ಅನಿವಾಸಿ ಕನ್ನಡಿಗರ ನೆರವಿಗಾಗಿ ಸಹಾಯವಾಣಿ ತೆರೆಯುವಂತೆ ಮುಖ್ಯಮಂತ್ರಿಗೆ ಸಿ.ಟಿ.ರವಿ ಮನವಿ

Update: 2020-05-06 17:23 GMT

ಬೆಂಗಳೂರು, ಮೇ 6: ವಿಶ್ವದಾದ್ಯಂತ ನೆಲೆಸಿರುವ, ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಅಗತ್ಯ ಮಾಹಿತಿ ನೀಡಲು ಹಾಗೂ ಅವರನ್ನು ಸಮನ್ವಯ ಸಾಧಿಸುವ ದೃಷ್ಟಿಯಿಂದ ಈಗಾಗಲೆ ತಮಿಳುನಾಡು ಹಾಗೂ ಕೇರಳ ಸರಕಾರ ಸ್ಥಾಪಿಸಿರುವಂತೆ ರಾಜ್ಯ ಸರಕಾರ 24/7 ಸಹಾಯವಾಣಿಯನ್ನು ತ್ವರಿತವಾಗಿ ತೆರೆಯುವ ಅಗತ್ಯವಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಿರುವ ಅವರು, ಉನ್ನತ ವ್ಯಾಸಂಗಕ್ಕೆ ತೆರಳಿ ಕೊರೋನ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳ ವೀಸಾ ಅವಧಿಯನ್ನು ಶೈಕ್ಷಣಿಕ ಅವಧಿ ಮುಗಿಯುವವರೆಗೆ ವಿಸ್ತರಿಸುವಂತೆ ಸಂಬಂಧಪಟ್ಟ ದೇಶಗಳನ್ನು ಉನ್ನತ ಮಟ್ಟದಲ್ಲಿ ಕೋರಬೇಕಿದೆ ಎಂದು ತಿಳಿಸಿದ್ದಾರೆ.

ಕನ್ನಡಿಗರು ಕಡಿಮೆ ಸಂಖ್ಯೆಯಲ್ಲಿ ನೆಲೆಸಿರುವ ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿನ ಅನಿವಾಸಿ ಕನ್ನಡಿಗರು ಭಾರತೀಯ ರಾಯಭಾರಿ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ರಾಯಭಾರಿ ಕಚೇರಿಗಳನ್ನು ಕೋರಬೇಕು ಎಂದು ಅವರು ಹೇಳಿದ್ದಾರೆ.
ಅನಿವಾಸಿ ಕನ್ನಡಿಗರು ಸ್ವದೇಶಕ್ಕೆ ಮರಳಿದ ನಂತರ ಅವರ ಮಕ್ಕಳ ಶಾಲಾ ಪ್ರವೇಶಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ವಿದೇಶಗಳಲ್ಲಿ ಉದ್ಯೋಗ ಕಳೆದುಕೊಂಡು ಭಾರತಕ್ಕೆ ಹಿಂದಿರುಗುವವರಿಗೆ ವೃತ್ತಿಪರ ಕೌಶಲ ತರಬೇತಿ ನೀಡಿ ಅವರ ಶೈಕ್ಷಣಿಕ ಅರ್ಹತೆಯಾನುಸಾರ ಸ್ಥಳೀಯವಾಗಿ ಕೆಲಸ ನಿರ್ವಹಿಸಲು ವ್ಯವಸ್ಥೆ ಮಾಡಬೇಕಿದೆ ಎಂದು ರವಿ ತಿಳಿಸಿದ್ದಾರೆ.

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯನ್ನು ಇದೇ ಉದ್ದೇಶಕ್ಕೆ ಪ್ರಾರಂಭಿಸಿದ್ದು, ಅನಿವಾಸಿ ಕನ್ನಡಿಗರೊಂದಿಗೆ ಸಮನ್ವಯ ಸಾಧಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಅನಿವಾಸಿ ಕನ್ನಡಿಗರಿಗೆ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಅವರು ಹಿಂತಿರುಗಿದ ನಂತರ ನಿಯಮಾನುಸಾರ ಕ್ವಾರಂಟೈನ್ ವ್ಯವಸ್ಥೆಗಳನ್ನು ಕಲ್ಪಿಸುವುದು. ಈ ಮಾಹಿತಿಯನ್ನು ಅನಿವಾಸಿ ಕನ್ನಡಿಗರಿಗೆ ತಲುಪಿಸಬೇಕು ಎಂದು ಅವರು ಹೇಳಿದ್ದಾರೆ.

