ಗ್ರಾ.ಪಂ. ಚುನಾವಣೆ ಮುಂದೂಡಲು ಆಯೋಗಕ್ಕೆ ಪತ್ರ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ

Update: 2020-05-05 18:03 GMT

ಬೆಂಗಳೂರು, ಮೇ 5: ಮಾರಕ ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಇದೇ ತಿಂಗಳು ನಡೆಯಬೇಕಿದ್ದ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದೂಡುವಂತೆ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಈ ಸಂಬಂಧದ ಸಚಿವ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಅವಧಿಯಲ್ಲಿ ಆಡಳಿತ ನಡೆಸುವ ಸಂಬಂಧ ಆಡಳಿತಾಧಿಕಾರಿ ನೇಮಕ ಮಾಡಬೇಕೋ ಅಥವಾ ಆಡಳಿತ ಸಮಿತಿ ರಚನೆ ಮಾಡಬೇಕೋ ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.

ನನ್ನ ನೇತೃತ್ವದಲ್ಲಿ ರಚಿಸಲಾಗಿರುವ ಸಂಪುಟ ಉಪ ಸಮಿತಿಯಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಜಗದೀಶ್ ಶೆಟ್ಟರ್, ಕೋಟ ಶ್ರೀನಿವಾಸ ಪೂಜಾರಿ, ಜೆ.ಸಿ.ಮಾಧುಸ್ವಾಮಿ ಇದ್ದಾರೆ. ಇದೇ ವೇಳೆ ಗ್ರಾಮೀಣಾಭಿವೃದ್ಧಿ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ  ಚರ್ಚಿಸಲಾಗಿದೆ ಎಂದರು.

ಚರ್ಚೆಯ ಎಲ್ಲ ವಿವರಗಳನ್ನು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರಕಾರ ಗ್ರಾ.ಪಂ.ಚುನಾವಣೆಯ ಕುರಿತು ಸೂಕ್ತ ನಿರ್ಧಾರವನ್ನು ಮಾಡಲಿದೆ. ಆಯೋಗವೂ ಚುನಾವಣೆ ಮುಂದೂಡಲು ಒಪ್ಪಿಗೆ ನೀಡಲು ಸಾಧ್ಯತೆಗಳಿವೆ ಎಂದು ತಿಳಿಸಿದರು.

ನಾಳೆಯಿಂದ ರಾಜ್ಯದಲ್ಲಿ ಅಂತರ್ಜಲ ಯೋಜನೆ ಆರಂಭವಾಗಲಿದ್ದು, ಎಲ್ಲ ಜಿಲ್ಲೆಗಳಲ್ಲಿ ನರೇಗಾ ಮೂಲಕ 273 ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಾರಂಭವಾಗಲಿದೆ. ಪ್ರಾಯೋಗಿಕವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಯೋಜನೆ ಜಾರಿಗೆ ಬರಲಿದ್ದು, ಆರ್ಟ್ ಆಫ್ ಲಿವಿಂಗ್ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಟಾನಕ್ಕೆ ಚಾಲನೆ ನೀಡಲಾಗುವುದು ಎಂದರು.

ಸಮಗ್ರ ಅಂತರ್ಜಲ ಪುನಶ್ಚೇತನಕ್ಕೆ ಈ ಯೋಜನೆ ಸಹಕಾರಿಯಾಗಲಿದ್ದು, ಯಾದಗಿರಿ, ಬಳ್ಳಾರಿ, ಉತ್ತರ ಕನ್ನಡ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ 8ರಿಂದ 10 ಜಿಲ್ಲೆಗಳಲ್ಲಿ ಕ್ರಿಯಾ ಯೋಜನೆ ರೂಪಿಸಲಿದ್ದು, ಜೂನ್ ವೇಳೆಗೆ ಉದ್ದೇಶಿತ ಯೋಜನೆ ಪ್ರಾರಂಭಗೊಳ್ಳಲಿದೆ ಎಂದು ಈಶ್ವರಪ್ಪ ಇದೇ ವೇಳೆ ಮಾಹಿತಿ ನೀಡಿದರು.

ಸಿದ್ದರಾಮಯ್ಯರಿಗೆ ತಿರುಗೇಟು: ಮದ್ಯ ಮಾರಾಟ ಆರಂಭಿಸಿ ಎಂದು ವಿಪಕ್ಷ ನಾಯಕರೇ ಸಲಹೆ ನೀಡುತ್ತಾರೆ. ಇದೀಗ ಪೂರ್ವ ತಯಾರಿ ಇಲ್ಲದೆ ಮದ್ಯ ಮಾರಾಟ ಆರಂಭ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. 

ಕುಡುಕರಿಗೆ ಶಿಸ್ತು ಪಾಲನೆ ಮಾಡಿ ಅಂದರೆ ಅವರು ಮಾಡುತ್ತಾರೆಯೇ? ಕುಡುಕರು ಹೇಗೆ ಇರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲೆ ಒಂದು ಸಮಿತಿ ರಚನೆ ಮಾಡುವುದು ಉತ್ತಮ ಎಂದು ಲೇವಡಿ ಮಾಡಿದ ಈಶ್ವರಪ್ಪ, ಸಿದ್ದರಾಮಯ್ಯನವರ ನೀಡುವ ಸಲಹೆಗಳನ್ನು ಸರಕಾರ ಪಾಲಿಸಲಿದೆ ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News