ಪ್ರಚೋದನಕಾರಿ ಟ್ವೀಟ್: ಸಂಸದ ಅನಂತಕುಮಾರ್ ಹೆಗಡೆ ಟ್ವಿಟರ್ ಖಾತೆ ಮೇಲೆ ನಿರ್ಬಂಧ

Update: 2020-04-26 12:42 GMT

ಕಾರವಾರ, ಎ.26: ತಬ್ಲೀಗ್ ಜಮಾಅತ್ ನೆಪದಲ್ಲಿ ಮಾಡಿದ ಪ್ರಚೋದನಕಾರಿ ಹಾಗೂ ದ್ವೇಷ ಹರಡುವ ಟ್ವೀಟ್ ಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಸಂಸದ, ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯ ಟ್ವಿಟರ್ ಖಾತೆ ಮೇಲೆ ಟ್ವಿಟರ್ ನಿಂದ ನಿರ್ಬಂಧ ವಿಧಿಸಲಾಗಿದೆ.  

ಟ್ವಿಟರ್ ನಿಯಮಗಳನ್ನು ಉಲ್ಲಂಘನೆ ಮಾಡಿರುವುದಾಗಿ ಹೆಗಡೆಗೆ ಟ್ವಿಟರ್ ನೋಟಿಸ್ ನಲ್ಲಿ ತಿಳಿಸಿದ್ದು, ಖಾತೆಯ ನಿರ್ಬಂಧ ತೆರವುಗೊಳಿಸಲು ನಿಯಮ ಉಲ್ಲಂಘಿಸಿದ ಟ್ವೀಟ್ ಡಿಲೀಟ್ ಮಾಡುವಂತೆ ಸೂಚನೆ ನೀಡಿದೆ. ಆದರೆ ತಾನು ಆ ಪ್ರಚೋದನಕಾರಿ ಟ್ವೀಟ್ ಅನ್ನು ಡಿಲೀಟ್ ಮಾಡುವುದಿಲ್ಲ ಎಂದು ಹೆಗಡೆ ಹೇಳಿದ್ದಾರೆ. 

ಸಂಸದ ಅನಂತಕುಮಾರ್ ತಬ್ಲೀಗಿಗಳ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿದ್ದರು. ಎಪ್ರಿಲ್ 16 ರಂದು ಮಾಡಿದ ಟ್ವೀಟ್ ನಲ್ಲಿ ತಬ್ಲೀಗಿ ಜಮಾಅತ್ ಮೂಲಕ ದೇಶದಲ್ಲಿ ಕೊರೋನ ಹರಡುವ ಸಂಚು ನಡೆದಿದೆ ಎಂಬರ್ಥದಲ್ಲಿ ಬರೆದಿದ್ದರು. ಜೊತೆಗೆ ಇದು ಬಯೋಟೆರರಿಸಂ ಎಂದೂ ಹ್ಯಾಷ್ ಟ್ಯಾಗ್ ಮೂಲಕ ಪರೋಕ್ಷವಾಗಿ ಸೂಚಿಸಿದ್ದರು. ಎಪ್ರಿಲ್ 24 ರಂದು ಟ್ವಿಟರ್ ಅವರ ಖಾತೆ ಮೇಲೆ ನಿರ್ಬಂಧ ವಿಧಿಸಿದೆ. 

ಈ ನಡುವೆ ಪ್ರಧಾನಿಗೆ ಪತ್ರ ಬರೆದಿರುವ ಹೆಗಡೆ ಕೇಂದ್ರ ಸರಕಾರವೇ ಒಂದು ಸ್ವದೇಶೀ ಟ್ವಿಟರ್ ರೀತಿಯ ತಾಣವನ್ನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News