ಬಿಜೆಪಿ ನಾಯಕರಿಗೆ ಜನರ ರಕ್ಷಣೆಗಿಂತ ಪ್ರಚಾರವೆ ಆದ್ಯತೆ: ಕಾಂಗ್ರೆಸ್ ಟೀಕೆ

Update: 2020-04-21 18:01 GMT

ಬೆಂಗಳೂರು, ಎ.21: ರಾಜ್ಯದಲ್ಲಿ ವಿರೋಧ ಪಕ್ಷಗಳು ಭಿನ್ನಾಭಿಪ್ರಾಯ ಮರೆತು ‘ಕೊರೋನ’ ಹೋರಾಟದಲ್ಲಿ ಸರಕಾರದ ಬೆಂಬಲಕ್ಕೆ ನಿಂತಿವೆ. ಆದರೆ, ಸರಕಾರದಲ್ಲಿ ಸಚಿವರ ಸಮನ್ವಯದ ಕೊರತೆ, ಭಿನ್ನಾಭಿಪ್ರಾಯ, ಬೇಜವಾಬ್ದಾರಿಯದ್ದೆ ಮೇಲಾಟವಾಗಿರುವುದು ರಾಜ್ಯದ ದೌರ್ಭಾಗ್ಯ. ಬಿಜೆಪಿ ನಾಯಕರಿಗೆ ಜನರ ರಕ್ಷಣೆಗಿಂತ ಅಧಿಕಾರ ದಾಹ, ಪ್ರಚಾರವೆ ಆದ್ಯತೆಯಾಗಿದೆ ಎಂದು ಕಾಂಗ್ರೆಸ್ ಟ್ವಿಟರ್ ನಲ್ಲಿ ಟೀಕಿಸಿದೆ.

ಬಿಜೆಪಿ ನಾಯಕರೆ ಆಶಾ ಕಾರ್ಯಕರ್ತೆಯರ ಮೇಲೆ ದಾಳಿ ನಡೆದಾಗ ಉಕ್ಕಿ ಹರಿಯುವ ನಿಮ್ಮ ಕಾಳಜಿ, ಅವರಿಗೆ ಕನಿಷ್ಟ ಸುರಕ್ಷತಾ ಸಾಮಗ್ರಿಗಳನ್ನೂ ನೀಡದೆ ಸೋಂಕು ಹೆಚ್ಚಿರುವ ಪ್ರದೇಶಗಳಿಗೆ ಕಳುಹಿಸುವಾಗ ಏಕೆ ಇರುವುದಿಲ್ಲ? ಅಪಾಯಕಾರಿ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರಿಗೆ ಸೂಕ್ತ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಐತಿಹಾಸಿಕವಾಗಿ ಇಳಿದಿದೆ. ದೇಶದ ಆರ್ಥಿಕತೆಯ ಚೇತರಿಕೆಗೆ ಕಾರ್ಯತಂತ್ರ ರೂಪಿಸುವಲ್ಲಿ ಈ ಸಂದರ್ಭವನ್ನು ಉಪಯೋಗಿಸಿಕೊಳ್ಳುವತ್ತ ಕೇಂದ್ರ ಸರಕಾರ ಚಿಂತಿಸಬೇಕು ಹಾಗೂ ತೈಲ ಬೆಲೆ ಇಳಿಸುವ ಮೂಲಕ ಈ ಲಾಭವನ್ನು ಜನತೆಗೆ ವರ್ಗಾಯಿಸಬೇಕಿದೆ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಕೊರೋನಗೆ ಲಾಕ್‍ಡೌನ್ ಒಂದೇ ಪರಿಹಾರವಲ್ಲ, ವ್ಯಾಪಕ ಪರೀಕ್ಷೆಗಳು ಹಾಗೂ ಸಮರೋಪಾದಿಯ ಕಾರ್ಯತಂತ್ರಗಳ ಅಗತ್ಯವಿದೆ ಎಂದಿರುವ ರಾಹುಲ್ ಗಾಂಧಿ ಮಾತನ್ನು ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದೆ. ಇನ್ನಾದರೂ ಕೇಂದ್ರ ಸರಕಾರ ವಿಪಕ್ಷಗಳ ಸಲಹೆ ಸ್ವೀಕರಿಸಿ ಕ್ರಮ ಕೈಗೊಳ್ಳುವುದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News