರಂದು ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮತ್ತು ಬಂದರುಗಳಲ್ಲಿ ಥರ್ಮಲ್ ಇಮೇಜಿಂಗ್ ನಡೆಸಲಾಗುವುದು ಎಂದು ಸರಕಾರ ಪ್ರಕಟಿಸಿತು. ಆದರೆ ಅಷ್ಟರಲ್ಲೇ ಕೊರೋನ ಭಾರತದೊಳಗೆ ನುಸುಳಿಯಾಗಿತ್ತು. ಆದರೂ ಭಾರತದಲ್ಲಿ ಅದನ್ನು ತಳಸ್ತರಕ್ಕೆ ವಿಸ್ತರಿಸದಂತೆ ನೋಡಿಕೊಳ್ಳುವ ಅವಕಾಶವಿತ್ತು. ಆದರೆ ಭಾರತದಲ್ಲಿ ಅದಕ್ಕೆ ಅತಿ ದೊಡ್ಡ ಸವಾಲು ಎದುರಾದುದು ವಿವಿಧ ಧರ್ಮದೊಳಗಿರುವ ಅತೀ ಧಾರ್ಮಿಕರಿಂದ. ಮತ್ತು ಮಾಧ್ಯಮಗಳ ಧರ್ಮ ರಾಜಕಾರಣದಿಂದ.

ಭಾರತದಲ್ಲಿ ಹೇಗೆ ಧಾರ್ಮಿಕ ಆಚರಣೆಗಳೇ ಜನರ ಪಾಲಿಗೆ ಮುಳುವಾಗುತ್ತದೆ ಎನ್ನುವುದು ಬಹಿರಂಗವಾಗಲು ತಬ್ಲೀಗಿ ಸಮಾವೇಶ ಮುನ್ನೆಲೆಗೆ ಬರಬೇಕಾಯಿತು. ಬಹುಶಃ ಆ ಪ್ರಕರಣ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಸಮಾವೇಶ ಅಲ್ಲದೇ ಹೋಗಿದ್ದರೆ, ಮಾಧ್ಯಮಗಳು ಅದನ್ನೂ ಮುಚ್ಚಿ ಹಾಕಿ ಬಿಡುತ್ತಿತ್ತೋ ಏನೋ. ತಬ್ಲೀಗಿ ಸಮಾವೇಶ ನಡೆದಿರುವುದು ಸರಕಾರದ ಅನುಮತಿಯ ಮೇರೆಗೆ ಎಂದ ಮೇಲೆ, ಕೇವಲ ಆ ಧರ್ಮದ ಸಂಘಟಕರನ್ನು ಟೀಕಿಸುವುದರಿಂದ ಸರಕಾರ ಹೊಣೆಗಾರಿಕೆಯಿಂದ ಜಾರಿಕೊಳ್ಳುವಂತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತಬ್ಲೀಗಿ ಸಮಾವೇಶ ನಡೆದ ಬಳಿಕವೂ ಈ ದೇಶದ ವಿವಿಧೆಡೆ ವಿವಿಧ ಧಾರ್ಮಿಕ ಆಚರಣೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಿತು ಮತ್ತು ಮಾಧ್ಯಮಗಳು ಮಾತ್ರ ತಬ್ಲೀಗಿಸಮಾವೇಶವನ್ನೇ ನಿರಂತರವಾಗಿ ಚ್ಯೂಯಿಂಗಂನಂತೆ ಜಗಿಯತೊಡಗಿತು. ರಾಮನವಮಿಯ ದಿನ ದೇಶದ ವಿವಿಧ ದೇವಸ್ಥಾನಗಳಲ್ಲಿ ಸುರಕ್ಷಿತ ಅಂತರವನ್ನು ಮೀರಿ ಜನಜಂಗುಳಿ ಸೇರಿರುವುದು, ಮಾತಾ ಅಮೃತಾನಂದಮಯಿ, ಜಗ್ಗಿ ವಾಸುದೇವ್ ಮೊದಲಾದ ಸತ್ಸಂಗಿ ಸಮಾವೇಶಗಳಲ್ಲಿ ವಿದೇಶಿಯರು ನೆರೆದಿರುವುದು, ಗುರುದ್ವಾರದಲ್ಲ್ಲಿ ಸೋಂಕಿತರು ಸೇರಿರುವುದೆಲ್ಲವನ್ನು ಮಾಧ್ಯಮಗಳು ಮುಚ್ಚಿ ಹಾಕಿ, ಒಂದು ನಿರ್ದಿಷ್ಟ ಧರ್ಮದ ವಿರುದ್ಧ ದ್ವೇಷ ಹರಡುವುದಕ್ಕಾಗಿಯಷ್ಟೇ ಕೊರೋನವನ್ನು ಬಳಸಿಕೊಂಡಿತು.

