ಸುರಕ್ಷಾ ಸಂಸ್ಕೃತಿಯ ಕೊರತೆ ದುರಂತಕ್ಕೆ ಕಾರಣವಾಯಿತೇ?

Update: 2020-05-09 05:26 GMT

ಹಲವು ಹೋರಾಟ, ವಿರೋಧಗಳ ನಡುವೆ ಕರಾವಳಿಯ ಫಲವತ್ತಾದ ಕೃಷಿ ಭೂಮಿಯಲ್ಲಿ ಜನ ವಸತಿ ಪ್ರದೇಶಕ್ಕೆ ತಾಗಿಕೊಂಡೇ ಸ್ಥಾಪಿಸಲಾಗಿರುವ ಕೊಜೆಂಟ್ರಿಕ್ಸ್,ಎಂಆರ್‌ಪಿಎಲ್, ಒಎಂಪಿಎಲ್ ಮತ್ತು ಎಚ್‌ಪಿಸಿಎಲ್ ಕೈಗಾರಿಕಾ ಸ್ಥಾವರವು ಮಂಗಳೂರು ಮತ್ತು ಉಡುಪಿ ಜನತೆ ತಮ್ಮ ಮಡಿಲಲ್ಲಿ ಕಟ್ಟಿಕೊಂಡಿರುವ ಕೆಂಡಕ್ಕೆ ಸಮಾನ. ಒಂದೊಮ್ಮೆ ಸ್ಥಾವರಗಳ ನಿರ್ವಹಣೆಗೆ ಸಂಬಂಧಿಸಿದ ಸುರಕ್ಷಾ ನಿಯಮಾವಳಿಗಳ ವಿಚಾರದಲ್ಲಿ ರಾಜಿ ಮಾಡಿಕೊಂಡಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. 



ಭಾರತದಲ್ಲಿ ಭೋಪಾಲ್..., ವಿಶಾಖ ಪಟ್ಟಣ ...! ಹೀಗೆ ಒಂದೊಂದು ದುರಂತಗಳ ಸರಮಾಲೆ ನಡೆಯುವ ಸಾಧ್ಯತೆಗಳೇ ಹೆಚ್ಚು. ಕಾರಣ ಇಷ್ಟೇ, ನಮ್ಮಲ್ಲಿ ಸುರಕ್ಷಾ ಸಂಸ್ಕೃತಿ (ಸೇಫ್ಟಿ ಕಲ್ಚರ್) ಇಲ್ಲದಿರುವುದು. ವ್ಯಾಪಕವಾಗಿ ಕೈಗಾರಿಕಾ ಕ್ರಾಂತಿ ನಡೆಯುತ್ತಿರುವ ನಮ್ಮ ದೇಶದಲ್ಲಿ ಕಾರ್ಖಾನೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸುರಕ್ಷಾ ನಿಯಮಾವಳಿಗಳನ್ನು ಸಾರಾಸಗಟಾಗಿ ಕಡೆಗಣಿಸುತ್ತಿರುವುದು ಈ ಹಿಂದೆ ನಡೆದಿರುವ, ಇದೀಗ ನಡೆದ ಮತ್ತು ಮುಂದೆ ನಡೆಯಲಿರುವ ಎಲ್ಲ ದುರಂತಗಳಿಗೆ ಕಾರಣವಾಗಲಿದೆ. ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳವಾದ ಭೋಪಾಲ್ ಅನಿಲ ದುರಂತವನ್ನು ನೆನಪಿಸುವಂಥ ಭಾರೀ ದುರ್ಘಟನೆಯೊಂದು ನಮ್ಮ ನೆರೆಯ ರಾಜ್ಯವಾದ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಗುರುವಾರ ಮುಂಜಾನೆಯ ನಸುಕಿನಲ್ಲಿ ನಡೆದು ಹೋಗಿದೆ. ಘಟನೆ ಸಂಭವಿಸಿರುವ ಎಲ್ ಜಿ ಪಾಲಿಮರ್ಸ್ ಕೈಗಾರಿಕಾ ಸ್ಥಾವರವು ಜನವಸತಿ ಪ್ರದೇಶದಲ್ಲಿದ್ದು ಸುತ್ತಲಿನ 3 ಕಿ. ಮೀ. ವ್ಯಾಪ್ತಿಯಲ್ಲಿ ವಿಷಾನಿಲ ಸೋರಿಕೆಯಾಗಿದೆ. ವೆಂಕಟಾಪುರಂ, ಪದ್ಮಪುರಮ್, ಬಿ. ಸಿ. ಕಾಲೀನಿ, ಗೋಪಾಲಪಟ್ಟಣಂ, ಕಂಪರಪಾಳೆಂ ಎಂಬ 5 ಗ್ರಾಮಗಳಲ್ಲಿ ವಿಷ ಗಾಳಿ ಉಸಿರಾಡಿ 11 ಜನರ ಸಾವು ಸಂಭವಿಸಿದೆ. ಸಾವಿರಾರು ಜನ ಅಸ್ವಸ್ಥಗೊಂಡಿದ್ದಾರೆ. ಸಾವು ಅಷ್ಟೊಂದು ಪ್ರಮಾಣದಲ್ಲಿ ಸಂಭವಿಸದಿದ್ದರೂ, ಭಾರೀ ಕೈಗಾರಿಕೆಗಳನ್ನು ಸುತ್ತಮುತ್ತ ಇಟ್ಟುಕೊಂಡು ಬದುಕುತ್ತಿರುವ ನಾವು ಎಷ್ಟೊಂದು ಸುರಕ್ಷಿತರು ಎನ್ನುವ ಪ್ರಶ್ನೆಯನ್ನು ವಿಶಾಖಪಟ್ಟಣದ ಘಟನೆ ನಮ್ಮನ್ನು ಚಿಂತಿಸುವಂತೆ ಮಾಡಿದೆ.

