ಮದ್ಯಕ್ಕೆ ಪರ್ಯಾಯವಾಗಿ ನಿದ್ರೆ ಮಾತ್ರೆ!: ಔಷಧ ಅಂಗಡಿಗಳಿಗೆ ಅಲೆಯುತ್ತಿದ್ದಾರೆ ಮದ್ಯ ಪ್ರಿಯರು

Update: 2020-04-18 16:29 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.18: ಕೊರೋನ ಲಾಕ್‍ಡೌನ್ ಘೋಷಿಸಿದ ನಂತರ ಮದ್ಯ ದೊರೆಯದೇ ಕಂಗಾಲಾಗಿರುವ ಮದ್ಯ ವ್ಯಸನಿಗಳು ಔಷಧಿ ಅಂಗಡಿಗಳ ಮುಂದೆ ನಿಂತು ನಿದ್ರೆ ಮಾತ್ರೆ ಕೊಡುವಂತೆ ಗೋಗರೆಯುತ್ತಿದ್ದಾರೆ. ಮದ್ಯವಿಲ್ಲದೇ ನಿದ್ರೆ ಬಾರದ ಅನೇಕ ಮದ್ಯ ವ್ಯಸನಿಗಳು ಮದ್ಯಕ್ಕೆ ಪರ್ಯಾಯವಾಗಿ ನಿದ್ರೆ ಮಾತ್ರೆಗಳಿಗೆ ಮೊರೆ ಹೋಗಿದ್ದು, ನಿದ್ರೆ ಮಾತ್ರೆಗಾಗಿ ಔಷಧಿ ಅಂಗಡಿಗಳಿಗೆ ಅಲೆಯುತ್ತಿದ್ದಾರೆ.

ಕೆಲವರು ತಮ್ಮ ಕುಟುಂಬ ವೈದ್ಯರಿಂದ ನಿದ್ರೆ ಮಾತ್ರೆ ಬರೆಸಿಕೊಂಡು ಬಂದು ಔಷಧಿ ಅಂಗಡಿಗಳಲ್ಲಿ ಮಾತ್ರೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನು ಕೆಲವರು ನೇರವಾಗಿ ಔಷಧಿ ಅಂಗಡಿಗಳಿಗೆ ಹೋಗಿ ನಿದ್ರೆ ಮಾತ್ರೆ ಕೊಡುವಂತೆ ಪೀಡಿಸುತ್ತಿದ್ದಾರೆ ಎಂಬುವುದು ವರದಿಯಾಗಿದೆ.

"ಮದ್ಯ ದೊರೆಯದ ದಿನದಿಂದ ಪ್ರತಿದಿನ ವ್ಯಸನಿಗಳು ನಿದ್ರೆ ಮಾತ್ರೆ ಕೊಡುವಂತೆ ಔಷಧಿ ಅಂಗಡಿಗಳಿಗೆ ಬಂದು ಪೀಡಿಸುತ್ತಾರೆ. ಎಷ್ಟೇ ದುಡ್ಡಾದರೂ ಅಡ್ಡಿ ಇಲ್ಲ, ಕೊಡುತ್ತೇನೆ. ದಯವಿಟ್ಟು ಮಾತ್ರೆ ಕೊಡಿ ಬೇಡಿಕೊಳ್ಳುತ್ತಾರೆ" ಎಂದು ಅಪೊಲೋ ಔಷಧಿ ಅಂಗಡಿಗೆ ಸೇರಿದ ಫಾರ್ಮಸಿಯೊಂದರ ಮಾಲಕ ಸಿದ್ದೇಶ್ ಹೇಳುತ್ತಾರೆ.

ಬೆಂಗಳೂರು ನಗರದಲ್ಲಿ ಅನೇಕರು ನಿದ್ರೆ ಮಾತ್ರೆ ನೀಡುವಂತೆ ಕೇಳಿಕೊಂಡು ಔಷಧಿ ಅಂಗಡಿಗಳಿಗೆ ಓಡಾಡುತ್ತಿರುವುದು ನಿಜ. ಆದರೆ, ಬಹುತೇಕ ಅಂಗಡಿಗಳಲ್ಲಿ ಪ್ರಿಸ್ಕ್ರಿಪ್ಷನ್ ಇಲ್ಲದೇ ನಿದ್ರೆ ಮಾತ್ರೆ ಕೊಡುವುದಿಲ್ಲ. ಎಲ್ಲೋ ಕೆಲವರು ಪರಿಚಯದ ಕಾರಣದಿಂದ ನಿದ್ರೆ ಮಾತ್ರೆಗಳನ್ನು ಕೊಟ್ಟಿರುವ, ಕೊಡುತ್ತಿರುವ ಸಾಧ್ಯತೆಗಳಿವೆ ಎಂದು ಬಿಬಿಎಂಪಿ ವೈದ್ಯಾಧಿಕಾರಿ ಡಾ. ಭಾಗ್ಯಲಕ್ಷ್ಮೀ ಹೇಳುತ್ತಾರೆ.

