'ಹಿಂದೂಗಳ ಶವಸಂಸ್ಕಾರಕ್ಕೆ ನಿವೇಶನ ನೀಡುತ್ತೇನೆ': ಅಂತ್ಯಸಂಸ್ಕಾರಕ್ಕೆ ವಿರೋಧದ ನಡುವೆ ಹೀಗೊಂದು ಪೋಸ್ಟ್

Update: 2020-04-24 16:51 GMT
ನಝೀರ್ ಅಹಮದ್

ಮೈಸೂರು,ಎ.24: ಕೊರೋನ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಈ ಸಂದರ್ಭದಲ್ಲೇ "ಕೊರೋನ ಸೋಂಕಿನಿಂದ ಸಾವನ್ನಪ್ಪುವವರ ಶವಸಂಸ್ಕಾರಕ್ಕೆ ಜಾಗ ನೀಡುತ್ತೇನೆ. ಹಿಂದೂಗಳಿಗೆ ಮೊದಲ ಆದ್ಯತೆ" ಎಂದು ಮಂಡ್ಯದ ವ್ಯಕ್ತಿಯೊಬ್ಬರು ಘೋಷಿಸಿದ್ದಾರೆ.

ಕೊರೋನ ಸೋಂಕಿನಿಂದ ಸಾವನ್ನಪ್ಪಿದ ಮಹಿಳೆಯ ಶವ ಸಂಸ್ಕಾರಕ್ಕೆ ಶಾಸಕ ಭರತ್ ಶೆಟ್ಟಿ ಹಾಗೂ ಮಂಗಳೂರಿನ ಪಚ್ಚನಾಡಿ ನಿವಾಸಿಗಳು ಅವಕಾಶ ನೀಡಿರಲಿಲ್ಲ. ಇದನ್ನು ಖಂಡಿಸಿರುವ ನಝೀರ್ ಅಹಮದ್ ಅವರು ತಮ್ಮ ನಿವೇಶನದಲ್ಲಿ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮೈಸೂರು ಮೂಲದ ಮಂಡ್ಯ ಜಿಲ್ಲೆ ಪಾಂಡವಪುರ ಟೌನ್‍ನ ನಿವಾಸಿ ನಝೀರ್ ಅಹಮದ್ ಎಂಬವರು "ಆಕಸ್ಮಾತ್ ಕೊರೋನದಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಜಾಗಸಿಗದಿದ್ದರೆ ಪಾಂಡವಪುರದ ನನ್ನ ಸೈಟನ್ನು ಬಳಸಬಹುದು. ಹಿಂದೂಗಳಿಗೆ ಮೊದಲ ಆದ್ಯತೆ" ಎಂದು ಘೋಷಿಸಿದ್ದಾರೆ.

ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಅವರು, "ವಾಸ್ತವದಲ್ಲಿ ದೇಶದಲ್ಲಿ ಹಿಂದೂ ಮುಸಲ್ಮಾನರು ಇನ್ನೂ ಸಹ ಭಾವೈಕ್ಯತೆಯಿಂದ ಇದ್ದು, ಇದನ್ನು ಸಹಿಸದ ರಾಜಕಾರಣಿಗಳು ಪದೇ ಪದೇ ಕೋಮು ದ್ವೇಷ ಬಿತ್ತುತ್ತಿದ್ದಾರೆ. ಇದು ನಿಲ್ಲಬೇಕು. ಇದಕ್ಕೆ ಎಲ್ಲಾ ಹಿಂದೂ ಮುಸ್ಲಿಂ ಸಮಾಜದ ಯುವಕರು ಟೊಂಕ ಕಟ್ಟಿ ನಿಲ್ಲುವ ಮೂಲಕ ಕೋಮು ದ್ವೇಷವನ್ನು ದೂರ ಮಾಡಬೇಕಿದೆ. ಒಬ್ಬ ಹಿಂದೂ ಮಹಿಳೆಯ ಶವ ಸಂಸ್ಕಾರಕ್ಕೆ ಸ್ಥಳಾವಕಾಶ ನೀಡದ ಜನರ ಮನಸ್ಥಿತಿಯನ್ನು ಒಬ್ಬ ಶಾಸಕರು ತಿಳಿಗೊಳಿಸಬಹುದಿತ್ತು. ಆದರೆ ಅವರೇ ಸ್ಥಳ ನೀಡಲು ನಿರಾಕರಿಸಿದರೆ ಇನ್ಯಾರು ಗತಿ. ನನ್ನ ದೇಶ, ನನ್ನ ರಾಜ್ಯಕ್ಕೆ ಈ ಗತಿ ಬರಬಾರದು ಎಂದು ನಝೀರ್ ಅಹಮದ್ ತಿಳಿಸಿದ್ದಾರೆ.

"ಕೊರೋನ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಹಿಂದೂ- ಮುಸಲ್ಮಾನರು ಒಗ್ಗಟ್ಟಾಗಿ ನಿಲ್ಲಬೇಕು. ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೂ ಅದನ್ನು ಮರೆತು ದೇಶದ ರಕ್ಷಣೆಗೆ ನಾವು ಸನ್ನದ್ಧರಾಗಬೇಕು. ಕೋಮುದ್ವೇಷದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವಕ್ಕೆ ಚ್ಯುತಿ ಬರುತ್ತಿರುವ ಇಂತಹ ಸನ್ನಿವೇಶದಲ್ಲಿ ನಾವೆಲ್ಲರೂ ಒಗ್ಗಾಟ್ಟಾಗಿ ನಿಂತು ಕೊರೋನ ಮಹಾಮಾರಿಯನ್ನು ಹಿಮ್ಮೆಟ್ಟಿಸಬೇಕು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News