ಪಾಲ್ಗರ್ ಸಾಧುಗಳ ಗುಂಪುಹತ್ಯೆ ವಿರುದ್ಧ ಅತ್ಯಂತ ಕಠಿಣ ಕ್ರಮವಾಗಲಿ: ಕರ್ನಾಟಕದ ಮುಸ್ಲಿಂ ಧರ್ಮಗುರುಗಳ ಆಗ್ರಹ

Update: 2020-05-01 18:12 GMT
ಫೈಲ್ ಚಿತ್ರ

ಬೆಂಗಳೂರು, ಮೇ 1: ಮಹಾರಾಷ್ಟ್ರದ ಪಾಲ್ಗರ್ ಎಂಬಲ್ಲಿ ಇಬ್ಬರು ಸಾಧುಗಳು ಹಾಗು ಅವರ ಚಾಲಕರನ್ನು ಗುಂಪೊಂದು ಭೀಕರವಾಗಿ ಥಳಿಸಿ ಹತ್ಯೆಗೈದಿರುವ ಘಟನೆ ಅತ್ಯಂತ ಆಘಾತಕಾರಿಯಾಗಿದೆ ಎಂದು ಕರ್ನಾಟಕದ ಇಸ್ಲಾಮಿಕ್ ವಿದ್ವಾಂಸರು ಹಾಗು ಧಾರ್ಮಿಕ ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದು ಯಾವುದೇ ಧರ್ಮದ ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿಯೂ ನಾಚಿಕೆಯಿಂದ ತಲೆತಗ್ಗಿಸಬೇಕಾದ ಅಮಾನವೀಯ ಘಟನೆ ಎಂದು ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.  

ಕರ್ನಾಟಕ ಜಮೀಯತೆ ಉಲಮಾ ಅಧ್ಯಕ್ಷ ಮೌಲಾನಾ ಮುಫ್ತಿ ಇಫ್ಟಿಕಾರ್ ಅಹ್ಮದ್ ಖಾಸ್ಮಿ, ಬೆಂಗಳೂರಿನ ಜಾಮೀಯಾ ಮಸೀದಿಯ ಧರ್ಮಗುರುಗಳಾದ ಮೌಲಾನಾ ಮಕ್ಸೂದ್ ಇಮ್ರಾನ್ ರಷಾದಿ, ಮರ್ಕಜ್ ಸುಲ್ತಾನ್ ಷಾ ಇದರ ಶೂರಾ ಸದಸ್ಯರಾದ ಮೌಲಾನಾ ಮುಫ್ತಿ ಅಸ್ಲಮ್ ರಷಾದಿ ಖಾಸ್ಮಿ ಸಹಿತ ಹಲವು ಇಸ್ಲಾಮಿಕ್ ವಿದ್ವಾಂಸರು ಹಾಗು ಧಾರ್ಮಿಕ ಮುಖಂಡರು ಈ ಪ್ರಕಟಣೆಯನ್ನು ನೀಡಿದ್ದಾರೆ. 

ಕರ್ನಾಟಕದ ಪ್ರಜೆಗಳು ವಿಶೇಷವಾಗಿ ಇಲ್ಲಿನ ಮುಸ್ಲಿಂ ಸಮುದಾಯ ಸಾಧುಗಳ ಈ ಅಮಾನುಷ ಹತ್ಯೆ ಘಟನೆಯನ್ನು ಕಟುವಾಗಿ ಖಂಡಿಸುತ್ತದೆ. ಈ ವಿಶ್ವದಲ್ಲಿ ಮನುಷ್ಯ ಜೀವ ಎಲ್ಲಕ್ಕಿಂತ ಮುಖ್ಯವಾದುದು. ಪ್ರತಿ ಧರ್ಮ ಹಾಗು ಕಾನೂನು ಮನುಷ್ಯ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತದೆ. ಇಸ್ಲಾಂ ಕೂಡ ಮನುಷ್ಯ ಜೀವವನ್ನು ರಕ್ಷಿಸುವುದು ಅತ್ಯಂತ ಮುಖ್ಯ ಎಂದು ಹೇಳುತ್ತದೆ. ತೀರಾ ಸಂಕಷ್ಟದ ಸಂದರ್ಭದಲ್ಲಿ ಒಂದು ಮನುಷ್ಯ ಜೀವ ಉಳಿಸಲು ಸಾಮಾನ್ಯವಾಗಿ ಧರ್ಮದಲ್ಲಿ ಅನುಮತಿಸದ ಕ್ರಮಕ್ಕೂ ಇಸ್ಲಾಂ ಅನುಮತಿ ನೀಡುತ್ತದೆ. ಒಂದು ಜೀವವನ್ನು ಉಳಿಸುವುದು ಇಡೀ ಮನುಕುಲವನ್ನು ಉಳಿಸಿದಂತೆ ಎಂದು ಕುರ್ ಆನ್ ಸಾರಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಗುಂಪು ಹತ್ಯೆ ಅತ್ಯಂತ ಅಮಾನವೀಯ, ಬರ್ಬರ ಕೃತ್ಯವಾಗಿದೆ. ಅದು ಇಡೀ ದೇಶದ ಗೌರವಕ್ಕೆ ಚ್ಯುತಿ ತರುವುದಲ್ಲದೆ ಅಭಿವೃದ್ಧಿ ಹಾಗು ಸ್ಥಿರತೆಗೂ ಕಂಟಕವಾಗುತ್ತದೆ. ಆದ್ದರಿಂದ ಪಾಲ್ಗರ್ ಗುಂಪು ಹತ್ಯೆ ಬಗ್ಗೆ ನಿಷ್ಪಕ್ಷ, ಸ್ವತಂತ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಎಂದು ಕರ್ನಾಟಕ ಮುಸ್ಲಿಂ ಸಮುದಾಯದ ಪರವಾಗಿ ಈ ಇಸ್ಲಾಮಿಕ್ ವಿದ್ವಾಂಸರು ಹಾಗು ಧಾರ್ಮಿಕ ನಾಯಕರು ಆಗ್ರಹಿಸಿದ್ದಾರೆ. 

ಪಾಲ್ಗರ್ ಗುಂಪು ಹತ್ಯೆಗೆ ವದಂತಿ ಹರಡಿದ್ದೇ ಕಾರಣ ಎಂದು ಹೇಳಲಾಗಿದೆ. ಆದ್ದರಿಂದ ಕೇಂದ್ರ ಸರಕಾರ ಸುಳ್ಳು ಸುದ್ದಿ ಹಾಗು ವದಂತಿ ಹರಡುವ ಹಾಗು ಗುಂಪು ಹತ್ಯೆ ವಿರುದ್ಧ ಅತ್ಯಂತ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ. 

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News