ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಗರ್ಭಿಣಿಯರು: 2 ತಿಂಗಳಲ್ಲಿ 1,206 ನವಜಾತ ಶಿಶುಗಳ ಮರಣ !

Update: 2020-05-10 14:40 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 10: ಕೊರೋನ ವೈರಸ್ ಸೋಂಕಿನಿಂದ ಉಂಟಾಗಿರುವ ವಿಷಮ ಸ್ಥಿತಿಯನ್ನು ನಿಭಾಯಿಸಲು ಹೆಣಗಾಡುತ್ತಿರುವ ರಾಜ್ಯ ಸರಕಾರ ಮತ್ತೊಂದು ಕಡೆ ಗರ್ಭಿಣಿ ಮತ್ತು ನವಜಾತ ಶಿಶುಗಳ ಸೌಖ್ಯವನ್ನು ಮರೆತುಬಿಟ್ಟಿದೆ. ಇದರ ಪರಿಣಾಮ ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಸುಮಾರು 1,206 ನವಜಾತ ಶಿಶುಗಳು ಮೃತಪಟ್ಟಿವೆ.

ರಾಜ್ಯದಲ್ಲಿ ಗರ್ಭಿಣಿಯರು ಅಪೌಷ್ಟಿಕತೆಯಿಂದ ಬಳಲುತ್ತಿರುವ ಹಿನ್ನೆಲೆ ನವಜಾತ ಶಿಶುಗಳು ಭಾರೀ ಸಂಖ್ಯೆಯಲ್ಲಿ ಮರಣ ಹೊಂದುತ್ತಿವೆ. ಇದನ್ನರಿತ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಶಿಶುಗಳ ಮರಣ ಸಂಬಂಧ ಸಂಪೂರ್ಣ ವರದಿ ನೀಡುವಂತೆ ರಾಜ್ಯ ಆರೋಗ್ಯ ಇಲಾಖೆಗೆ ಸೂಚಿಸಿದೆ.

ರಾಜ್ಯದಲ್ಲಿ ಈ ಪ್ರಮಾಣದಲ್ಲಿ ಶಿಶುಗಳು ಮೃತಪಟ್ಟಿದ್ದು, ಇದೇ ಮೊದಲಾಗಿದ್ದು, ಅದು ಕೂಡ ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿ ನಡೆದಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಈ ಮೊದಲು ಕೂಡ ಶಿಶುಗಳು ಮರಣ ಹೊಂದಿವೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಇರುತ್ತಿರಲಿಲ್ಲ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಿಳಿಸಿದೆ.

ಗರ್ಭಿಣಿಯರು ಆಹಾರ ಮತ್ತು ಔಷಧ ಸಮಸ್ಯೆಯಿಂದ ಬಳಲುತ್ತಿದ್ದು, ಅಪೌಷ್ಟಿಕತೆ ಪ್ರಮಾಣ ಹೆಚ್ಚಳವಾಗುತ್ತಿದೆ. ಇದರ ಪರಿಣಾಮ ಮಕ್ಕಳು ಹುಟ್ಟುವ ಮೊದಲು ಹಾಗೂ ಹುಟ್ಟಿದ ನಂತರ ಮೃತಪಡುತ್ತವೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ವಿವಿಧ ಯೋಜನೆಗಳನ್ನು ಜಾರಿಗೆ ತಂದರೂ, ಅವುಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಯಶಸ್ವಿಯಾಗಿದ್ದು ಬಿಟ್ಟರೆ, ಮತ್ಯಾವ ಕಡೆಯೂ ನಿರೀಕ್ಷಿಸಿದಂತೆ ಯಶಸ್ವಿ ಆಗಲಿಲ್ಲ. ಇಲಾಖೆ ಇಷ್ಟೆಲ್ಲ ಕ್ರಮ ಕೈಗೊಂಡಿದ್ದರೂ ಅಪೌಷ್ಟಿಕತೆ ಮಾತ್ರ ಕಡಿಮೆಯಾಗಿಲ್ಲ.