ಇದರ ಪರಿಣಾಮವಾಗಿ ದೇಶಾದ್ಯಂತ ಮುಸ್ಲಿಮರು ಜಾಗೃತರಾದರು. ಮಸೀದಿಗಳಿಗೆ ಕಡ್ಡಾಯವಾಗಿ ಬೀಗ ಜಡಿದರು. ಆದರೆ ಈ ಜಾಗೃತಿ ಇದರ ಧರ್ಮೀಯರಲ್ಲಿ ಮೂಡುವುದಕ್ಕೆ ತಡವಾಯಿತು. ಅಥವಾ ಇನ್ನೂ ಅವರಲ್ಲಿ ಮೂಡಿಯೇ ಇಲ್ಲ ಎನ್ನುವುದಕ್ಕೆ ಕರ್ನಾಟಕದ ಕೊರೋನಹಾಟ್‌ಸ್ಪಾಟ್ ಎಂದು ಗುರುತಿಸಲ್ಪಟ್ಟಿರುವ ಕಲಬುರಗಿಯ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ರಥೋತ್ಸವ ಜಾತ್ರೆಯೇ ಉದಾಹರಣೆಯಾಗಿದೆ. ವಿಪರ್ಯಾಸವೆಂದರೆ, ‘ತಬ್ಲೀಗಿ ವೈರಸ್’ ಎನ್ನುವ ಹೊಸ ವೈರಸ್‌ನ್ನು ಸಂಶೋಧನೆ ಮಾಡಿದ ಯಾವುದೇ ಪತ್ರಿಕೆಗಳು ಮತ್ತು ಟಿವಿ ವಾಹಿನಿಗಳಿಗೆ ಈ ರಥೋತ್ಸವದ ಹೆಸರಲ್ಲಿ ನಡೆದ ಅನಾಹುತ ಮುಖ್ಯವೆನಿಸಲೇ ಇಲ್ಲ. ಮಾಧ್ಯಮಗಳು ಕೊರೋನ ಸೋಂಕಿಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ಧರ್ಮದ ಜನರ ಕಾವಲು ಕಾಯುವ ಕೆಲಸವನ್ನಷ್ಟೇ ಮಾಡಿದ ಪರಿಣಾಮವನ್ನು ರಾಜ್ಯ ಬೇರೆ ಬೇರೆ ರೀತಿಯಲ್ಲಿ ಅದರ ದುಷ್ಫಲವನ್ನು ಅನುಭವಿಸುತ್ತಿದೆ.

ಕೊರೋನ ಒಂದು ರಾಜಕೀಯ ವೈರಸ್ ಆಗಿಯಷ್ಟೇ ಜನರಿಗೆ ನೋಡಲು ಸಾಧ್ಯವಾಗಿದೆ. ಆದುದರಿಂದಲೇ, ‘ಮಸೀದಿಯಲ್ಲಷ್ಟೇ ಜನರು ಸೇರಬಾರದು, ದೇವಸ್ಥಾನ, ಜಾತ್ರೆಗಳಲ್ಲಿ ಸೇರಿದರೆ ಯಾವುದೇ ತೊಂದರೆಯಿಲ್ಲ’ ಎಂದು ಅಮಾಯಕರು ಭಾವಿಸುವಂತಾಗಿದೆ. ಪರಿಣಾಮವಾಗಿ, ಕೊರೋನಾದ ಕುರಿತಂತೆ ತೀವ್ರ ಆತಂಕ ಪಡುತ್ತಿರುವ ಸಂದರ್ಭದಲ್ಲೇ ಕಲಬುರ್ಗಿಯ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು 500ರಷ್ಟು ಜನರು ಸೇರಿ ರಥೋತ್ಸವವನ್ನು ನಡೆಸಿದ್ದಾರೆ. ಇಂತಹದೊಂದು ಜಾತ್ರೆ ನಡೆಯಬೇಕಾದರೆ ಆ ಕ್ಷೇತ್ರದ ಶಾಸಕರು ಅಥವಾ ಸ್ಥಳೀಯ ಜನನಾಯಕರ ಗಮನಕ್ಕೆ ಸಹಜವಾಗಿಯೇ ತರಲಾಗುತ್ತದೆ. ಜೊತೆಗೆ ಇಂತಹ ಜಾತ್ರೆ ನಡೆಸಬೇಕಾದರೆ ಸ್ಥಳೀಯ ಸಂಸ್ಥೆಯ ಪರವಾನಿಗೆಯನ್ನು ಪಡೆಯುವುದು ಅತ್ಯಗತ್ಯ. ಕದ್ದು ಮುಚ್ಚಿ ಈ ಜಾತ್ರೆ ನಡೆಯಲು ಸಾಧ್ಯವೇ ಇಲ್ಲ. ಅಂದರೆ, ಅಧಿಕಾರಿಗಳು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಜಂಟಿಯಾಗಿ ಈ ಜಾತ್ರೆಯನ್ನು ನಡೆಸಿದ್ದಾರೆ. ಅವರಿಗೆ ಕೊರೋನದ ಗಂಭೀರತೆಯ ಅರಿವೇ ಇಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಇಂತಹ ಜಾತ್ರೆ, ನೇಮೋತ್ಸವಗಳು ತಳಸ್ತರದಲ್ಲಿ ಇನ್ನೂ ನಡೆಯುತ್ತಲೇ ಇದೆಯಾದರೂ, ಮಾಧ್ಯಮಗಳು ಉದ್ದೇಶ ಪೂರ್ವಕವಾಗಿ ಕುರುಡಾಗಿ ವರ್ತಿಸುತ್ತಿವೆ. ಇದರ ಪರಿಣಾಮವಾಗಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಇದರ ಬೆನ್ನಿಗೇ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಪುತ್ರನ ಮದುವೆಯೂ ಸುದ್ದಿಯಾಗಿದೆ.

