ಕೊರೋನ ಮರಣ ಮೃದಂಗ: ದೇಶದಲ್ಲಿ ಒಂದೇ ದಿನ 199 ಜನ ಸಾವು

Update: 2020-05-06 04:30 GMT

ಹೊಸದಿಲ್ಲಿ: ಲಾಕ್‌ಡೌನ್ ನಡುವೆಯೂ ದೇಶದಲ್ಲಿ ಒಂದೇ ದಿನ 199 ಮಂದಿ ಕೋವಿಡ್-19 ಶಂಕಿತರು ಮೃತಪಟ್ಟಿರುವುದು, ಭಯಾನಕ ಸಾಂಕ್ರಾಮಿಕ ಕಳವಳಕಾರಿ ಹಂತಕ್ಕೆ ತಲುಪಿರುವುದರ ಸ್ಪಷ್ಟ ಸೂಚನೆಯಾಗಿದೆ. ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,688ಕ್ಕೇರಿದೆ. ಅಂತೆಯೇ ಒಂದೇ ದಿನ 2801 ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 50 ಸಾವಿರದ ಸನಿಹ ಅಂದರೆ 49,333ಕ್ಕೇರಿದೆ.

ಕಳೆದ ಕೆಲ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾವು ಸಂಭವಿಸಿರುವುದರಿಂದ ಸೋಂಕಿತರ ಮರಣ ಪ್ರಮಾಣ ದರ ಕೂಡಾ 3.2%ದಿಂದ 3.4%ಕ್ಕೇರಿದೆ. 199 ಸಾವಿನ ಪೈಕಿ ಬಂಗಾಳದಲ್ಲೇ 79 ಸಾವು ಸಂಭವಿಸಿದೆ. ಈ ಪೈಕಿ 72 ಸಾವನ್ನು ಈ ಹಿಂದೆ ಕೊರೋನ ಸಾವಲ್ಲ ಎಂದು ಪರಿಗಣಿಸಿ, ಕೊರೋನ ಸಂಬಂಧಿ ರೋಗಗಳಿಂದ ಆದ ಸಾವು ಎಂದು ನಿರ್ಧರಿಸಲಾಗಿತ್ತು. ಉಳಿದಂತೆ ಗುಜರಾತ್‌ನಲ್ಲಿ 49 ಹಾಗೂ ಮಹಾರಾಷ್ಟ್ರದಲ್ಲಿ 34 ಮಂದಿ ಸಾವನ್ನಪ್ಪಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮೃತಪಟ್ಟ 72 ಮಂದಿಗೆ ಕೊರೋನ ವೈರಸ್ ಇತ್ತು. ಆದರೆ ಅವರ ಸಾವಿಗೆ ಕೊರೋನ ವೈರಸ್ ಕಾರಣವಲ್ಲ; ಇತರ ಸಂಬಂಧಿತ ರೋಗಗಳಿಂದ ಅವರು ಮೃತಪಟ್ಟಿದ್ದಾರೆ ಎಂದು ಬಂಗಾಳ ಹೇಳಿಕೊಂಡಿದೆ. ಬಂಗಾಳದಲ್ಲಿ ಮಂಗಳವಾರ ಒಂದೇ ದಿನ 85 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1344ಕ್ಕೇರಿದೆ.

ಆರೋಗ್ಯ ಸಚಿವಾಲಯದ ಹೇಳಿಕೆ ಪ್ರಕಾರ ಕಳೆದ 24 ಗಂಟೆಗಳಲ್ಲಿ 3900 ಹೊಸ ಪ್ರಕರಣಗಳು ಹಾಗೂ 195 ಸಾವಿನ ಪ್ರಕರಣಗಳು ದಾಖಲಾಗಿವೆ. ರಾಜ್ಯ ಸರ್ಕಾರಗಳಿಂದ ಬಿಡುಗಡೆಯಾದ ಅಂಕಿ ಅಂಶಗಳ ಆಧಾರದಲ್ಲಿ ಈ ಪೈಕಿ ಬಹುತೇಕ ಪ್ರಕರಣಗಳು ಈಗಾಗಲೇ ವರದಿಯಾಗಿವೆ.

ರಾಜ್ಯಗಳಿಂದ ಧನಾತ್ಮಕ ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳನ್ನು ವರದಿ ಮಾಡುವುದು ವಿಳಂಬವಾಗಿರುವುದರಿಂದ ಈ ದಿಢೀರ್ ಏರಿಕೆ ಕಂಡುಬಂದಿದೆ ಎನ್ನುವುದು ಕೇಂದ್ರದ ಸಬೂಬು. ಈ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿದೆ ಎಂದು ಕೇಂದ್ರ ಹೇಳಿಕೊಂಡಿದೆ. ಆದ್ದರಿಂದ ಸಕಾಲಿಕವಾಗಿ ವರದಿ ಮಾಡುವುದು ಹಾಗೂ ಕ್ಲಿನಿಕಲ್ ನಿರ್ವಹಣೆ ಮುಖ್ಯವಾದದ್ದು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ 206 ಹೊಸ ಪ್ರಕರಣ ಬೆಳಕಿಗೆ ಬರುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 5000 ದಾಟಿದೆ. ಗುಜರಾತ್ ಮಂಗಳವಾರ ಗರಿಷ್ಠ (49) ಸಾವನ್ನು ಕಂಡಿದ್ದು, ರಾಜ್ಯದಲ್ಲಿ ಮೃತರ ಸಂಖ್ಯೆ 368ಕ್ಕೇರಿದೆ. ಒಂದೇ ದಿನ 441 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 6245ಕ್ಕೇರಿದೆ. ಅಹ್ಮದಾಬಾದ್‌ನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದ್ದು, ಈ ಒಂದು ನಗರದಲ್ಲೇ 349 ಮಂದಿಗೆ ಹೊಸದಾಗಿ ಸೋಂಕು ಹರಡಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 984 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 15 ಸಾವಿರದ ಗಡಿ ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News