ಘನತೆವೆತ್ತ ಸಚಿವರೇ ಎಂದು ಸಂಬೋಧಿಸಿ: ಕೊಲ್ಕತ್ತಾ ಪೊಲೀಸರಿಗೆ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಸಲಹೆ

Update: 2020-04-24 07:22 GMT
ಬಾಬುಲ್ ಸುಪ್ರಿಯೊ

ಕೊಲ್ಕತ್ತಾ: ತಮ್ಮನ್ನು ಘನತೆವೆತ್ತ ಸಚಿವರೇ ಎಂದು ಸಂಬೋಧಿಸುವಂತೆ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಕೊಲ್ಕತ್ತಾ ಪೊಲೀಸರಿಗೆ ಸಲಹೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸೋಮನಾಥ್ ದಾಸ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂಬ ಬಗ್ಗೆ ಸಚಿವರು ಮಾಡಿರುವ ಟ್ವೀಟ್ ಸುಳ್ಳು ಹಾಗೂ ಇದು ತಪ್ಪು ಸಂದೇಶ ರವಾನಿಸುವ ಯತ್ನ ಎಂದು ಕೊಲ್ಕತ್ತಾ ಪೊಲೀಸ್ ಇಲಾಖೆಯ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಸಚಿವರು ಈ ಟ್ವೀಟ್ ಮಾಡಿದ್ದಾರೆ.

ಎಂಆರ್ ಬಂಗೂರು ಆಸ್ಪತ್ರೆಯ ಸ್ಥಿತಿಯನ್ನು ಚಿತ್ರಿಸಿ ಆ ವಿಡಿಯೊವನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ದಾಸ್ ಅವರನ್ನು ಬಂಧಿಸಲಾಗಿದೆ ಎಂದು ಸುಪ್ರಿಯೊ ಟ್ವೀಟ್ ಮಾಡಿದ್ದರು.

ತಕ್ಷಣ ಕೊಲ್ಕತ್ತಾ ಪೊಲೀಸ್ ಇಲಾಖೆ ಇದನ್ನು ನಿರಾಕರಿಸಿ, ಸುಪ್ರಿಯೊ ಅವರ ಪೋಸ್ಟ್ ಸತ್ಯಕ್ಕೆ ದೂರ ಹಾಗೂ ಸುಳ್ಳು ಮಾಹಿತಿ ಹರಡುವ ಉದ್ದೇಶದ್ದು. ಸೋಮನಾಥ್ ದಾಸ್ ವಿರುದ್ಧ ಯಾವ ಪ್ರಕರಣವನ್ನೂ ಕೊಲ್ಕತ್ತಾ ಪೊಲೀಸರು ದಾಖಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಆದರೆ ಪೊಲೀಸರ ವಿವರಣೆಯಿಂದ ತೃಪ್ತರಾಗದ ಸಚಿವರು ಈ ವಿಚಾರದಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ. ಇಡೀ ದೇಶದಲ್ಲಿ ಪೊಲೀಸರ ಕಾರ್ಯನಿರ್ವಹಣೆಯನ್ನು ನಾನು ಶ್ಲಾಘಿಸುತ್ತೇನೆ. ಆದರೆ ನೀವು ಹೇಳಿದ್ದನ್ನು ನಂಬುವುದಕ್ಕೆ ಸಕಾರಣವಿಲ್ಲ ಎಂದು ಹೇಳಿದ್ದಾರೆ. ಜತೆಗೆ ನಾನು ಕೇಂದ್ರ ಸಚಿವನಾಗಿರುವುದರಿಂದ ಗೌರವಾನ್ವಿತರೇ ಎಂದು ಸಂಬೋಧಿಸಬೇಕು ಎಂದೂ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ನಾನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಹಾಗೆಯೇ ಸಂಬೋಧಿಸುತ್ತೇನೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News