ಧಾರವಾಡದ ಶಿವರಾಜ್ ಪಾಟೀಲ್‍ರವರ ಮೃತದೇಹವನ್ನು ಸ್ವದೇಶಕ್ಕೆ ತರುವುದು ಹಾಗೂ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವೀಸಾ ಅವಧಿಯನ್ನು ವಿಸ್ತರಿಸುವಲ್ಲಿ ಉಂಟಾಗಿರುವ ಸಮಸ್ಯೆಯನ್ನು ಆದ್ಯತೆಯ ಮೇಲೆ ಬಗೆಹರಿಸಲು ರಾಯಭಾರಿ ಕಚೇರಿ ಹಾಗೂ ಕೇಂದ್ರ ಸರಕಾರದೊಡನೆ ಸಂಪರ್ಕಿಸಬೇಕು ಎಂದು ರವಿ ಮನವಿ ಮಾಡಿದ್ದಾರೆ.

ಸಾಗರೋತ್ತರ ದೇಶಗಳಲ್ಲಿ ನೆಲೆಸಿ ಬದುಕನ್ನು ರೂಪಿಸಿಕೊಂಡಿರುವ ಅನಿವಾಸಿ ಕನ್ನಡಿಗರು ಕನ್ನಡ ಸಂಸ್ಕೃತಿಯ ರಾಯಭಾರಿಗಳಾಗಿ, ದೇಶದ ಆರ್ಥಿಕ ಅಭಿವೃದ್ಧಿಗೆ ನೆರವಾಗಿದ್ದು, ಇಂದು ಕೊರೋನ ಸಂಕಷ್ಟಕ್ಕೆ ಸಿಲುಕಿರುವುದರಿಂದ ಇವರ ಭಾವನೆಗಳಿಗೆ ಸ್ಪಂದಿಸುವುದರ ಮೂಲಕ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕಿದೆ ಎಂದು ಅವರು ತಿಳಿಸಿದ್ದಾರೆ.

ವಿಶ್ವದ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಅದರಲ್ಲೂ ನಿರ್ದಿಷ್ಟವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಬಹುತೇಕ ಬಡ ಕೂಲಿ ಕಾರ್ಮಿಕರು ಯುಎಇ, ಸೌದಿ ಅರೇಬಿಯಾ, ಕುವೈತ್, ಓಮನ್, ಬಹರೈನ್ ಮತ್ತು ಖತರ್ ದೇಶಗಳಲ್ಲಿ ಕಟ್ಟಡ ನಿರ್ಮಾಣ, ಧಾರ್ಮಿಕ ಕೇಂದ್ರಗಳು, ಆಸ್ಪತ್ರೆಗಳು, ವಾಣಿಜ್ಯ ಸಂಸ್ಥೆಗಳಲ್ಲಿ ಬಹುಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರವಾಸಿ ವೀಸಾದಲ್ಲಿ ಬಂದು ವೀಸಾ ಅವಧಿ ಮುಗಿದವರು, ಹಿರಿಯ ನಾಗರಿಕರು, ಮಹಿಳೆಯರು, ಗರ್ಭಿಣಿಯರು ಸಂಬಳ ರಹಿತ ರಜೆಯಲ್ಲಿರುವ ಕಾರ್ಮಿಕರು ಊಟ ವಸತಿಗೆ ಪರದಾಡುತ್ತಿದ್ದು, ದುಬಾರಿ ವೈದ್ಯಕೀಯ ವೆಚ್ಚ ಅನಿವಾಸಿ ಕನ್ನಡಿಗರಲ್ಲಿ ಭಯ ಮತ್ತು ಆತಂಕವನ್ನು ಹೆಚ್ಚು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಯಾಣ ನಿರ್ಬಂಧ ಜಾರಿಯಲ್ಲಿರುವುದರಿಂದ ತಮ್ಮ ಪೋಷಕರನ್ನು ಕರೆಸಿಕೊಂಡಿರುವವರಲ್ಲಿ ಹಲವರ ವೀಸಾ ಅವಧಿ ಮುಗಿದಿದೆ. ಆದುದರಿಂದ, ವೀಸಾ ಅವಧಿಯನ್ನು ಲಾಕ್‍ಡೌನ್ ಅಂತ್ಯಗೊಳ್ಳುವವರೆಗೆ ಹಾಗೂ ಭಾರತೀಯ ವಿದೇಶಾಂಗ ಮಂತ್ರಾಲಯ ಅಂತರಾಷ್ಟ್ರೀಯ ಸಂಚಾರವನ್ನು ಮುಕ್ತಗೊಳಿಸುವವರೆಗೆ ವಿಸ್ತರಿಸಲು ಸಂಬಂಧಪಟ್ಟ ದೇಶಗಳನ್ನು ಕೋರುವಂತೆ ಹಾಗೂ ಸ್ವದೇಶಕ್ಕೆ ಮರಳಲು ಅನಿವಾಸಿ ಕನ್ನಡಿಗರಿಗೆ ಕಡಿಮೆ ದರದಲ್ಲಿ ಪ್ರಯಾಣ ವೆಚ್ಚ ನಿಗದಿಗೊಳಿಸುವಂತೆ ಕೋರಿದ್ದಾರೆ ಎಂದು ರವಿ ಹೇಳಿದ್ದಾರೆ.

