ಕೋವಿಡ್-19: ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸಿದ ಕಣ್ಣನ್ ಗೋಪಿನಾಥನ್ ವಿರುದ್ಧ ಪ್ರಕರಣ

Update: 2020-04-25 03:46 GMT

ದಮನ್ ಮತ್ತು ಡಿಯು, ಎ.25: ಕೋವಿಡ್-19 ಸಾಂಕ್ರಾಮಿಕದ ವೇಳೆ ಕರ್ತವ್ಯಕ್ಕೆ ಮರು ಹಾಜರಾಗಲು ನಿರಾಕರಿಸಿದ ಆರೋಪದಲ್ಲಿ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ವಿರುದ್ಧ ಕೇಂದ್ರಾಡಳಿತ ಪ್ರದೇಶವಾದ ಡಮನ್ ಮತ್ತು ಡಿಯು ಹಾಗೂ ದಾದ್ರಾ ಮತ್ತು ನಗರ ಹವೇಲಿ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ.

ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ವಿಪತ್ತು ನಿರ್ವಹಣೆ ಕಾಯ್ದೆಯಡಿ ಡಮನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗೋಪಿನಾಥನ್ ಕಳೆದ ಆಗಸ್ಟ್‌ನಲ್ಲಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಲೀಲಾಧರ್ ಮಕ್ವಾನಾ ವಿವರಿಸಿದ್ದಾರೆ. ಕಣ್ಣನ್ ವಿರುದ್ಧ ಸರ್ಕಾರಿ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188ರ ಅನ್ವಯವೂ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೊರೋನ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಿಬ್ಬಂದಿ ವಿಭಾಗದ ಅಧೀಕ್ಷಕ ಎಚ್.ಕೆ.ಕಾಂಬ್ಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದನ್ನು ಪ್ರತಿಭಟಿಸಿ ದಾದ್ರಾ ಮತ್ತು ನಗರ ಹವೇಲಿ ಜಿಲ್ಲಾಧಿಕಾರಿ ಹುದ್ದೆಗೆ ಕಣ್ಣನ್ ರಾಜೀನಾಮೆ ನೀಡಿದ್ದರು. ಆದರೆ ಅವರ ರಾಜೀನಾಮೆ ಇನ್ನೂ ಸ್ವೀಕಾರವಾಗದ ಕಾರಣ ಎಪ್ರಿಲ್ 9ರಂದು ಕರ್ತವ್ಯಕ್ಕೆ ಹಾಜರಾಗುವಂತೆ ಅವರಿಗೆ ಸರ್ಕಾರ ಆದೇಶ ಮಾಡಿತ್ತು.

ಇದಕ್ಕೆ ನಿರಾಕರಿಸಿದ ಗೋಪಿನಾಥನ್ ಅವರು ಸರ್ಕಾರ ತಮಗೆ ಕಿರುಕುಳ ನೀಡುತ್ತದೆ ಎಂದು ಆಪಾದಿಸಿದ್ದರು. ಸಾಂಕ್ರಾಮಿಕದಿಂದ ಬಳಲುತ್ತಿರುವವರಿಗೆ ಸ್ವಯಂಸೇವೆ ನೀಡಲು ಸಿದ್ಧ. ಆದರೆ ಐಎಎಸ್ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News