ಕೆ.ಸಿ.ರೆಡ್ಡಿ ಸಮ-ಸಮಾಜ ನಿರ್ಮಾಣ ತತ್ವ ಪ್ರತಿಪಾದಕರು: ಬಿ.ಎಸ್.ಯಡಿಯೂರಪ್ಪ

Update: 2020-05-05 17:12 GMT

ಬೆಂಗಳೂರು, ಮೇ 5: ರಾಜ್ಯದ ಮೊದಲ ಮುಖ್ಯಮಂತ್ರಿ ಆಗಿದ್ದ ಕೆ.ಸಿ.ರೆಡ್ಡಿ ಅವರು ಸಮ-ಸಮಾಜ ನಿರ್ಮಾಣ ತತ್ವ ಪ್ರತಿಪಾದಕರಾಗಿದ್ದರು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ಕೆ.ಸಿ.ರೆಡ್ಡಿ ಅವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸಾಮಾನ್ಯ ಕೃಷಿ ಕುಟುಂಬದಿಂದ ಬಂದ ಕೆ.ಸಿ.ರೆಡ್ಡಿ ಅವರು ಬಹುಮುಖ ಪ್ರತಿಭೆವುಳ್ಳವರಾಗಿದ್ದರು. ಮೊದಲು ಪ್ರಜಾ ಪಕ್ಷ ಸಂಸ್ಥಾಪಕರಾಗಿದ್ದ ಅವರು, ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ ಶಾಸಕರು, ಸಂಸದರು ಹಾಗೂ ಈ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತವನ್ನು ನೀಡಿದ್ದರು ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಅವರು ಮೂರು ಬಾರಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದ್ದರು. ಸಿಎಂ ಆಗಿದ್ದ ವೇಳೆಯಲ್ಲಿ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಿದ್ದ ಅವರು, ಶಕ್ತಿಕೇಂದ್ರ ವಿಧಾನಸೌಧಕ್ಕೆ ಚಾಲನೆ ನೀಡಿದ್ದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಿಎಂ ಕ್ಯಾಸಂಬಳ್ಳಿ ಚೆಂಗಲರಾಯರೆಡ್ಡಿ ಕುಟುಂಬಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News