ಒಂದು ವೇಳೆ ತುಂಬಾ ಪರಿಚಯದವರು ಎಂಬ ಕಾರಣಕ್ಕೆ ನಿದ್ರೆ ಮಾತ್ರೆಗಳು ಸಿಕ್ಕರೂ ಅವುಗಳಿಂದ ಮುಂಬರುವ ದಿನಗಳಲ್ಲಿ ತಮ್ಮ ದೇಹದ ಕೇಂದ್ರ ನರ ವ್ಯವಸ್ಥೆಗೆ ಪೆಟ್ಟು ಎಂಬುದನ್ನು ಮದ್ಯ ವ್ಯಸನಿಗಳು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂಬುದು ಹಲವು ವೈದ್ಯರ ಮಾತು.

ನಿದ್ರೆ ಮಾತ್ರೆಗಳು ಅಪಾಯಕಾರಿ: ನಿದ್ರೆ ಮಾತ್ರೆಗಳಲ್ಲಿ ಆಲ್‍ಪ್ರೊಝೋಲಾಮ್, ಕ್ಲೊನೊಝಿಪಾಮ್‍ನಂತಹ ಅಂಶಗಳಿರುತ್ತವೆ. ಮಾತ್ರೆಯನ್ನು ನಿದ್ರಾಹೀನತೆಗೆ ವೈದ್ಯರು ಮಾತ್ರ ನಿರ್ದಿಷ್ಟ ಅವಧಿಗೆ ಕೊಡಬೇಕಾದಂಥವು. ಇವುಗಳು ಓವರ್ ದಿ ಕೌಂಟರ್ ವರ್ಗಕ್ಕೆ ಸೇರಿದ ಮಾತ್ರೆಗಳಲ್ಲ. ಅಂದರೆ ಮೌಖಿಕವಾಗಿ ಕೇಳಿ ಪಡೆಯುವ ಮಾತ್ರೆಗಳಲ್ಲ. ನಿದ್ದೆ ಮಾತ್ರೆಗೆ ವೈದ್ಯರ ಚೀಟಿ ಕಡ್ಡಾಯ. ಹೆಚ್ಚಿನ ಹಣ ನೀಡಿ ಅಥವಾ ಪರಿಚಿತ ಅಂಗಡಿಯವರಿಂದ ನಿದ್ರೆ ಮಾತ್ರೆ ಪಡೆದು, ಮದ್ಯ ದೊರೆಯಲಾರಂಭಿಸಿದ ನಂತರ ಹಠಾತ್ ಆಗಿ ನಿದ್ರೆ ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ ಮೂರ್ಛೆ(ಫಿಟ್ಸ್) ರೋಗದಂತಹ ಅಡ್ಡ ಪರಿಣಾಮ ಬೀರುತ್ತದೆ ಎಂದು ಭಾರತೀಯ ಮನೋ ವೈದ್ಯಕೀಯ ಸಂಸ್ಥೆ ಹೇಳುತ್ತದೆ.

ನಿದ್ರೆ ಮಾತ್ರೆಗಳನ್ನು ವೈದ್ಯರ ಸಲಹೆ ಅನುಸಾರ ತೆಗೆದುಕೊಳ್ಳದೇ ಇದ್ದರೆ ಅಡ್ಡ ಪರಿಣಾಮಗಳಾಗುತ್ತವೆ. ನಿದ್ರಾಹೀನತೆ, ಖಿನ್ನತೆ, ಉದ್ವೇಗ ಮೊದಲಾದ ಮನೋ ದೈಹಿಕ ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ.

