ಬಿಜೆಪಿ ಮುಖಂಡನ ಗೋದಾಮಿನಲ್ಲಿ 1,879 ಕ್ವಿಂಟಾಲ್ ಅಕ್ಕಿ ಅಕ್ರಮ ದಾಸ್ತಾನು: ಡಿಕೆಶಿ ಆರೋಪ

Update: 2020-04-24 12:59 GMT

ಬೆಂಗಳೂರು, ಎ.24: ಕೊರೋನ ಬಿಕ್ಕಟ್ಟು ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಂಚಲು ರಾಜ್ಯಕ್ಕೆ ತಂದಿದ್ದ, ಹರಿಯಾಣ ಸರಕಾರದ ಮುದ್ರೆ ಇರುವ 1,879 ಕ್ವಿಂಟಾಲ್ ಅಕ್ಕಿ ಮೂಟೆಗಳನ್ನು ಸರ್ಜಾಪುರದಲ್ಲಿರುವ ಬಿಜೆಪಿ ಮುಖಂಡರೊಬ್ಬರ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಅಕ್ಕಿಯನ್ನು ತಮಿಳುನಾಡಿನ ವರ್ತಕರಿಗೆ ಮಾರಾಟ ಮಾಡಲು ಮುಂದಾಗಿದ್ದು ನಾಚಿಕೆಗೇಡಿನ ಸಂಗತಿ. ಬಡವರ ಅನ್ನಕ್ಕೆ ಬಿಜೆಪಿ ಕನ್ನ ಹಾಕುತ್ತಿದೆ ಎಂದು ಕಿಡಿಗಾರಿದರು.

ಗೋದಾಮಿನಲ್ಲಿ ಅಕ್ಕಿಯ ಮೂಟೆಗಳು ಹೇಗೆ, ಎಲ್ಲಿಂದ ಬಂದವು, ಯಾರು ತಂದಿದ್ದು ಎನ್ನುವ ಮಾಹಿತಿ ತಮಗಿಲ್ಲ. ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅಲ್ಲಿಯ ತಾಲೂಕು ದಂಡಾಧಿಕಾರಿಗಳೇ ಹೇಳುತ್ತಿದ್ದಾರೆ. ಹಾಗಾಗಿ, ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಶಿವಕುಮಾರ್ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಕ್ಕಿ ಅಕ್ರಮ ದಾಸ್ತಾನು, ಮಾರಾಟದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಾಂಗ ತನಿಖೆಗೆ ವಹಿಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಪಕ್ಷಪಾತ ಮಾಡದೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಈ ಆಪಾದನೆಗಳು ಮುಖ್ಯಮಂತ್ರಿಯ ಕೊರಳನ್ನೆ ಸುತ್ತಿಕೊಳ್ಳಲಿವೆ ಎಂದು ಅವರು ತಿಳಿಸಿದರು.

ಈ ಬಿಕ್ಕಟ್ಟಿನ ಸಮಯದಲ್ಲಿ ಹಸಿದವರಿಗೆ ಅನ್ನ ನೀಡುವ ಉದ್ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿರುವ ಅಕ್ಕಿ ಇದಾಗಿದೆ. ಅದನ್ನು ಸಾರ್ವಜನಿಕರಿಗೆ ವಿತರಿಸಿದೆ ಅಕ್ರಮವಾಗಿ ಮಾರಾಟ ಮಾಡುವುದು ಅತ್ಯಂತ ಅಮಾನುಷ ವಿಷಯ. ಮುಖ್ಯಮಂತ್ರಿ ಇದನ್ನು ಹಗುರವಾಗಿ ಪರಿಗಣಿಸದೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.

ಹರಿಯಾಣದ ಅಕ್ಕಿಯನ್ನು ನಾವು ಸೀಝ್ ಮಾಡಿಸಿದ್ದೇವೆ. ಸರ್ಜಾಪುರದ ಗೋಡೌನ್‍ನಲ್ಲಿ ಅಕ್ಕಿ ಸಂಗ್ರಹಿಸಿದ್ದಾರೆ. ಸಂಗ್ರಹ ಮಾಡಬೇಕಾದರೆ ತಹಶೀಲ್ದಾರ್ ಅನುಮತಿ ಬೇಕು. ಈಗ ತಹಶೀಲ್ದಾರ್ ಗೆ ಧಮ್ಕಿ ಹಾಕುತ್ತಿದ್ದಾರೆ. ಬಿಜೆಪಿ ಮುಖಂಡ ಬುಲೆಟ್ ಬಾಬು ಎಂಬವರು ಆ ಗೋಡೌನ್ ಮಾಲಕ. ಅಕ್ಕಿ ಸರಕಾರದ ಸೊತ್ತಾಗಿದ್ದರೆ ಅದನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದರೆ, ಆಹಾರ ಕಾಯ್ದೆ ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಬಿಜೆಪಿ ಮುಖಂಡನನ್ನು ಬಂಧಿಸಬೇಕು. ಪ್ರತಿಯೊಂದು ಜಿಲ್ಲೆಯಲ್ಲೂ ಇದೇ ರೀತಿ ಅಕ್ರಮ ವ್ಯಾಪಾರಗಳು ನಡೆಯುತ್ತಿವೆ. ಅಕ್ಕಿಯನ್ನು ಪಾಲಿಶ್ ಮಾಡಿ ಪ್ರತಿ ಕೆಜಿಗೆ 30 ರಿಂದ 40 ರೂ.ಗಳಿಗೆ ಬ್ಲಾಕ್ ಮಾರಾಟ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದರು.

ರಾಜ್ಯ ಸರಕಾರ ಕೈಗೊಳ್ಳುವ ಎಲ್ಲ ಒಳ್ಳೆಯ ತೀರ್ಮಾನಗಳಿಗೆ, ಪಾರದರ್ಶಕ ಕಾರ್ಯಗಳಿಗೆ ನಮ್ಮ ಬೆಂಬಲವಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಾವು ನಮ್ಮ ಸಂಪೂರ್ಣ ಸಹಕಾರವನ್ನು ಮುಂದೆಯೂ ನೀಡುತ್ತೇವೆ. ಹಾಗೆಂದ ಮಾತ್ರಕ್ಕೆ ಸರಕಾರ ಎಸಗುವ ಭ್ರಷ್ಟಾಚಾರಗಳಿಗೆ ನಮ್ಮ ಸಮ್ಮತಿ ಇದೆ ಎಂದು ಅರ್ಥವಲ್ಲ ಎಂದು ಶಿವಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಸಂಸದ ಡಿ.ಕೆ.ಸುರೇಶ್, ಮಾಧ್ಯಮ ವಿಭಾಗದ ಅಧ್ಯಕ್ಷ ವಿ.ಎಸ್.ಉಗ್ರಪ್ಪ, ಶಾಸಕರಾದ ಶಿವಣ್ಣ, ಡಾ.ಅಜಯ್‍ಸಿಂಗ್, ಕೆ.ಸಿ.ಕೊಂಡಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News