ಎಲ್ಲಿ ನಿರ್ಮಿಸಬಾರದೋ ಅಲ್ಲಿಯೇ ಪರಿಸರ ಸಂಬಂಧಿತ ಎಲ್ಲ ನಿಯಮಾವಳಿಗಳನ್ನು ಉಲ್ಲಂಘಿಸಿ ಈ ಅಪಾಯಕಾರಿ ಸ್ಥಾವರವನ್ನು ಮುಂದಾಲೋಚನೆ ಇಲ್ಲದೆ ನಿರ್ಮಿಸಲಾಗಿದೆ. 58 ವರ್ಷಗಳ ಹಿಂದೆ ಈಗಿನ ಎಲ್ ಜಿ ಪಾಲಿಮರ್ಸ್ ಘಟಕದ ಸುತ್ತ ಅಷ್ಟೊಂದು ಜನ ವಸತಿ ಇರಲಿಲ್ಲ. ಕಾಲ ಕ್ರಮೇಣ ವಿಶಾಖಪಟ್ಟಣ ಕೈಗಾರಿಕಾ ನಗರವಾಗಿ ಬೆಳೆಯುತ್ತಿದ್ದಂತೆಯೇ ಬದುಕು ಅರಸಿಕೊಂಡು ಬಂದ ಭಾರೀ ಸಂಖ್ಯೆಯ ಜನ ಸುತ್ತಲಿನ ಗ್ರಾಮಗಳಲ್ಲೇ ನೆಲೆಸಲಾರಂಭಿಸಿದರು. ಮುಂದೊಂದು ದಿನ ಪಾಲಿಮರ್ಸ್ ಫ್ಯಾಕ್ಟರಿ ತಮ್ಮ ಪಾಲಿಗೆ ಯಮ ಕಂಟಕವಾಗುತ್ತದೆ ಎಂದು ಜನ ಕನಸು ಮನಸ್ಸಲ್ಲಿಯೂ ಊಹಿಸಿರಲಿಕ್ಕಿಲ್ಲ. ಅಂದು ಇಲ್ಲಿ ಕೈಗಾರಿಕೆ ಸ್ಥಾಪಿಸಲು ಅನುಮತಿ ನೀಡುವಾಗ ಸುತ್ತಮುತ್ತಲಿನ ಗ್ರಾಮ ಮುಂದೆ ಯಾವ ರೀತಿ ಬೆಳೆಯಬಲ್ಲದು ಮತ್ತು ಸ್ಥಾವರವು ಜನಜೀವನಕ್ಕೆ ಯಾವ ರೀತಿ ಕಂಟಕ ಆಗಬಹುದು ಎನ್ನುವ ಮುಂದಾಲೋಚನೆ ಮತ್ತು ಸೇಫ್ಟಿ ಸೆನ್ಸ್ ಸರಕಾರಕ್ಕೆ ಇರ ಬೇಕಿತ್ತು. ಈಗ ನಡೆದಿರುವ ದುರಂತದಲ್ಲಿ ಎಲ್ ಜಿ ಪಾಲಿಮರ್ಸ್ ಎಷ್ಟು ಹೊಣೆಗಾರಿಕೆಯನ್ನು ಹೊರ ಬೇಕಾಗುತ್ತದೆಯೋ ಅಷ್ಟೇ ಹೊಣೆಗಾರಿಕೆಯನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿಕೊಂಡು ಬಂದಿರುವ ಎಲ್ಲ ಸರಕಾರಗಳು ಹೊರಬೇಕಾಗಿವೆ.

