ಬೆಂಗಳೂರಿನಿಂದ ಮಹಾವಲಸೆ: ಲಾಕ್‍ಡೌನ್ ಸಡಿಲಿಕೆ ಬಳಿಕ ನಗರ ತೊರೆದ 2 ಲಕ್ಷ ಕಾರ್ಮಿಕರು

Update: 2020-05-10 17:14 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 10: ಕೊರೋನ ಸೋಂಕು ನಿವಾರಣೆಗಾಗಿ ಕೇಂದ್ರ ಸರಕಾರ ಘೋಷಿಸಿದ್ದ ಲಾಕ್‍ಡೌನ್ ಸಡಿಲಿಕೆಯಾದ ಬಳಿಕ ಸಿಲಿಕಾನ್ ಸಿಟಿಯಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ ಕಾರ್ಮಿಕರು ನಗರವನ್ನು ತೊರೆದಿದ್ದಾರೆ ಎಂದು ಅಂದಾಜಿಸಲಾಗಿದೆ.

ಕೊರೋನದಿಂದ ಇಡೀ ಶ್ರಮಿಕ ವರ್ಗ ತತ್ತರಿಸಿ ಹೋಗಿದೆ. ರಾಜ್ಯದ ಹಲವು ಜಿಲ್ಲೆಗಳು ಹಾಗೂ ಪರ ರಾಜ್ಯಗಳಿಂದ ದುಡಿಯಲು ರಾಜಧಾನಿಗೆ ಬಂದಿದ್ದ ಕಾರ್ಮಿಕರು ಇದೀಗ ಕೊರೋನದಿಂದ ಭಯಭೀತರಾಗಿ ತಮ್ಮ ಸ್ವಂತ ಊರುಗಳತ್ತ ಮರು ವಲಸೆ ಆರಂಭಿಸಿದ್ದಾರೆ. ಈ ನಡುವೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊರೋನ ನಿಯಂತ್ರಣದ ಜತೆಗೆ ವಲಸೆ ಕಾರ್ಮಿಕರ ಮರು ವಲಸೆಯನ್ನೂ ನಿಭಾಯಿಸಬೇಕಾದ ಸವಾಲು ಇದೆ.

ನಗರಗಳಿಂದ ತವರು ತಲುಪಿರುವ ಲಕ್ಷಾಂತರ ಕಾರ್ಮಿಕರಲ್ಲಿ ಎಲ್ಲರಿಗೂ ಸ್ಥಳೀಯವಾಗಿ ಉದ್ಯೋಗ ಲಭಿಸುವುದು ಅಸಾಧ್ಯ. ಬೇರೆ ಬೇರೆ ವೃತ್ತಿಯ ಕುಶಲಕರ್ಮಿಗಳು ಕೃಷಿ ಕೆಲಸಕ್ಕೆ ಒಗ್ಗಿಕೊಳ್ಳುತ್ತಿಲ್ಲ. ಜತೆಗೆ ಕೃಷಿಗೂ ಪೂರಕ ವಾತಾವರಣವಿಲ್ಲ. ಹಾಗಾಗಿ ಬಹುತೇಕ ಕಾರ್ಮಿಕರು ಮತ್ತೆ ನಗರಕ್ಕೆ ಮರಳುವುದು ಖಚಿತ. ಆದರೆ ಕೊರೋನ ರಾಜ್ಯದಲ್ಲಿ ಮತ್ತಷ್ಟು ವ್ಯಾಪಿಸುತ್ತಿರುವುದರಿಂದ ಲಕ್ಷಾಂತರ ಕಾರ್ಮಿಕರ ಅತಂತ್ರ ಸ್ಥಿತಿ ಮುಂದುವರಿಯಲಿದೆ.

ಮನರೇಗಾದ ಸ್ವರೂಪ ಬದಲಾಗಬೇಕಿದೆ: ಕೌಶಲರಹಿತ ಕಾರ್ಮಿಕರಿಗೆ ಉದ್ಯೊಗ ಸೃಷ್ಟಿಸುವ ನೆಲೆಯಲ್ಲಿ ಮನರೇಗಾ(ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತ್ರಿ ಕಾಯಿದೆ) ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಬೇಕೆಂಬ ಸಲಹೆ ಕೇಳಿ ಬರುತ್ತಿದೆ. ನರೇಗಾದ ಕೂಲಿ ದರವನ್ನು 249 ರೂ.ನಿಂದ 275 ರೂ.ಗೆ ಹೆಚ್ಚಿಸಿರುವುದು ಸಮಾಧಾನಕರ. ಆದರೆ, ಇಲ್ಲಿಯೂ ಸವಾಲಿದೆ.

