ಪ್ರಯಾಣಿಕರಿಗೆ ಸಿಹಿ ಸುದ್ದಿ: ಕೆಎಸ್ಸಾರ್ಟಿಸಿಯ ಎಲ್ಲ ಮಾಸಿಕ ಪಾಸ್‍ಗಳ ಅವಧಿ ವಿಸ್ತರಣೆ

Update: 2020-04-22 17:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.22: ಕೆಎಸ್ಸಾರ್ಟಿಸಿ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಲಾಗಿದ್ದು, ಲಾಕ್‍ಡೌನ್ ಬಳಿಕ ಬಸ್ ಸೇವೆ ಪುನರ್ ಆರಂಭಗೊಳ್ಳುತ್ತಿದ್ದಂತೆಯೇ ಎಲ್ಲ ಮಾಸಿಕ ಪಾಸ್ ಹೊಂದಿರುವ ಪ್ರಯಾಣಿಕರಿಗೆ ಅವಧಿ ವಿಸ್ತರಣೆ ಮಾಡಿ, ಬಾಕಿ ಉಳಿದ ದಿನಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುತ್ತಿದೆ. ಇದು ನಿಗಮದ ವ್ಯಾಪ್ತಿಯ ಎಲ್ಲ 16 ಜಿಲ್ಲೆಗಳಿಗೂ ಅನ್ವಯ ಆಗಲಿದೆ.

ಕೆಎಸ್ಸಾರ್ಟಿಸಿ ವ್ಯಾಪ್ತಿಯಲ್ಲಿ ಸುಮಾರು 55 ಸಾವಿರ ಜನ ಮಾಸಿಕ ಪಾಸ್ ಪಡೆದು ಪ್ರಯಾಣಿಸುತ್ತಾರೆ. ಪಾಸಿನ ದರ 300 ರೂ.ಗಳಿಂದ ಗರಿಷ್ಠ 2,500 ರೂ.ವರೆಗೂ ಇದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ 1,000-1,200 ರೂ. ಒಳಗಿನ ಪಾಸು ಹೊಂದಿದ ಪ್ರಯಾಣಿಕರಿದ್ದಾರೆ. ಪಾಸು ವಿತರಿಸಿದ ದಿನಾಂಕದಿಂದ 30 ದಿನಗಳು ಪ್ರಯಾಣಿಸಲು ಅವಕಾಶ ಇರುತ್ತದೆ. ಅದನ್ನು ಆಧರಿಸಿ ವಿಸ್ತರಣಾ ಅವಧಿ ನವೀಕರಿಸಲಾಗುತ್ತದೆ ಎಂದು ಕೆಎಸ್ಸಾರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ನವೀಕರಣ ಹೇಗೆ?: ಮಾ. 23ರಂದು ಲಾಕ್‍ಡೌನ್ ಘೋಷಿಸಲಾಗಿದೆ. ಅದಕ್ಕೂ ಹಿಂದೆ ಒಂದು ದಿನ ಜನತಾ ಕರ್ಫ್ಯೂ ಜಾರಿಯಲ್ಲಿತ್ತು. ಒಟ್ಟಾರೆ ಕಳೆದ ತಿಂಗಳು ಹೆಚ್ಚು-ಕಡಿಮೆ ಹತ್ತು ದಿನಗಳು ಬಸ್ ಸೇವೆ ಸ್ಥಗಿತಗೊಂಡಿತ್ತು. ಉದಾಹರಣೆಗೆ ಪ್ರಯಾಣಿಕ ಮಾರ್ಚ್ 10ಕ್ಕೆ ಪಾಸು ಪಡೆದಿದ್ದರೆ, ಅಲ್ಲಿಂದ 30 ದಿನಗಳು ಮಾಸಿಕ ಪಾಸಿನ ಅವಧಿ ಆಗಿರುತ್ತದೆ. ಆದರೆ, ಲಾಕ್‍ಡೌನ್‍ನಿಂದ ಕೇವಲ ಹತ್ತು ದಿನಗಳು ಪಾಸು ಬಳಕೆ ಆಗಿರುತ್ತದೆ. ಅಂತಹವರಿಗೆ ಬಸ್ ಸೇವೆ ಪುನರಾರಂಭಗೊಂಡ ನಂತರ 20 ದಿನಗಳು ನವೀಕರಿಸಿದ ಮುದ್ರೆ ಹಾಕಿ, ಪ್ರಯಾಣಿಸಲು ಅವಕಾಶ ನೀಡಲಾಗುವುದು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಈ ಸೇವೆ ಆಯಾ ಬಸ್ ನಿಲ್ದಾಣದ ನಿಯಂತ್ರಕರಲ್ಲೇ ಲಭ್ಯ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಇನ್ನು ಪ್ರೀಮಿಯಂ ಸೇವೆಗಳಲ್ಲಿ ಪಾಸು ಹೊಂದಿದವರ ಪ್ರಮಾಣ ಅತಿ ವಿರಳ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News