ಅಪಾಯಕಾರಿ ಕೈಗಾರಿಕೆಯ ಸುತ್ತಮುತ್ತ ಬೆಳೆಯುತ್ತಿರುವ ಜನ ವಸತಿಯನ್ನು ಗಂಭೀರವಾಗಿ ಪರಿಗಣಿಸಬೇಕಿದ್ದ ಸರಕಾರಗಳು, ಒಂದೋ ಜನ ವಸತಿಯನ್ನು ಅಥವಾ ಕೈಗಾರಿಕೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕಿತ್ತು. ಈ ಬಗ್ಗೆ ಯೋಚಿಸದಿರುವುದರಿಂದಲೇ ಸಂಭವಿ ಸಬಾರದಾದ ಅನಾಹುತ ಸಂಭವಿಸಿದೆ. ನಿರ್ಲಕ್ಷ ತೋರಿದ್ದಲ್ಲಿ ಮುಂದೆಯೂ ಇಂತಹ ಘಟನೆಗಳು ಮರುಕಳಿಸುವುದರಲ್ಲಿ ಸಂದೇಹ ಇಲ್ಲ. ಸರಕಾರ ಇದನ್ನೊಂದು ಎಚ್ಚರಿಕೆಯ ಕರೆ ಗಂಟೆ ಎಂದು ಪರಿಗಣಿಸಿ ದೇಶಾದ್ಯಂತ ಇರುವ ಬೃಹತ್ ಸ್ಥಾವರಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಾಗಿದೆ. ಲಾಕ್ ಡೌನ್ ನೆಪ ‘‘ವಿಷಾನಿಲ ಸೋರಿಕೆಯಾಗಲು ಕೊರೋನ ಲಾಕ್ ಡೌನ್ ಕಾರಣ. ಕಳೆದ ಕೆಲವು ದಿನಗಳಿಂದ ಎರಡು ಟ್ಯಾಂಕ್ ಗಳಲ್ಲಿ 2,000 ಟನ್ ಮತ್ತು 1,800 ಟನ್ ರಾಸಾಯನಿಕಗಳನ್ನು ಶೇಖರಿಸಿಡಲಾಗಿತ್ತು. ಒಂದೊಮ್ಮೆ ಪ್ಲಾಂಟ್ ಚಾಲು ಸ್ಥಿತಿಯಲ್ಲಿರುತ್ತಿದ್ದರೆ, ಈ ರಾಸಾಯನಿಕಗಳು ರಿಯಾಕ್ಟರ್ ಸೇರುತ್ತಿತ್ತು. ಈ ರೀತಿ ಆಗದ ಕಾರಣ ಟ್ಯಾಂಕ್ ಗಳಲ್ಲಿದ್ದ ರಾಸಾಯನಿಕದಲ್ಲಿ ಪ್ರತಿಕ್ರಿಯೆ ಉಂಟಾಗಿ, ಸೇಫ್ಟಿ ವಾಲ್ವು ಹಾನಿಗೊಳ್ಳುವ ಮೂಲಕ ವಿಷಾನಿಲ ಸೋರಿಕೆಯಾಗಿದೆ’’ ಎಂದು ಎಲ್ ಜಿ ಪಾಲಿಮರ್ಸ್ ಘಟನೆ ನಡೆಯಲು ಕಾರಣ ನೀಡಿದೆ.

