ಸಚಿವ ಸುರೇಶ್‍ ಕುಮಾರ್ ನಿರ್ಧಾರ ಸರ್ವಾಧಿಕಾರಿ ಧೋರಣೆ: ಶಿಕ್ಷಣ ತಜ್ಞ ನಿರಂಜನಾರಾಧ್ಯ

Update: 2020-04-19 17:25 GMT

ಬೆಂಗಳೂರು, ಎ.19: ಎಸೆಸೆಲ್ಸಿ ಫಲಿತಾಂಶದ ಕುರಿತು ಶೈಕ್ಷಣಿಕ ಸಲಹೆ ನೀಡಿದ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಮುಂದಾಗಿರುವ ಶಿಕ್ಷಣ ಸಚಿವ ಸುರೇಶ್‍ ಕುಮಾರ್ ರವರ ನಿರ್ಧಾರ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಆರೋಪಿಸಿದ್ದಾರೆ.

ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನಲ್ಲಿ ನಡೆದ ವಿವಿಧ ಹಂತದ ಪರೀಕ್ಷೆಗಳ ಆಧಾರದ ಮೇಲೆ ಗ್ರೇಡಿಂಗ್ ಮೂಲಕ ಫಲಿತಾಂಶ ನೀಡುವ ಕುರಿತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸಲಹೆ ಕೋರಲು ನಿರ್ಣಯ ಕೈಗೊಂಡಿರುತ್ತಾರೆ. ಇದು ಒಬ್ಬರ ತೀರ್ಮಾನವಲ್ಲ. ಸಭೆಯಲ್ಲಿ ಸೇರಿದ್ದ ಎಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿ ನೀಡಿರುವ ಸಲಹೆ ವಾಸ್ತವಿಕವಾಗಿದೆ. ಇದು ಕೆಳ ಹಂತದ ಪರಿಸ್ಥಿತಿಯನ್ನು ಅರಿತ ಅನುಭವದಿಂದ ಕೂಡಿದ ಸಲಹೆಯಾಗಿದೆ.

ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಹಾಗೂ ಸಲಹೆ ನೀಡುವ ಅಧಿಕಾರಿಗಳನ್ನು ಶಿಕ್ಷಿಸುವುದು ರಾಜ್ಯ ಸರಕಾರದ ಪ್ರಜಾಸತ್ತಾತ್ಮಕ ತೀರ್ಮಾನವಾಗುವುದಿಲ್ಲ. ಬದಲಿಗೆ ಸರ್ವಾಧಿಕಾರಿ ಧೋರಣೆಯಾಗುತ್ತದೆ. ಈ ರೀತಿ ಏಕಪಕ್ಷೀಯ ತೀರ್ಮಾನಗಳು ಮುಂದೆ ಸತ್ಯ ಮತ್ತು ಪ್ರಾಮಾಣಿಕ ಸಲಹೆಗಳನ್ನು ನೀಡ ಬಯಸುವವರು ಮುಕ್ತ ಅಭಿಪ್ರಾಯ ವ್ಯಕ್ತಪಡಿಸಲಾಗದಂತಹ ವಾತಾವರಣ ಸೃಷ್ಟಿಯಾಗುವಂತಹ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಇಲಾಖೆಯ ಆಯುಕ್ತರೊಬ್ಬರು ಸರಕಾರಕ್ಕೆ ಸಲಹೆ ಕೊಟ್ಟ ಮಾತ್ರಕ್ಕೆ ಆ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲು ಮುಂದಾಗುವುದು ಸಂವಿಧಾನಬದ್ದ ಮುಕ್ತ ಅಭಿಪ್ರಾಯ ವ್ಯಕ್ತಪಡಿಸುವ ಮೂಲಭೂತ ಹಕ್ಕನ್ನು ಕಸಿದಂತಾಗಿದೆ. ಹೀಗಾಗಿ ಸಚಿವ ಸುರೇಶ್‍ ಕುಮಾರ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಪತ್ರಿಕಾ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News