ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅರಾಜಕತೆ ಸೃಷ್ಟಿ: ಸಿದ್ದರಾಮಯ್ಯ

Update: 2020-05-05 13:56 GMT

ಬೆಂಗಳೂರು, ಮೇ 5: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿ ಮತ್ತು ಸಡಿಲಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಗಂಟೆಗೊಂದರಂತೆ ಹೊರಡಿಸುತ್ತಿರುವ ಆದೇಶದಿಂದಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಂಗಳವಾರ ಕಾರ್ಮಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಜೆಡಿಎಸ್, ಸಿಪಿಎಂ ಸೇರಿದಂತೆ ವಿವಿಧ ಪ್ರತಿಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಲಸಿಗ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಡೆದುಕೊಳ್ಳುತ್ತಿರುವ ರೀತಿ ಅಮಾನವೀಯವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.

ಬೆಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಹೊರಟ್ಟಿದ್ದ ಕಾರ್ಮಿಕರ ಬಳಿ ಸಾರಿಗೆ ಇಲಾಖೆ ಮೂರು ಪಟ್ಟು ಟಿಕೆಟ್ ದರ ನಿಗದಿ ಪಡಿಸಿತ್ತು. ಈಗಾಗಲೇ ಲಾಕ್‍ಡೌನ್‍ನಿಂದ ಕಂಗಾಲಾಗಿದ್ದ ಕಾರ್ಮಿಕರು ದುಬಾರಿ ಟಿಕೆಟ್‍ದರವನ್ನು ಭರಿಸಲಾಗದೆ ಸಮಸ್ಯೆಗೆ ಸಿಲುಕಿದ್ದರು. ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಲಿಕಾರ್ಮಿಕರ ಉಚಿತ ಪ್ರಯಾಣಕ್ಕೆ ಸಾರಿಗೆ ಇಲಾಖೆಗೆ ಒಂದು ಕೋಟಿ ರೂ.ಚೆಕ್ ನೀಡಲು ಮುಂದಾದ ಸಂದರ್ಭದಲ್ಲಿ ರಾಜ್ಯ ಸರಕಾರ ಉಚಿತ ಪ್ರಯಾಣಕ್ಕೆ ಅನುಮತಿ ನೀಡಿದೆ ಎಂದು ಅವರು ಹೇಳಿದರು.

ದೂರದ ಜಿಲ್ಲೆ, ರಾಜ್ಯಗಳಿಗೆ ಹೋಗುವ, ಬರುವ ಕಾರ್ಮಿಕರಿಗೆ ರೈಲಿನ ವ್ಯವಸ್ಥೆ ಮಾಡುವುದು ಕೇಂದ್ರ ಸರಕಾರದ ಕರ್ತವ್ಯ. ಆದರೆ, ಕೇಂದ್ರ ಸರಕಾರ ಕಾರ್ಮಿಕರ ಪ್ರಯಾಣ ವೆಚ್ಚಕ್ಕೆ ರಾಜ್ಯದ ಪಾಲು ಕೇಳುತ್ತಿದೆ. ರೈಲ್ವೆ ಇಲಾಖೆ ಕೇಂದ್ರದ ಅಧೀನದಲ್ಲಿದೆ. ಹೀಗಾಗಿ ಕೇಂದ್ರ ಸರಕಾರವೇ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಸಂಪೂರ್ಣವಾಗಿ ಭರಿಸಬೇಕು. ಹೊರದೇಶದಲ್ಲಿರುವವರನ್ನು ಕರೆತರಲು ವಿಮಾನದ ವ್ಯವಸ್ಥೆ ಮಾಡುವ ಸರಕಾರಗಳು ಕಾರ್ಮಿಕರ ವಿಚಾರದಲ್ಲಿ ಮೀನಮೇಷ ಎಣಿಸುವುದೇಕೆಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು ಸಿಎಸ್‍ಆರ್ ನಿಧಿಯ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1500ಕೋಟಿ ರೂ.ಗಳ ದೇಣಿಗೆ ಕೊಟ್ಟಿದ್ದಾರೆ. ಆ ಹಣದಲ್ಲಿ ಕಾರ್ಮಿಕರಿಗೆ ಕೊಂಚ ವೆಚ್ಚ ಮಾಡಲು ಕಷ್ಟ ಪಡುತ್ತಿರುವುದೇಕೆ. ಈ ಕುರಿತು ಸರಕಾರ ಸ್ಪಷ್ಟ ಹೇಳಿಕೆ ನೀಡಬೇಕೆಂದು ಅವರು ಒತ್ತಾಯಿಸಿದರು.

