ಲಂಡನ್ ನಿಂದ ಮುಂಬೈಗೆ 50,000 ರೂ.: ವಿದೇಶಗಳಲ್ಲಿರುವ ಭಾರತೀಯರ ವಾಪಸಾತಿಗೆ ಕೇಂದ್ರ ಸಜ್ಜು

Update: 2020-05-05 16:08 GMT

ಹೊಸದಿಲ್ಲಿ,ಮೇ 5: ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಎರಡು ಲಕ್ಷಕ್ಕೂ ಅಧಿಕ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲು ಭಾರತವು ಸಜ್ಜಾಗಿದೆ. ವಿಶ್ವದ ಬೃಹತ್ ತೆರವು ಕಾರ್ಯಾಚರಣೆಗಳಲ್ಲಿ ಒಂದಾಗಿರುವ ಈ ಪ್ರಕ್ರಿಯೆ ಮೇ 7ರಿಂದ ಆರಂಭಗೊಳ್ಳಲಿದ್ದು, ವಿಶೇಷ ವಿಮಾನಯಾನಗಳನ್ನು ಕೈಗೊಳ್ಳಲಾಗುವುದು ಎಂದು ನಾಗರಿಕ ವಾಯುಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಂಗಳವಾರ ತಿಳಿಸಿದರು.

ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,ಇದೊಂದು ವಿಶೇಷ ಅಭಿಯಾನವಾಗಿದ್ದು,ಇದನ್ನು ಬಳಸಿಕೊಳ್ಳುವವರು ಪ್ರಯಾಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಉದಾಹರಣೆಗೆ ಲಂಡನ್‌ನಿಂದ ಮುಂಬೈ ಅಥವಾ ದಿಲ್ಲಿ ಅಥವಾ ಬೆಂಗಳೂರಿಗೆ 50,000 ರೂ.ಟಿಕೆಟ್ ಶುಲ್ಕವನ್ನು ನಿಗದಿಗೊಳಿಸಲಾಗಿದ್ದು,ಚಿಕಾಗೋ ಅಥವಾ ಸ್ಯಾನ್‌ಫ್ರಾನ್ಸಿಸ್ಕೋದಿಂದ ಆಗಮಿಸುವವರು ಸುಮಾರು ಒಂದು ಲ.ರೂ.ಪಾವತಿಸಬೇಕಾಗುತ್ತದೆ. ಸಚಿವಾಲಯವು ಶೀಘ್ರವೇ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.

 ಇದೇ ವೇಳೆ ವಿಮಾನಯಾನಗಳು ಸ್ಥಗಿತಗೊಂಡಿರುವುದರಿಂದ ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದೇಶಿಯರನ್ನು ಅವರ ರಾಷ್ಟ್ರಗಳಿಗೆ ವಾಪಸ್ ಕಳುಹಿಸಲೂ ಸರಕಾರವು ನಿರ್ಧರಿಸಿದೆ ಎಂದರು.

ಮೊದಲ ವಾರದಲ್ಲಿಯೇ 13 ದೇಶಗಳಿಂದ 64 ಯಾನಗಳ ಮೂಲಕ 14,800ಕ್ಕೂ ಅಧಿಕ ಭಾರತೀಯರನ್ನು ಮರಳಿ ಕರೆತರಲಾಗುವುದು. ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಕಾರ್ಯಾಚರಣೆಗೆ ಬಳಸುವ ವಿಮಾನವನ್ನು ಅವಲಂಬಿಸಿ ಪ್ರತಿಯೊಂದು ಯಾನದಲ್ಲಿ 200ರಿಂದ 300 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ವಿಶೇಷ ವಿಮಾನಗಳನ್ನು ಹತ್ತುವ ಮುನ್ನ ಪ್ರಯಾಣಿಕರು ತಮಗೆ ಜ್ವರ, ಕೆಮ್ಮು. ಮಧುಮೇಹ ಅಥವಾ ಇನ್ಯಾವುದೇ ಉಸಿರಾಟದ ಕಾಯಿಲೆಯಿದೆಯೇ ಎನ್ನುವುದನ್ನು ಘೋಷಿಸಬೇಕಾಗುತ್ತದೆ. ಭಾರತಕ್ಕೆ ಆಗಮಿಸಿದ ಬಳಿಕ ಅವರನ್ನು ಮತ್ತೊಮ್ಮೆ ತಪಾಸಣೆಗೆ ಒಳಪಡಿಸಲಾಗುವುದು ಮತ್ತು 14 ದಿನಗಳ ಕಾಲ ಆಸ್ಪತ್ರೆ ಅಥವಾ ಸರಕಾರಿ ಕೇಂದ್ರದಲ್ಲಿ ಕ್ವಾರಂಟೈನ್ ವಿಧಿಸಲಾಗುವುದು.

ಭಾರೀ ಸಂಖ್ಯೆಯಲ್ಲಿ ಜನರನ್ನು ಕರೆತರಬೇಕಿರುವುದರಿಂದ ಈ ತೆರವು ಕಾರ್ಯಾಚರಣೆಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳನ್ನೂ ಭಾಗಿಯಾಗಿಸಬಹುದು ಎಂದು ಕೇಂದ್ರವು ತಿಳಿಸಿದೆ.

ತನ್ಮಧ್ಯೆ ಭಾರತೀಯ ನೌಕಾಪಡೆಯೂ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದು,ಅದರ ಮೂರು ನೌಕೆಗಳು ಪಶ್ಚಿಮ ಏಷ್ಯಾ ಮತ್ತು ಮಾಲ್ದೀವ್ಸ್‌ಗೆ ತೆರಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News