ಯುರೋಪಿಯನ್ ಒಕ್ಕೂಟ, ಆಸ್ಟ್ರೇಲಿಯ, ಆಫ್ರಿಕಾ, ಇಂಗ್ಲೆಂಡ್ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಕೋವಿಡ್-19 ಇಂದ ಸಂಕಷ್ಟಕ್ಕೀಡಾಗಿದ್ದು, ಬಹಳಷ್ಟು ಜನರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಉದ್ಯೋಗದಲ್ಲಿರುವ ತಮ್ಮ ಮಕ್ಕಳ ಮನೆಗೆ ತೆರಳಿರುವ ಪೋಷಕರು, ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸ್ವದೇಶಕ್ಕೆ ಮರಳುವ ದಾವಂತದಲ್ಲಿದ್ದು, ತಮ್ಮ ಮಕ್ಕಳಿಗೆ ಕರ್ನಾಟಕದಲ್ಲಿಯೆ ವ್ಯಾಸಂಗ ಮುಂದುವರಿಸಲು ಹಾಗೂ ಅಲ್ಲಿರುವ ಶೈಕ್ಷಣಿಕ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ವ್ಯವಸ್ಥೆಗೊಳಿಸಲು ಕೋರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಸ್ವದೇಶಕ್ಕೆ ಮರಳಲು ಸಾಧ್ಯವಾಗುವಂತೆ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆದರೆ, ಕಡಿಮೆ ಸಂಖ್ಯೆಯ ಅನಿವಾಸಿ ಕನ್ನಡಿಗರು ನೆಲೆಸಿರುವ ಯುರೋಪಿಯನ್ ದೇಶಗಳಾದ ಇಟಲಿ, ಫ್ರಾನ್ಸ್, ಜರ್ಮನಿ, ಐರ್ಲೆಂಡ್ ಮುಂತಾದ ದೇಶಗಳ ಹಾಗೂ ಆಫ್ರಿಕಾ ದೇಶದ ಕೀನ್ಯಾ ಉಗಾಂಡಾ, ಥಾಂಝೇನಿಯಾ, ಜಾಂಬಿಯಾ ದೇಶಗಳ ಜನರು ರಾಯಭಾರ ಕಚೇರಿಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಪ್ರಾರಂಭವಾಗಬೇಕಾಗಿದೆ. ಆದುದರಿಂದ, ಸಂಬಂಧಪಟ್ಟ ರಾಯಭಾರಿ ಕಚೇರಿಗಳಿಗೆ ಸ್ವದೇಶಕ್ಕೆ ಮರಳುವವರ ನೋಂದಣಿ ಪ್ರಾರಂಭಿಸುವಂತೆ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News