ಗಾರೆ ಕೆಲಸ ಮಾಡಲು ಷಹರಗಳಿಗೆ ವಲಸೆ ಹೋಗಿದ್ದವರು ನರೇಗಾ ಕೂಲಿಗೆ ಹೊಂದಿಕೊಳ್ಳಬಹುದು. ಆದರೆ, ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಪೇಂಟರ್, ಕ್ಯಾಬ್‍ಡ್ರೈವಿಂಗ್, ವಸ್ತ್ರ ವಿನ್ಯಾಸ, ಆಹಾರ ಸಂಸ್ಕರಣೆ, ಆಭರಣ, ವೆಲ್ಡರ್ ಸೇರಿದಂತೆ ವಿವಿಧ ರೀತಿಯ ಉತ್ತಮ ಸಂಪಾದನೆಯ ಕೆಲಸ ಮಾಡುತ್ತಿದ್ದವರು ಒಗ್ಗಿಕೊಳ್ಳುವುದು ಕಷ್ಟ. ಹೀಗಾಗಿ ನರೇಗಾ ಕಾಮಗಾರಿಗಳ ಮರು ವಿನ್ಯಾಸದ ಅಗತ್ಯವಿದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಕೇರಳ ಮಾದರಿ ಲ್ಯಾಂಡ್‍ಆರ್ಮಿ: ಕೇರಳ ಮಾದರಿಯಲ್ಲಿ ಯುವಕರನ್ನು ಒಳಗೊಂಡ 'ಲ್ಯಾಂಡ್‍ಆರ್ಮಿ' ಸಂಘಟನೆ ಕಟ್ಟಬೇಕು. ಈ ತಂಡದ ಯುವಕರನ್ನು ಕೃಷಿ ಯಂತ್ರ ಬಳಕೆಗೆ ಉತ್ತೇಜಿಸಬೇಕು. ಇನ್ನು ಐಟಿ, ಬಿಟಿ ಇನ್ನಿತರ ದೊಡ್ಡ ಉದ್ಯೊಗ ಬಿಟ್ಟು ಹಳ್ಳಿಗೆ ವಾಪಸಾದವರು ಮಾರುಕಟ್ಟೆ ಜಾಲ ವಿಸ್ತರಣೆ ಇನ್ನಿತರ ಸ್ಟಾರ್ಟ್ ಅಪ್ ಪ್ರಾರಂಭಿಸಲು ಪ್ರೋತ್ಸಾಹಿಸಬೇಕು ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ ಕಮ್ಮರಡಿ ಹೇಳಿದ್ದಾರೆ.

ರಾಜ್ಯದಲ್ಲಿ ಸುಮಾರು 8,500 ಕೋಟಿ ರೂ. ಕಾರ್ಮಿಕ ಕಲ್ಯಾಣ ನಿಧಿಯ ಹಣ ಖರ್ಚಾಗದೆ ಉಳಿದಿದೆ. ಸುಮಾರು 22 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ. 5.25 ಲಕ್ಷ ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಕಳೆದ 8 ವರ್ಷದ ಅವಧಿಯಲ್ಲಿ 641 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಲೆಕ್ಕ ತೋರಿಸಲಾಗುತ್ತಿದೆ. ರಾಜ್ಯದ ಎಲ್ಲ ಚಟುವಟಿಕೆಗಳಲ್ಲಿ ಶೇ.1ರಷ್ಟು ಕಾರ್ಮಿಕ ಸೆಸ್ ವಿಧಿಸಲಾಗುತ್ತದೆ. ಆದರೆ ಈ ನಿಧಿಯ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ಸುಪ್ರೀಂಕೋರ್ಟ್ ಕಾಲಕಾಲಕ್ಕೆ ಬಿಗಿ ನಿರ್ದೇಶನ ಕೊಟ್ಟಿದ್ದರ ಫಲವಾಗಿ ಕಾರ್ಮಿಕ ಕಲ್ಯಾಣ ನಿಧಿಯ ಹಣ ಬೇರೆಕಡೆ ಹೋಗದೆ ಹಾಗೆಯೇ ಉಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News