1997 ರಿಂದಲೂ ಪ್ಲಾಂಟ್ ನಡೆಸಿಕೊಂಡು ಬರುತ್ತಿರುವ ಈ ಕಂಪೆನಿಗೆ, ಸುದೀರ್ಘಾವಧಿ ಒಂದು ಪ್ಲಾಂಟ್ ಬಂದ್ ಸ್ಥಿತಿಯಲ್ಲಿಟ್ಟಾಗ, ಟ್ಯಾಂಕ್‌ಗಳಲ್ಲಿ ಶೇಖರಿಸಿಟ್ಟಿರುವ ರಾಸಾಯನಿಕದಲ್ಲಿ ಪ್ರತಿಕ್ರಿಯೆ ಉಂಟಾಗಿ ಅಪಾಯ ಸಂಭವಿಸಲಿದೆ ಎಂಬ ಅರಿವು ಇರಬೇಕಿತ್ತು. ಆದ್ದರಿಂದ ಪ್ಲಾಂಟನ್ನು ಬಂದ್ ಮಾಡುವಾಗ ಮತ್ತು ಚಾಲು ಮಾಡುವಾಗ ಸ್ಟ್ಯಾಂಡರ್ಡ್ ಪ್ರೊಸೀಜರನ್ನು ಮತ್ತು ಸುರಕ್ಷಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲಾಗಿತ್ತೆ ಎನ್ನುವ ಪ್ರಶ್ನೆಗೆ ಎಲ್ ಜಿ ಪಾಲಿಮರ್ಸ್ ಈಗ ಉತ್ತರಿಸಬೇಕಾಗಿದೆ. ಒಂದೊಮ್ಮೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರೆ ಈ ದುರ್ಘಟನೆ ನಡೆಯಲು ಸಾಧ್ಯವೇ ಇರುತ್ತಿರಲಿಲ್ಲ. ಈ ರೀತಿ ಸುರಕ್ಷಾ ನಿಯಮಾವಳಿಗಳ ಉಲ್ಲಂಘನೆ ಭೋಪಾಲ್ ನಂತೆಯೇ ವಿಶಾಖಪಟ್ಟಣದಲ್ಲೂ ನಡೆದಿರುವ ಸಾಧ್ಯತೆಗಳಿವೆ.
ಇತಿಹಾಸದಿಂದ ಪಾಠ ಕಲಿಯದವರು

ಭೋಪಾಲ್ ದುರಂತ ಸಂಭವಿಸಿ ಇಂದಿಗೆ ಸರಿ ಸುಮಾರು 35 ವರ್ಷಗಳು ಕಳೆದಿವೆ. ಈ ಬಗ್ಗೆ ಭೋಪಾಲ್, ದಿಲ್ಲಿ, ಮುಂಬೈ, ವಾಶಿಂಗ್ಟನ್, ನ್ಯೂಯಾರ್ಕ್ ಮತ್ತು ಡ್ಯಾನ್ಬರಿಯಲ್ಲಿ ತನಿಖೆ ನಡೆಸಲಾಗಿತ್ತು. ಈ ವೇಳೆ ಹೊರಬಿದ್ದಿರುವ ಕೆಲವು ಮಾಹಿತಿಗಳ ಪ್ರಕಾರ ದುರಂತ ಸಂಭವಿಸುವ ಕೆಲವು ತಿಂಗಳುಗಳ ಮೊದಲು ಮಿಥೈಲ್ ಐಸೋಸಿಯನೇಟ್ ರಾಸಾಯನಿಕವನ್ನು ತಂಪಾಗಿ ಇಡಲು ಮತ್ತು ರಾಸಾಯನಿಕ ಪ್ರತಿಕ್ರಿಯೆಯನ್ನು ತಡೆಗಟ್ಟುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿರುವ ರೆಫ್ರಿಜೆರೇಷನ್ ಯೂನಿಟ್ ಅನ್ನು ಸ್ತಬ್ಧಗೊಳಿಸಲಾಗಿತ್ತು. ಈ ಕ್ರಮವು ಪ್ಲಾಂಟ್ ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸೀಜರ್‌ಗೆ ವಿರುದ್ಧವಾಗಿದೆ. ಅಂದು ದಿನಕ್ಕೆ ರೂಪಾಯಿ 700 (50 ಯು.ಎಸ್. ಡಾಲರ್) ಉಳಿತಾಯ ಮಾಡುವುದು ಇದರ ಉದ್ದೇಶವಾಗಿತ್ತಂತೆ.