ಇಲ್ಲಿ ‘ಸುರಕ್ಷಿತ ಅಂತರ’ವನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ‘ಬಂದ್’ ಘೋಷಣೆ ಮಾಡಿದ ಮರುದಿನವೇ ಬಿಜೆಪಿ ಶಾಸಕರೊಬ್ಬರ ಪುತ್ರನ ಮದುವೆ ಅದ್ದೂರಿಯಾಗಿ ನಡೆದಿತ್ತು ಮತ್ತು ಸ್ವತಃ ಮುಖ್ಯಮಂತ್ರಿ ಅದರಲ್ಲಿ ಭಾಗವಹಿಸಿರುವುದು ಟೀಕೆಗೆ ಒಳಗಾಗಿತ್ತು. ಬಿಜೆಪಿ ಶಾಸಕನೊಬ್ಬ ಇತ್ತೀಚೆಗೆ ತನ್ನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿ ಸುದ್ದಿಯಾಗಿದ್ದರು. ಇಲ್ಲಿ ಕುಮಾರಸ್ವಾಮಿ ತನ್ನ ಪುತ್ರನ ಮದುವೆಯನ್ನು ತೀರಾ ಸರಳವಾಗಿ ಆಚರಿಸಿದ್ದಾರೆ. ಆದರೂ, ಈ ಸಂದರ್ಭದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿ ತನ್ನ ಪುತ್ರನ ಮದುವೆಯನ್ನು ಮುಂದೂಡಿ ಇಡೀ ರಾಜ್ಯಕ್ಕೆ ಮಾದರಿಯಾಗುವ ಅವಕಾಶವಿತ್ತು. ಆ ಅವಕಾಶವನ್ನು ಕುಮಾರಸ್ವಾಮಿ ಕಳೆದುಕೊಂಡರು. ಜನನಾಯಕನೇ ತನ್ನ ಪುತ್ರನ ಮದುವೆಯನ್ನು ಮುಂದೂಡದೆ ಇರುವಾಗ, ಇತರ ಸಾಮಾನ್ಯ ಜನರಿಂದ ಇದನ್ನು ನಿರೀಕ್ಷಿಸುವುದು ಹೇಗೆ? ಇಡೀ ರಾಜ್ಯ ಲಾಕ್‌ಡೌನ್ ಮೂಲಕ ತತ್ತರಿಸುತ್ತಿದ್ದರೂ ಹೇಗೆ ಜನನಾಯಕರು ಮತ್ತು ಧಾರ್ಮಿಕ ಮುಖಂಡರ ಬೇಜವಾಬ್ದಾರಿಗಳಿಂದ ಅದೇ ಲಾಕ್‌ಡೌನ್ ವಿಫಲವಾಗಬಹುದು ಎನ್ನುವುದಕ್ಕೆ ಇವೆಲ್ಲ ಸದ್ಯದ ಉದಾಹರಣೆಗಳಾಗಿವೆ. ರಾಜ್ಯದಲ್ಲಿ ಗುರುವಾರ ಒಂದೇ ದಿನಕ್ಕೆ 36 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿತ್ತು. ಶುಕ್ರವಾರ ಒಂದೇ ದಿನ 44 ಜನರಲ್ಲಿ ವೈರಸ್ ಪತ್ತೆಯಾಗಿದೆ. ಬೇಜವಾಬ್ದಾರಿಗಳು ಹೆಚ್ಚಿದಷ್ಟೂ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಗುತ್ತದೆ ಎನ್ನುವ ಎಚ್ಚರಿಕೆಯನ್ನು ಮಾಧ್ಯಮಗಳು ನಾಡಿಗೆ ನಿಷ್ಪಕ್ಷಪಾತವಾಗಿ ಸಾರದೇ ಇದ್ದರೆ ಮುಂದೊಂದು ದಿನ ರಾಜ್ಯ ಅದಕ್ಕಾಗಿ ಭಾರೀ ಬೆಲೆ ತೆರಬೇಕಾದೀತು ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News