-ಡಾ.ಪ್ರತಿಮಾ, ಮನೋ ವೈದ್ಯೆ, ನಿಮ್ಹಾನ್ಸ್ ಆಸ್ಪತ್ರೆ

ಸ್ಯಾನಿಟೈಸರನ್ನೂ ಬಿಡದ ವ್ಯಸನಿಗಳು

ಮದ್ಯ ಸಿಗದ ಕಾರಣಕ್ಕೆ ಕೆಲವರು ಕೆಮ್ಮಿನ ಸಿರಪ್, ಸ್ಯಾನಿಟೈಸರ್ ಮತ್ತಿತರ ವಸ್ತುಗಳನ್ನು ಸೇವಿಸುತ್ತಿದ್ದಾರೆ ಎಂದು ಹಲವೆಡೆ ವರದಿಗಳು ಸಹ ಆಗುತ್ತಿವೆ. ಆದರೆ, ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಗಳು ಬಾಹ್ಯ ಉಪಯೋಗಕ್ಕೆ ಮಾತ್ರ ಸೀಮಿತ. ಯಾವುದೇ ಕಾರಣಕ್ಕೂ ಸೇವನೆಗೆ ಯೋಗ್ಯವಲ್ಲ. ಇದರಿಂದ ಲಿವರ್ ಗೆ ಗಂಭೀರ ಹಾನಿಯಾಗುತ್ತದೆ. ಇದು ಹಾಗೆಯೇ ಮುಂದುವರೆದರೆ ಇದು ಬಹು ಅಂಗಾಂಗಗಳ ವೈಫಲ್ಯಕ್ಕೂ ಕಾರಣವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎಚ್ಚರಿಕೆ ನೀಡಿದೆ.

ಈ ಕುರಿತು ವಿವರಿಸಿರುವ ಇಲಾಖೆ, ಸ್ಯಾನಿಟೈಸರ್ ನಲ್ಲಿ ಅಲ್ಕೋಹಾಲ್ ಮಾತ್ರ ಇರುವುದಿಲ್ಲ. ಇದರಲ್ಲಿ ಶೇ.95ರಷ್ಟು ಇಥೈಲ್‍ಅಲ್ಕೋಹಾಲ್, ಶೇ.0.125 ಹೈಡ್ರೋಜನ್ ಪೆರಾಕ್ಸೈಡ್, ಶೇ.1.45ರಷ್ಟು ಗ್ಲಿಸರಾಲ್ ಒಳಗೊಂಡಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಇಥೆನಾಲ್ ಇರುವುದರಿಂದ ಕುಡಿಯಲು ಇದು ಯಾವುದೇ ಕಾರಣಕ್ಕೂ ಯೋಗ್ಯವಲ್ಲ. ಇದರ ಸೇವನೆಯಿಂದ ಅನ್ನನಾಳ, ಜಠರ, ಸಣ್ಣಕರಳು, ದೊಡ್ಡಕರಳು, ಪಿತ್ತಜನಕಾಂಗ ಮತ್ತು ಮೇದೋಜಿರಕ ಗ್ರಂಥಿಗಳಿಗೆ ತೀವ್ರವಾದ ಹಾನಿಯಾಗುತ್ತದೆ. ಪ್ರಾಣಹಾನಿಯಾಗುವ ಸಾಧ್ಯತೆಗಳು ಇರುತ್ತವೆ ಎಂದು ತಿಳಿಸಿದೆ.

ಸ್ಯಾನಿಟೈಸರ್ ಹೊಟ್ಟೆಯಲ್ಲಿ ಹೋದರೆ ಅನ್ನನಾಳ ತೂತು ಬೀಳುತ್ತೆ, ಲೀವರ್ ಗಳ ಕ್ರಿಯೆಗೂ ಧಕ್ಕೆ ಬರುತ್ತದೆ. ಮನುಷ್ಯ ಸಾಯುವ ಪರಿಸ್ಥಿತಿ ಬರಬಹುದು, ಆದ್ದರಿಂದ ಸ್ಯಾನಿಟೈಸರ್ ಸೇವಿಸಬಾರದು. ಇದು ಕುಡಿಯುವ ವಸ್ತುವಲ್ಲ ಎಂದು ಎಚ್ಚರಿಕೆ ನೀಡಿದೆ.

ಸಹಾಯವಾಣಿ ದುರ್ಬಳಕೆ

ಬೆಂಗಳೂರು ನಗರ ಪೊಲೀಸ್ ಸಹಾಯವಾಣಿ ನಮ್ಮ-100ಕ್ಕೆ ಇದುವರೆಗೂ 1.07ಲಕ್ಷಕ್ಕೂ ಅಧಿಕ ಕರೆಗಳು ಬಂದಿವೆ. ಅದರಲ್ಲಿ ಕುಡುಕರ ಕರೆಗಳೇ ಅಧಿಕವಾಗಿವೆ. ಕುಡುಕರು ಕರೆ ಮಾಡಿ ಬಾರ್ ಯಾವಾಗ ತೆರೆಯುತ್ತೀರಾ? ದಯವಿಟ್ಟು ಮದ್ಯ ಕೊಡಿಸಿ ಇಲ್ಲವಾದರೆ ಬದುಕಲು ಸಾಧ್ಯವಾಗುತ್ತಿಲ್ಲ ಎಂದು  ಗೋಳಿಡುತ್ತಾರೆ ಎಂದು ಕಂಟ್ರೋಲ್‍ ರೂಮ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

Writer - -ಯುವರಾಜ್ ಮಾಳಗಿ

contributor

Editor - -ಯುವರಾಜ್ ಮಾಳಗಿ

contributor

Similar News