ಇದೀಗ ಲಾಕ್‍ಡೌನ್ ನಡುವೆಯೂ ಶಿಶುಗಳ ಪ್ರಮಾಣ ಹೆಚ್ಚಳವಾಗಿರುವುದು ಆತಂಕಕಾರಿ ವಿಷಯವಾಗಿದ್ದು, ಇದನ್ನು ತಡೆಯುವಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಫಲವಾಗಿರುವುದು ಈ ಅಂಕಿ ಅಂಶಗಳಿಂದ ಬಹಿರಂಗವಾಗಿದ್ದು, ಸರಕಾರದ ಯೋಜನೆಗಳು ಸರಿಯಾಗಿ ತಲುಪದಿರುವುದೇ ಶಿಶುಗಳ ಮರಣಕ್ಕೆ ಕಾರಣವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ರಾಯಚೂರಿನಲ್ಲಿ 72 ಶಿಶುಗಳ ಸಾವು: ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿಯೂ ಶಿಶುಗಳ ಮರಣ ಪ್ರಮಾಣ ಅಧಿಕವಾಗಿದ್ದು, ಈ ಪೈಕಿ ರಾಯಚೂರಿನಲ್ಲಿ ಲಾಕ್‍ಡೌನ್ ಸಮಯದಲ್ಲಿ 72 ಶಿಶುಗಳು ಮರಣ ಹೊಂದಿವೆ. ಈ ಜಿಲ್ಲೆಯ ಜನರು ಊಟಕ್ಕೂ ತತ್ವಾರ ಪಡುತ್ತಿದ್ದು, ಹೆಚ್ಚಿನ ಜನರು ಗುಳೇ ಹೋಗುತ್ತಿದ್ದಾರೆ. 

ಕಲಬುರಗಿ ಜಿಲ್ಲೆ ಮಾತೃಪೂರ್ಣ ಯೋಜನೆಯಡಿ ಮೊದಲ ಸ್ಥಾನದಲ್ಲಿದ್ದು, ಶೇ.85ರಷ್ಟು ಗರ್ಭಿಣಿಯರು ಮತ್ತು ಬಾಣಂತಿಯರು ಅಂಗನವಾಡಿಗಳಿಗೆ ಬಂದು ಊಟ ಮಾಡುತ್ತಿದ್ದರು. ಆದರೆ ಈಗ ಕೊರೋನ ಲಾಕ್‍ಡೌನ್ ಹಿನ್ನೆಲೆ ಊಟ ಬಂದ್ ಆಗಿದ್ದು ಮನೆ ಮನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆಯರು ಮೂಲಕ ಆಹಾರ ಧಾನ್ಯ ವಿತರಿಸುತ್ತಿದೆ. ಆದರೂ, ಪರಿಣಾಮಕಾರಿಯಾಗಿ ಯೋಜನೆ ಫಲಾನುಭವಿಗಳಿಗೆ ತಲುಪುತ್ತಿಲ್ಲ.

ಕೊರೋನ ಕೆಲಸಕ್ಕೆ ಆಶಾ ಕಾರ್ಯಕರ್ತೆಯರು: ಗರ್ಭಿಣಿಯರನ್ನು ಆರೈಕೆ ಮಾಡಬೇಕಾದ ಆಶಾ ಕಾರ್ಯಕರ್ತೆಯರನ್ನು ಕೊರೋನ ಕೆಲಸಕ್ಕೆ ನಿಯೋಜಿಸಲಾಗಿದೆ. ಇದರ ನೇರ ಪರಿಣಾಮ ತಾಯಂದಿರ ಮೇಲೆ ಬಿದ್ದಿದ್ದು, ಸಾವಿರಾರು ಸಂಖ್ಯೆಯಲ್ಲಿ ಶಿಶುಗಳು ಮೃತಪಟ್ಟಿವೆ. ಸರಿಯಾದ ಚಿಕಿತ್ಸೆ, ಚುಚ್ಚುಮದ್ದು ನೀಡದಿರುವುದರಿಂದ ಗರ್ಭಿಣಿಯರು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ರಾಜ್ಯ ಸರಕಾರವೇ ನೀಡಿದ ಅಂಕಿ ಅಂಶದ ಪ್ರಕಾರ ಕೊರೋನ ಪಾಸಿಟಿವ್ ಕೇಸ್‍ಗಳಿಗಿಂತ ಶಿಶುಗಳ ಮರಣ ಪ್ರಮಾಣವೇ ಹೆಚ್ಚಾಗಿದ್ದು, ಈ ಬಗ್ಗೆ ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆ ಗಮನ ವಹಿಸಬೇಕಾಗಿದೆ.

