ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲು ಸರಕಾರ ಸಾರಿಗೆ ವ್ಯವಸ್ಥೆ ಮಾಡಬೇಕು: ಬಸವರಾಜ ಹೊರಟ್ಟಿ

Update: 2020-05-05 17:26 GMT

ಬೆಂಗಳೂರು, ಮೇ 5: ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲು ಸರಕಾರ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಈ ಕುರಿತು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಅವರಿಗೆ ಪತ್ರ ಬರೆದಿದ್ದು ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎಲ್ಲ ಶಿಕ್ಷಕರಿಗೆ ತಕ್ಷಣ ಹಾಜರಾಗುವಂತೆ ಸರಕಾರ ನಿರ್ದೇಶನ ನೀಡಿದೆ. ಇದಕ್ಕೆ ತಕರಾರು ಇಲ್ಲ. ಕೊರೋನ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡಿರುವುದರಿಂದ ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದ್ ಆಗಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರು ಹೇಗೆ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯ? ಈಗ ಬಾಲ್ಕಿಯಲ್ಲಿರುವ ಸರಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುವವರು, ಅವರ ಸ್ವಂತ ಊರಾದ ಬೆಳಗಾವಿಯಲ್ಲಿ ಇರುವವರು. ಅವರು ಬಾಲ್ಕಿಗೆ ಹೋಗಲು ಹೇಗೆ ಸಾದ್ಯ? ಬೆಳಗಾವಿ ಜಿಲ್ಲೆಯು ರೆಡ್‍ಜೋನ್ ಇರುವದರಿಂದ ಇವರಿಗೆ ಅನುಮತಿ ನೀಡುವದು ಕಷ್ಟ. ಈ ಸಮಸ್ಯೆಯು ಸರಕಾರದ ಗಮನಕ್ಕೆ ಬಂದಿದೆಯೇ ಎಂಬುದನ್ನು ತಾವು ಸ್ಪಷ್ಟಪಡಿಸಿರಿ. ಒಂದು ವೇಳೆ ಇದು ಸರಕಾರದ ಗಮನಕ್ಕೆ ಬಂದಿದ್ದರೆ ಅದಕ್ಕೆ ಸೂಕ್ತವಾಗುವಂತೆ ಸಾರಿಗೆ ಸೌಲಭ್ಯಕ್ಕೆ ಅನುಮತಿ ಕೊಡಿಸಿದಲ್ಲಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಲಿದೆ ಎಂದಿದ್ದಾರೆ.

ಇನ್ನು ಕೆಲವರು ತಮ್ಮ ತಮ್ಮ ಊರಿಗೆ ಹೋಗಿದ್ದಾರೆ. ಕೆಲವರು ಕಾರ್ಯನಿಮಿತ್ತ ಬೇರೆ ಬೇರೆ ರಾಜ್ಯಗಳಲ್ಲಿ ಇದ್ಧಾರೆ. ಧಾರವಾಡ ಕಾಲೇಜಿನಲ್ಲಿ ಕೆಲಸ ಮಾಡುವ ಒಬ್ಬ ಹೆಣ್ಣು ಮಗಳು ಒಂದು ತಿಂಗಳ ಹಿಂದೆ ಮದುವೆಗೆಂದು ಅನುಮತಿ ಪಡೆದು ಕೊಲ್ಲಾಪೂರಕ್ಕೆ ಹೋಗಿರುವವಳು. ಈಗ ಮಹಾರಾಷ್ಟ್ರದಿಂದ ಇಲ್ಲಿಗೆ ಬರಲು ಅವರಿಗೆ ಅನುಮತಿ ಕೊಡುವದಿಲ್ಲ. ಜೊತೆಗೆ ಅವರು ಬೇರೆ ಜಿಲ್ಲೆ ಅಥವಾ ರಾಜ್ಯದಿಂದ ಪ್ರಯಾಣಿಸಿದರೆ 14 ದಿನಗಳ ಕಾಲ ಕ್ವಾರಂಟೈನ್ ಇರಲೇ ಬೇಕಾಗುತ್ತದೆ. ಸೀಲ್‍ಡೌನ್ ಪ್ರದೇಶಗಳಿಂದ ಯಾರಿಗೂ ಸಹ ಹೊರ ಬರುಲು ಅನುಮತಿ ಇರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಶಿಕ್ಷಕರು ತಾವು ಸೂಚಿಸಿದ ಅವಧಿಯಲ್ಲಿಯೇ ಕಾಲೇಜುಗಳಿಗೆ ಹೇಗೆ ಹಾಜರಾಗಲು ಸಾಧ್ಯ ಎಂಬುದನ್ನು ತಿಳಿಸಬೇಕು ಎಂದು ಕೋರಿದ್ದಾರೆ.

ಈಗಾಗಲೇ ಕಾಲೇಜುಗಳ ಶೈಕ್ಷಣಿಕ ಅವಧಿ ಮುಗಿದಿದ್ದು, ಕೆಲವೊಂದು ವಿಶ್ವವಿದ್ಯಾಲಯಗಳಲ್ಲಿ ಕೊನೆಯ ದಿನಾಂಕ ಏಪ್ರಿಲ್ 7, 12 ಹಾಗೂ ಮೇ ಮೊದಲ ವಾರ ಹೀಗೇ ಬೇರೆ ಬೇರೆ ದಿನಾಂಕಗಳಂದು ವಿಶ್ವವಿದ್ಯಾಲಯಗಳು ಶೈಕ್ಷಣಿಕ ವೇಳಾಪಟ್ಟಿ ನಿಗದಿಪಡಿಸಿವೆ. ಕೆಲವೊಂದು ಖಾಸಗಿ ಕಾಲೇಜುಗಳು ಇಂದು ಪ್ರಾರಂಭ ಮಾಡಿ, ಮತ್ತೆ ಮೇ 17 ರವರೆಗೆ ಘೋಷಣೆ ಮಾಡಿವೆ. ರಾಜ್ಯದಲ್ಲಿ ಮೇ 17ರವರೆಗೆ ಲಾಕಡೌನ್ ವಿಸ್ತರಣೆ ಆಗಿರುವದರಿಂದ ಅಲ್ಲಿಯವರೆಗೂ ಸದರಿ ಎಲ್ಲ ಕಾಲೇಜುಗಳಿಗೂ ರಜೆ ವಿಸ್ತರಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಅತಿಥಿ ಉಪನ್ಯಾಸಕರಿಗೆ ಕೂಡಲೇ ವೇತನ ಬಿಡುಗಡೆ ಮಾಡಿ
ರಾಜ್ಯದ ಸುಮಾರು 14,228 ಅತಿಥಿ ಉಪನ್ಯಾಸಕರಿಗೆ ಕಳೆದ ಡಿಸೆಂಬರ್  ಸಂಬಳ ನೀಡಲಾಗಿಲ್ಲ. ಇದರಿಂದ ಇವರ ಬದುಕು ಶೋಚನೀಯವಾಗಿದ್ದು, ಕೂಡಲೇ ಸಂಬಳ ನೀಡುವ ಸಂಬಂಧ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು ಒತ್ತಾಯಿಸಿದ್ದೇನೆ.
-ಬಸವರಾಜ ಹೊರಟ್ಟಿ, ವಿಧಾನಪರಿಷತ್‍ನ ಹಿರಿಯ ಸದಸ್ಯ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News