ಅಲ್ಲದೆ ಲಾಭ ಗಳಿಸುವ ಸಲುವಾಗಿ ಪ್ಲಾಂಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರ ಸಂಖ್ಯೆಯನ್ನೂ ಅರ್ಧದಷ್ಟು ಕಡಿತಗೊಳಿಸಲಾಗಿತ್ತು ಮತ್ತು ಪ್ಲಾಂಟ್ ನಿರ್ವಹಣೆ ಕುರಿತ ತರಬೇತಿಯನ್ನು 6 ತಿಂಗಳುಗಳಿಂದ 15 ದಿನಗಳಿಗೆ ಇಳಿಸಲಾಗಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಇವೆಲ್ಲ ಸುರಕ್ಷಾ ನಿಯಮಾವಳಿಗಳ ಘೋರ ಉಲ್ಲಂಘನೆಯೇ ಸರಿ. ಇದೀಗ ವಿಶಾಖಪಟ್ಟಣ ಮತ್ತು ಭೋಪಾಲ್ ಘಟನೆಯ ನಡುವೆ ಒಂದು ಸಾಮ್ಯತೆಯನ್ನು ಗಮನಿಸಬಹುದಾಗಿದೆ. ಅದು ಯಾವುದೆಂದರೆ ಯೂನಿಯನ್ ಕಾರ್ಬೈಡ್ ಕಂಪನಿಯ ರೆಫ್ರಿಜಿರೇಷನ್ ಯೂನಿಟ್ ಅನ್ನು ಲಾಭ ಗಳಿಸುವ ಉದ್ದೇಶದಿಂದ ಬಂದ್ ಮಾಡಲಾಗಿದ್ದರೆ, ಎಲ್ ಜಿ ಪಾಲಿಮರ್ಸ್ ಪ್ಲಾಂಟನ್ನು ಕೊರೋನ ಸಾಂಕ್ರಾಮಿಕ ಕಾರಣದಿಂದ ಸ್ತಬ್ಧಗೊಳಿಸಲಾಗಿತ್ತು.