ವರದಿ ನೋಡುವಂತೆ ಆರೋಗ್ಯ ಇಲಾಖೆಗೆ ಪತ್ರ

ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನವಜಾತ ಶಿಶುಗಳ ಸಾವುಗಳು ಸಂಭವಿಸಿವೆ. ಗರ್ಭಿಣಿಯರು ಮತ್ತು ಬಾಣಂತಿಯರು ಆಹಾರ ಕೊರತೆ ಹಾಗೂ ಔಷಧಿ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಂದ ನಿರೀಕ್ಷಿತ ಸಹಾಯ ದೊರಕುತ್ತಿಲ್ಲ. ಇದರಿಂದಾಗಿ ಲಾಕ್‍ಡೌನ್ ಸಂದರ್ಭದಲ್ಲಿ 1,206 ಶಿಶುಗಳು ಮೃತಪಟ್ಟಿದ್ದು, ಈ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಾಯಿದೆ ಪ್ರಕರಣ 14, 15ರ ಅಡಿಯಲ್ಲಿ ದತ್ತವಾದ ಅಧಿಕಾರಗಳನ್ನು ಬಳಸಿಕೊಂಡು ವಿಚಾರಣೆ ಆರಂಭಿಸಿದೆ. ಶಿಶುಗಳ ಮರಣಕ್ಕೆ ಸಂಬಂಧಿಸಿದ ಸಂಪೂರ್ಣ ವರದಿಯನ್ನು ಆಯೋಗಕ್ಕೆ ಕಳುಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಕೊರೋನ ಲಾಕ್‍ಡೌನ್ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಶಿಶುಗಳು ಮೃತಪಟ್ಟಿವೆ. ಪ್ರಾಥಮಿಕ ಮಾಹಿತಿ ಪ್ರಕಾರ ಗರ್ಭಿಣಿಯರ ಅಪೌಷ್ಟಿಕತೆ ಕಾರಣ ಎಂಬುದು ತಿಳಿದು ಬಂದಿದ್ದು, ಈ ಸಂಬಂಧ ಸಮಗ್ರ ವರದಿ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪತ್ರ ಬರೆಯಲಾಗಿದೆ.

-ಡಾ. ಅಂತೋಣಿ ಸೆಬಾಸ್ಟಿಯನ್

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ

ಕೊರೋನ ಲಾಕ್‍ಡೌನ್ ಸಮಯದಲ್ಲಿ ಶಿಶುಗಳು ಮರಣ ಹೊಂದುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆಯುತ್ತೇನೆ. ರಾಜ್ಯದಲ್ಲಿ ಕೊರೋನ ವಿರುದ್ಧ ಹೋರಾಟ ನಡೆಸಿದ್ದು, ಕೊರೋನ ವೈರಸ್ ಹೊರತುಪಡಿಸಿ ಇತರೆ ಚಿಕಿತ್ಸೆಗಳಿಗೂ ಆದ್ಯತೆ ನೀಡಲಾಗಿದೆ. ಇತ್ತೀಚಿಗೆ ಕೆಲ ಗೈಡ್ ಲೈನ್ಸ್ ಹೊರಡಿಸಲಾಗಿದೆ. ಅಗತ್ಯವಿದ್ದರೆ ಯಾವ ಜಿಲ್ಲೆಗೆ ಬೇಕಾದರೂ ಪಾಸ್ ಇಲ್ಲದೇ ಚಿಕಿತ್ಸೆಗೆ ತೆರಳಬಹುದು.
-ಜಾವೇದ್ ಅಖ್ತರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

Writer - -ಯುವರಾಜ್ ಮಾಳಗಿ

contributor

Editor - -ಯುವರಾಜ್ ಮಾಳಗಿ

contributor

Similar News