ಸಭೆಯಲ್ಲಿ ಜೆಡಿಎಸ್‍ನ ಎಚ್.ಡಿ.ರೇವಣ್ಣ, ಕುಪೇಂದ್ರರೆಡ್ಡಿ, ಸಿಪಿಎಂ ನಾಯಕ ಜಿ.ಎನ್.ನಾಗರಾಜ್, ಸಿಪಿಐ ಸ್ವಾತಿ ಸುಂದರೇಶ್, ರೈತ ಸಂಘಟನೆಯ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ ಮತ್ತಿತರರಿದ್ದರು.

ಸರಕಾರಕ್ಕೆ ಹೃದಯ ಇದೆಯೇ

ತಮ್ಮ ತಮ್ಮ ಊರುಗಳಿಗೆ ಹೋಗಲು ನಿರ್ಧರಿಸಿರುವ ಕಾರ್ಮಿಕರನ್ನು ಮೆಜೆಸ್ಟಿಕ್‍ನಿಂದ ಅರಮನೆ ಮೈದಾನಕ್ಕೆ, ಅಲ್ಲಿಂದ ಪೀಣ್ಯಕ್ಕೆ ಅಲೆದಾಡಿಸಲಾಗುತ್ತಿದೆ. ಲಗೇಜು ಹೊತ್ತು ಮಹಿಳೆಯರು, ಮಕ್ಕಳು ಅಲ್ಲಿಂದಿಲ್ಲಿಗೆ ಅಲೆದಾಡುತ್ತಿರುವುದನ್ನು ನೋಡಿದರೆ ಕಣ್ಣೀರು ಬರುತ್ತದೆ. ಈ ಸರಕಾರಕ್ಕೆ ಹೃದಯ ಏನಾದರು ಇದೆಯೇ.

ಬಸ್‍ಗಳಿಗೆ ಕಾಯುತ್ತಾ ಅನ್ನ, ನೀರು ಇಲ್ಲದೆ, ಮಲಗಲು ಜಾಗವಿಲ್ಲದೆ ಬಸ್ ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಪರದಾಡುತ್ತಿರುವುದನ್ನು ನೋಡಿಯೂ ಸರಕಾರಕ್ಕೆ ಕನಿಕರ ಬರುತ್ತಿಲ್ಲ. ಕಾರ್ಮಿಕರಿಗೆ ಬಸ್ ಹತ್ತಲು ಸೂಕ್ತವಾದ ಸ್ಥಳ ನಿಗದಿ ಮಾಡಲು ಸರಕಾರಕ್ಕೆ ಇರುವ ತೊಂದರೆಯಾದರು ಏನು.

ಪ್ರಧಾನಿ ಮಂತ್ರಿಗಳ ಪರಿಹಾರ ನಿಧಿಗೆ 35 ಸಾವಿರ ಕೋಟಿ ರೂ. ದೇಣಿಗೆ ಬಂದಿದೆ. ರೈಲಿನ ಮೂಲಕ ಕಾರ್ಮಿಕರನ್ನು ಕಳುಹಿಸಲು 60ಕೋಟಿ ರೂ.ವೆಚ್ಚ ಆಗಬಹುದು. ಇದು ಸರಕಾರಕ್ಕೆ ದೊಡ್ಡ ಮೊತ್ತವೇನಲ್ಲ. ಇಷ್ಟಕ್ಕೂ ಇದೆಲ್ಲಾ ಜನತೆಯ ಹಣ. ಇದನ್ನು ಜನತೆಗೆ ವಿನಿಯೋಗಿಸಲಿ.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News