 ಇತಿಹಾಸ ನೋಡೋಣ

ದಕ್ಷಿಣ ಕೊರಿಯಾದ ಎಲ್ ಜಿ ಕೆಮಿಕಲ್ಸ್ ಮಾಲಕತ್ವ ಹೊಂದಿರುವ ಎಲ್ ಜಿ ಪಾಲಿಮರ್ಸ್ ಕಂಪೆನಿಗೆ ಸುದೀರ್ಘವಾದ ಇತಿಹಾಸವೇ ಇದೆ. ಈ ರಾಸಾಯನಿಕ ಸ್ಥಾವರವನ್ನು 1961 ರಲ್ಲಿ ಹಿಂದೂಸ್ತಾನ್ ಪಾಲಿಮರ್ಸ್ ಎಂಬ ಹೆಸರಿನಲ್ಲಿ ಶ್ರೀರಾಂ ಗ್ರೂಪ್ ಸ್ಥಾಪಿಸಿತ್ತು. ಬಳಿಕ 1978ರಲ್ಲಿ ಅದು ಯುನೈಟೆಡ್ ಬ್ರಿವರೀಸ್ ಕೈ ಸೇರಿತು. 19 ವರ್ಷಗಳ ಬಳಿಕ ಅಂದರೆ 1997ರಲ್ಲಿ ಎಲ್ ಜಿ ಕೆಮಿಕಲ್ಸ್ ಹಿಂದುಸ್ಥಾನ್ ಪಾಲಿಮರ್ಸ್ ಅನ್ನು ಖರೀದಿಸುವುದರೊಂದಿಗೆ ಅದು ಎಲ್ ಜಿ ಪಾಲಿಮರ್ಸ್ ಎಂದು ನಾಮಾಂತರಗೊಂಡಿತ್ತು. ಈ ಮೂಲಕ ಎಲ್ ಜಿ ಕೆಮಿಕಲ್ಸ್ ಭಾರತದಲ್ಲಿ ಭಾರೀ ಲಾಭದಾಯಕವಾದ ರಾಸಾಯನಿಕ ಉತ್ಪನ್ನಗಳ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಈ ಕಾರ್ಖಾನೆಯಲ್ಲಿ ಪ್ಲಾಸ್ಟಿಕ್ ಮತ್ತು ಸಿ ಡಿ - ಡಿವಿಡಿ ಕೇಸ್, ಸ್ಮೋಕ್ ಡಿಟೆಕ್ಟರ್ ಹೌಸಿಂಗ್ ತಯಾರಿಕೆಯಲ್ಲಿ ಬಳಸಲಾಗುವ ಪಾಲಿಸ್ಟೈರೀನ್ ಎನ್ನುವ ರಾಸಾಯನಿಕವನ್ನು ಉತ್ಪಾದಿಸಲಾಗುತಿತ್ತು.

ನಮ್ಮ ವ್ಯವಹಾರ ಪಾಲುದಾರರ ಮತ್ತು ಸ್ಥಳೀಯ ಸಮುದಾಯಗಳ ಪರಿಸರಾತ್ಮಕ, ಆರೋಗ್ಯ ಮತ್ತು ಸುರಕ್ಷಾ ವಿಷಯಕ್ಕೆ ಸಂಬಂಧಿಸಿ ಸುಧಾರಣೆ ತರುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಎಲ್ ಜಿ ಪಾಲಿಮರ್ಸ್ ಇಂಡಿಯಾದ ಸುರಕ್ಷಾ ನೀತಿ (ಸೇಫ್ಟಿ ಪಾಲಿಸಿ)ಯಲ್ಲಿ ಬಹಳ ಚೆನ್ನಾಗಿ ಬರೆದಿಡಲಾಗಿದೆ.

ಒಂದೊಮ್ಮೆ ಸೇಫ್ಟಿ ಪಾಲಿಸಿಯನ್ನು ಈ ಕಂಪೆನಿಯೂ ಕಟ್ಟುನಿಟ್ಟಾಗಿ ಅನುಸರಿಸಿದ್ದರೆ, ಇಂದು ಈ ದುರಂತ ಸಂಭವಿಸುತ್ತಿರಲಿಲ್ಲ. ಮಕ್ಕಳು, ಮಹಿಳೆಯರು, ಪಶು ಪಕ್ಷಿಗಳು ಇದ್ದ ಸ್ಥಳದಲ್ಲಿಯೇ ಉಸಿರುಗಟ್ಟಿ ತರಗೆಲೆಗಳಂತೆ ಉರುಳಿ ಬಿದ್ದು ಸಾಯುತ್ತಿರಲಿಲ್ಲ, ಅಸ್ವಸ್ಥಗೊಳ್ಳುತ್ತಿರಲಿಲ್ಲ.

