ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲು ಆಡಳಿತ ಯಂತ್ರಾಂಗಕ್ಕೆ ಸಿಎಂ ಸೂಚನೆ

Update: 2020-04-23 18:36 GMT

ಬೆಂಗಳೂರು, ಎ. 23: ಕೊರೋನ ವೈರಸ್ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್ ಬಳಿಕ ರಾಜ್ಯದ ಅಭಿವೃದ್ಧಿ ಕಾರ್ಯಗಳ ವಿಳಂಬದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಆಡಳಿತ ಯಂತ್ರಾಂಗವನ್ನು ಚುರುಕುಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ, ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

ಗುರುವಾರ ವಿಧಾನಸೌಧದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ಸುದೀರ್ಘ ನಾಲ್ಕು ಗಂಟೆಗಳ ಸಭೆ ನಡೆಸಿದ ಯಡಿಯೂರಪ್ಪ, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಬೆಲೆ ಕಳೆದುಕೊಂಡಿರುವ ಹಣ್ಣು-ತರಕಾರಿಗಳನ್ನು ಖರೀದಿಸಿ ಶೀಥಲ ಘಟಕಗಳಲ್ಲಿ ದಾಸ್ತಾನು ಮಾಡಿ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೆಚ್ಚು ದಿನ ಶೇಖರಿಸಿಡಲು ಸಾಧ್ಯವಾಗದ ಹಣ್ಣು-ತರಕಾರಿ ಸೇರಿದಂತೆ ರೈತರ ಕೃಷಿ ಉತ್ಪನ್ನಗಳನ್ನು ಹೊರ ರಾಜ್ಯಗಳಿಗೆ ಮತ್ತು ವಿದೇಶಕ್ಕೆ ಕಳುಹಿಸಿ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಅಲ್ಲದೆ, ರಾಜ್ಯದಲ್ಲಿ ಬೇಸಿಗೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಕೊರೋನ ವೈರಸ್ ಸೋಂಕು ಪೀಡಿತ ಪ್ರದೇಶಗಳಲ್ಲಿ ಗುಣಮಟ್ಟದ ನೀರು ಪೂರೈಕೆ ಮಾಡಬೇಕು. ನೀರಿನ ಅಭಾವವಿರುವ ಇರುವ ಪ್ರದೇಶಗಳಲ್ಲಿ ತುರ್ತಾಗಿ ನೀರು ಪೂರೈಕೆಗೆ ನಿಗಾ ವಹಿಸಬೇಕು. ಕೊರೋನ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ಅದನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ಯಡಿಯೂರಪ್ಪ ಸೂಚಿಸಿದರು.

ಕಡಿಮೆ ಬೆಲೆಗೆ ರಸಗೊಬ್ಬರ ಪೂರೈಕೆ ಮಾಡಬೇಕು. ಈ ಸಂಬಂಧ ಕೇಂದ್ರ ಸಚಿವ ಸದಾನಂದಗೌಡ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವ ಮೂಲಕ ಅವರಲ್ಲಿನ ಆತಂಕ ದೂರ ಮಾಡಬೇಕು ಎಂದು ಸಲಹೆ ನೀಡಿದ ಯಡಿಯೂರಪ್ಪ, ನಗರಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು ಸರಕಾರ ಜಾಗವನ್ನು ಲೀಸ್‍ಗೆ ಪಡೆದು ಕೆಲಸ ಆರಂಭಿಸದೆ ನಿಯಮ ಉಲ್ಲಂಘಿಸಿದ ಜಾಗಗಳನ್ನು ಸರಕಾರ ವಾಪಸ್ ಪಡೆಯಬೇಕು ಎಂದು ತಿಳಿಸಿದರು.

ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಜಲಾಶಯಗಳಲ್ಲಿ ಹೆಚ್ಚು ನೀರು ಸಂಗ್ರಹವಾಗಿದ್ದರೆ, ಅದನ್ನು ರೈತರ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗೆ ಹರಿಸಬೇಕು. ಅಲ್ಲದೆ, ಕಳೆದ ವರ್ಷದಲ್ಲಿ ಆದ ಅನಾಹುತ ಮರುಕಳಿಸದಂತೆ ಜಲಾಶಯಗಳಲ್ಲಿನ ಪ್ರತಿನಿತ್ಯದ ನೀರಿನ ಮಟ್ಟದ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೊರೋನ ಸೋಂಕಿನಿಂದ ಅಂತರ್‍ರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಕಡಿಮೆ ಆಗುವುದರಿಂದ ದೇಶಿ ಪ್ರವಾಸಿಗರನ್ನು ಆಕರ್ಷಣೆ ಮಾಡಲು ಗಮನಹರಿಸಬೇಕು. ಜೊತೆಗೆ ಆ ಪ್ರದೇಶಗಳಲ್ಲಿ ಕೋವಿಡ್-19 ಸೋಂಕಿಲ್ಲ ಎಂಬುದನ್ನು ಜನರಿಗೆ ಪ್ರಚಾರ ಮಾಡಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಆನ್‍ಲೈನ್ ತರಬೇತಿ ನೀಡಬೇಕು. ದೂರದರ್ಶನದ ಮೂಲಕ ಮಕ್ಕಳಿಗೆ ಪಾಠ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಶಾಲೆ ತೆರೆಯುವವರೆಗೆ ಮಕ್ಕಳಿಗೆ ನೀಡಲು ಸೂಚಿಸಿದರು. ಅಲ್ಲದೆ, ಲಾಕ್‍ಡೌನ್ ಹಿನ್ನೆಲೆಯಲ್ಲಿ ನಷ್ಟಕ್ಕೆ ಸಿಲುಕಿರುವ ಕೆಎಸ್ಸಾರ್ಟಿಸಿ ಸಾರಿಗೆ ಬಸ್‍ಗಳನ್ನು ಗೂಡ್ಸ್ ಸಾಗಾಣಿಕೆ ಮತ್ತು ಖಾಸಗಿ ಕಂಪೆನಿಗಳಿಗೆ ಗುತ್ತಿಗೆ ಆಧಾರದ ಮೇಲೆ ಬಳಸಿಕೊಳ್ಳುವ ಮೂಲಕ ಆದಾಯ ಬರುವಂತೆ ಮಾಡಲು ನಿರ್ದೇಶನ ನೀಡಲಾಯಿತು.

ಕಲ್ಯಾಣ ಕರ್ನಾಟಕ ಮತ್ತು ಇತರೆ ಅಭಿವೃದ್ಧಿ ಮಂಡಳಿಗಳ ಭಾಗದಲ್ಲಿ ತುರ್ತಾಗಿ ಆಗಬೇಕಿರುವ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಿದ್ದು, ಕೊರೋನ ವೈರಸ್ ಸೋಂಕು ತಡೆಗೆ ಹಗಲು-ರಾತ್ರಿಗಳ ಪರಿವೆ ಇಲ್ಲದೆ ಶ್ರಮಿಸುತ್ತಿರುವ ಗುತ್ತಿಗೆ ವೈದ್ಯರ ವೇತನ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News