ನನ್ನನ್ನು ಕೆಣಕಿ ಮಾನ ಕಳೆದುಕೊಳ್ಳಬೇಡಿ: ಸಚಿವ ಗೋಪಾಲಯ್ಯಗೆ ಡಿಕೆಶಿ ಎಚ್ಚರಿಕೆ

Update: 2020-04-26 11:52 GMT

ಬೆಂಗಳೂರು, ಎ.26: ಕೇಂದ್ರ ಸರಕಾರ ಕೊಟ್ಟ ಅಕ್ಕಿಯನ್ನು ಎಷ್ಟು ಬೆಲೆಗೆ ಯಾರು ಯಾರಿಗೆ ಮಾರುತ್ತಿದ್ದಾರೆ ಎಂಬ ಬಗ್ಗೆ ನನ್ನ ಬಳಿ ಸ್ಪಷ್ಟ ಮಾಹಿತಿ ಇದೆ, ಸುಮ್ಮನೆ ನನ್ನನ್ನು ಕೆಣಕಿ ಮಾನ ಕಳೆದುಕೊಳ್ಳಬೇಡಿ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಚಿವ ಗೋಪಾಲಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ರವಿವಾರ ನಗರದ ಬಸವ ಭವನದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಗೋಪಾಲಯ್ಯರಿಗಿಂತ ಮೊದಲೇ ಸಚಿವನಾಗಿದ್ದವನು. ಈ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆಂದು ಚೆನ್ನಾಗಿ ಗೊತ್ತಿದೆ. ಸುಮ್ಮನೆ ನನ್ನನ್ನು ಕೆಣಕಿ ಮಾನ ಕಳೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.

ಸಚಿವ ಗೋಪಾಲಯ್ಯ ತಮ್ಮ ಅಧಿಕಾರಿಗಳನ್ನು ಮುಚ್ಚಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮ್ಮ ವ್ಯವಸ್ಥೆಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ದಿನಸಿ ಪದಾರ್ಥಗಳನ್ನು ಸಂಗ್ರಹಿಸಬೇಕಾದರೆ ಅನೇಕ ಕಾನೂನು ಪ್ರಕ್ರಿಯೆಗಳಿವೆ. ಇಂತಹ ಸಂದರ್ಭದಲ್ಲಿ ಅನುಮತಿ ಇಲ್ಲದ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಿಸಿಟ್ಟುಕೊಂಡಿದ್ದು ಯಾಕೆಂದು ಅವರು ಪ್ರಶ್ನಿಸಿದರು.

ಅಕ್ರಮವಾಗಿ ಅಕ್ಕಿಯನ್ನು ಸಂಗ್ರಹಿಸಿಟ್ಟುಕೊಂಡಿರುವುದರ ಕುರಿತು ಎಷ್ಟು ಅಧಿಕಾರಿಗಳ ಜತೆ ಏನೇನು ಮಾತುಕತೆಯಾಗಿದೆ, ಸರಕಾರದ ಅಕ್ಕಿಯನ್ನು ಯಾರು ಎಲ್ಲಿ ಎಷ್ಟಕ್ಕೆ ಖರೀದಿಸಿದ್ದಾರೆ ಎಂಬುದು ನನಗೆ ಗೊತ್ತಿದೆ. ಈಗ ಜನರ ಆರೋಗ್ಯ ಕಾಪಾಡೋಣ. ಅವರ ಜೀವಗಳನ್ನು ಉಳಿಸೋಣ. ನಂತರದ ದಿನಗಳಲ್ಲಿ ಇವೆಲ್ಲವುಗಳ ಬಗ್ಗೆ ಚರ್ಚಿಸೋಣವೆಂದು ಡಿಕೆಶಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News