  ಭಾರತಲ್ಲಿ ಹೆಚ್ಚು ಕಡಿಮೆ ಇಂಥ ಅಪಾಯಕಾರಿ ಸ್ಥಾವರಗಳು ಜನ ವಸತಿ ಪ್ರದೇಶಕ್ಕೆ ಹತ್ತಿರ ಹತ್ತಿರವೇ ಇವೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇಂತಹ ಘಟನೆಗಳಿಗೆ ನಾವು ಸಾಕ್ಷಿಯಾಗುವ ಸಾಧ್ಯತೆಗಳೇ ಹೆಚ್ಚು. ಇದೀಗ ಜ್ಞಾನೋದಯಗೊಂಡಿರುವ ಮಾಜಿ ಮುಖ್ಯ ಮಂತ್ರಿ ಚಂದ್ರ ಬಾಬು ನಾಯ್ಡು, ವಿಶಾಖಪಟ್ಟಣದ ಈ ಸ್ಥಾವರವನ್ನು ವಿಶೇಷ ಆರ್ಥಿಕ ವಲಯಕ್ಕೆ ಸ್ಥಳಾಂತರಿಸುವಂತೆ ಕೋರಿ ಕೇಂದ್ರ ಸರಕಾರವನ್ನುಒತ್ತಾಯಿಸಿದ್ದಾರೆ. ನಾಯ್ಡು ಈಗ ಒತ್ತಾಯ ಮಾಡುವ ಸಮಯವಲ್ಲ. ಈ ಕೆಲಸವನ್ನು ಅವರು ಕೈಯಲ್ಲಿ ಅಧಿಕಾರ ಇರುವಾಗ ಎಂದೋ ಮಾಡಬೇಕಿತ್ತು. ಇಂದು ನಾಯ್ಡು ಸೇರಿದಂತೆ ಕೇಂದ್ರ ಸರಕಾರವು ಜನರ ಕಣ್ಣೊರೆಸುವ ತಂತ್ರವನ್ನೇ ಮಾಡುತ್ತಾ ಇದೆ.

ಮಂಗಳೂರಿನ ಸ್ಥಿತಿಯೂ ಭಿನ್ನವೇನಿಲ್ಲ ಹಲವು ಹೋರಾಟ, ವಿರೋಧಗಳ ನಡುವೆ ಕರಾವಳಿಯ ಫಲವತ್ತಾದ ಕೃಷಿ ಭೂಮಿಯಲ್ಲಿ ಜನ ವಸತಿ ಪ್ರದೇಶಕ್ಕೆ ತಾಗಿಕೊಂಡೇ ಸ್ಥಾಪಿಸಲಾಗಿರುವ ಕೊಜೆಂಟ್ರಿಕ್ಸ್,ಎಂಆರ್ ಪಿಎಲ್, ಒಎಂಪಿಎಲ್ ಮತ್ತು ಎಚ್ ಪಿಸಿಎಲ್ ಕೈಗಾರಿಕಾ ಸ್ಥಾವರವು ಮಂಗಳೂರು ಮತ್ತು ಉಡುಪಿ ಜನತೆ ತಮ್ಮ ಮಡಿಲಲ್ಲಿ ಕಟ್ಟಿಕೊಂಡಿರುವ ಕೆಂಡಕ್ಕೆ ಸಮಾನ. ಒಂದೊಮ್ಮೆ ಸ್ಥಾವರಗಳ ನಿರ್ವಹಣೆಗೆ ಸಂಬಂಧಿಸಿದ ಸುರಕ್ಷಾ ನಿಯಮಾವಳಿಗಳ ವಿಚಾರದಲ್ಲಿ ರಾಜಿ ಮಾಡಿಕೊಂಡಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಭಾರೀ ಕೈಗಾರಿಕೆಗಳ ಸ್ಥಿತಿ ಗತಿ ಬಗ್ಗೆ ನಡೆಸಲಾಗುತ್ತಿರುವ ಸೇಫ್ಟಿ ಆಡಿಟ್ (ಸುರಕ್ಷಾ ಪರಿಶೋಧನೆ) ವಿಷಯದಲ್ಲಿ ಕಠಿಣ ನಿಲುವು ತಳೆದು ಜನರ ಸುರಕ್ಷತೆಗೆ ನಿಲ್ಲಬೇಕಾಗಿದೆ.

Writer - ಗಿರೀಶ್ ಬಜ್ಪೆ

contributor

Editor - ಗಿರೀಶ್ ಬಜ್ಪೆ

contributor

Similar News