ಭದ್ರತಾ ಪಡೆಯ 500ಕ್ಕೂ ಹೆಚ್ಚು ಮಂದಿಗೆ ಕೊರೋನ ಸೋಂಕು

Update: 2020-05-08 03:51 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮೇ 8: ಕೋವಿಡ್-19 ವಿರುದ್ಧದ ಹೋರಾಟ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅರೆಭದ್ರತಾ ಪಡೆಗಳ 500ಕ್ಕೂ ಹೆಚ್ಚು ಯೋಧರಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ ದಿಲ್ಲಿ ಕೇಂದ್ರ, ದಿಲ್ಲಿ ಆಗ್ನೇಯ ಮತ್ತು ಉತ್ತರ ಜಿಲ್ಲೆಗಳಲ್ಲಿ ನಿಯೋಜಿತರಾಗಿರುವವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ತಗುಲಿದೆ. ಇದೀಗ ಎಲ್ಲ ತುಕಡಿಗಳಲ್ಲಿ ವೈರಸ್ ಹರಡುವಿಕೆ ಮೇಲೆ ನಿಗಾ ಇಡಲು ಘಟಕಗಳನ್ನು ಆರಂಭಿಸಲಾಗಿದೆ.

ಗಡಿಭದ್ರತಾ ಪಡೆಯ 195 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ಬಹುತೇಕ ಪ್ರಕರಣಗಳು ದಿಲ್ಲಿಯಲ್ಲಿವೆ. ಗುರುವಾರ ಇಬ್ಬರು ಬಿಎಸ್‌ಎಫ್ ಯೋಧರು ಸೋಂಕಿಗೆ ಬಲಿಯಾಗಿದ್ದರು.

ಇದೀಗ 191 ಸಕ್ರಿಯ ಪ್ರಕರಣಗಳಿದ್ದು, 130 ಮಂದಿ ದಿಲ್ಲಿಯಲ್ಲೇ ಇದ್ದಾರೆ. ದಿಲ್ಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು ಎಂದು ಬಿಎಸ್‌ಎಫ್ ಕೇಂದ್ರ ಕಚೇರಿ ಹೇಳಿದೆ.

ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 159 ಮಂದಿಗೆ ಸೋಂಕು ತಗುಲಿದ್ದು, 900ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಗೃಹ ಸಚಿವಾಲಯದಲ್ಲಿ ನಿಯೋಜಿತರಾಗಿರುವ ಇಬ್ಬರು ಸಿಆರ್‌ಪಿಎಫ್ ಯೋಧರಿಗೂ ಸೋಂಕು ದೃಢಪಟ್ಟಿದೆ.

ಇಂಡೋ ಟಿಬೇಟಿಯನ್ ಗಡಿ ಪೊಲೀಸ್ ಪಡೆಯಲ್ಲಿ 82 ಸೋಂಕು ಪ್ರಕರಣಗಳು ವರದಿಯಾಗಿವೆ. ದಿಲ್ಲಿ ಪೊಲೀಸ್ ಪಡೆಯ 80 ಪೊಲೀಸರಿಗೂ ಸೋಂಕು ತಗುಲಿದೆ. ದಿಲ್ಲಿಯ ವಿವಿಧ ಸರ್ಕಾರಿ ಕಟ್ಟಡಗಳಲ್ಲಿ ಕರ್ತವ್ಯಗಳಲ್ಲಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ 50ಕ್ಕೂ ಹೆಚ್ಚು ಮಂದಿಯಲ್ಲಿ ವೈರಸ್ ಸೋಂಕು ಕಾಣಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News