ಎಸ್.ಎ.ರಾಮದಾಸ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಸಂಸದ ಪ್ರತಾಪ್ ಸಿಂಹ

Update: 2020-05-10 17:37 GMT

ಮೈಸೂರು,ಮೇ.10: ನಗರದ ವಿದ್ಯಾರಣ್ಯಪುರಂ ನಲ್ಲಿರುವ ಸೂಯೇಜ್ ಫಾರಂ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಎಸ್.ಎ.ರಾಮದಾಸ್ ನುಡುವಿನ ಶೀತಲ ಸಮರ ಮುಂದುವರಿದಿದೆ.

ಸೂಯೇಜ್ ಫಾರಂನ ಕಸ ವಿಲೇವಾರಿ ಸಂಬಂಧ ಮಹರಾಷ್ಟ್ರದ ನಾಗಪುರ ಮಾದರಿಯಲ್ಲಿ ನಿರ್ಮಾಣ ಮಾಡುವ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದ ನಿಯೋಗ ಭೇಟಿ ನೀಡಿ ವರದಿ ನೀಡಿರುವ ಮಾಹಿತಿ ನನಗೆ ಇಲ್ಲ ಎಂದಿದ್ದ ಶಾಸಕ ಎಸ್.ರಾಮದಾಸ್ ವಿರುದ್ಧ ಗರಂ ಆಗಿರುವ ಸಂಸದ ಪ್ರತಾಪ್ ಸಿಂಹ, ಯೋಜನೆ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ರವಿವಾರ ಮಾಧ್ಯಮಗಳಿಗೆ ತೋರಿಸಿ ತಿರುಗೇಟು ನೀಡಿದ್ದಾರೆ.

ಅಲ್ಲದೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಸುಯೋಜ್ ಫಾರಂ ಕಾಮಗಾರಿ ನಡೆಯುವ ಪ್ರದೇಶಕ್ಕೆ 5 ನವೆಂಬರ್ 2019 ರಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ನೇತೃತ್ವದಲ್ಲಿ ಭೇಟಿ ನೀಡಿದ್ದೆವು. ಅಲ್ಲಿ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ವಿ.ಸೋಮಣ್ಣನವರು ಸ್ಥಳದಲ್ಲೇ ಜಿಲ್ಲಾಧಿಕಾರಿ ಅಭಿರಾಜ್ ಜಿ.ಶಂಕರ್ ನೇತೃತ್ವದಲ್ಲಿ ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆ ಮಾಡಿ ನವೆಂಬರ್ 25 ರೊಳಗೆ ವರದಿ ನೀಡುವಂತೆ ಸೂಚಿಸಿದ್ದರು. ಆ ಸಭೆಗೆ ಶಾಸಕ ರಾಮದಾಸ್ ಅವರನ್ನು ಸಚಿವ ಸೋಮಣ್ಣ ಖುದ್ದಾಗಿ ಆಹ್ವಾನಿಸಿದ್ದರು. ಬಳಿಕ 2020 ಜನವರಿ 3 ರಂದು ನಡೆಯುವ ಕೆಡಿಪಿ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನವಾಗಬೇಕು, ಅಷ್ಟರಲ್ಲಿ ನಾಗ್ಪುರ ಪ್ಲಾಂಟ್‍ಗೆ ಪ್ರತ್ಯಕ್ಷ ಭೇಟಿ ನೀಡಿ ಅಭಿಪ್ರಾಯ ತಿಳಿಸಬೇಕೆಂದು ಸೋಮಣ್ಣ ಸೂಚಿಸಿದ್ದರು.

ಹೀಗಾಗಿ ಮೇಯರ್, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರನ್ನು ಒಳಗೊಂಡ ತಂಡ ಡಿಸೆಂಬರ್ 31 ರಂದು ನಾಗಪುರ ಪ್ಲಾಂಟ್‍ಗೆ ಹೋಗಿ ಜನವರಿ 3 ರ ಸಭೆಯಲ್ಲಿ ಸಕಾರಾತ್ಮಕ ಅಭಿಪ್ರಾಯ ಕೊಟ್ಟಿದ್ದರು. ನಂತರ ಮೂರು ತಿಂಗಳ ಕಾಲ ಸತತವಾಗಿ ನಗರಾಭಿವೃದ್ಧಿ ಇಲಾಖೆ ಮತ್ತು ಹಣಕಾಸು ಇಲಾಖೆಗೆ ಅಲೆದು ಟೆಂಡರ್ ಕರೆದು ಕಾಮಗಾರಿ ಆರಂಭಿಸುವ ಹಂತಕ್ಕೆ ತಂದಿದ್ದೇವೆ. ಇದನ್ನು ಹೊರತಾಗಿ ಇನ್ನೇನು ಮಾಡಲು ಸಾಧ್ಯವಿದೆ ಹೇಳಿ. ಐದೇ ತಿಂಗಳಲ್ಲಿ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದೆ ತಪ್ಪಾ ಎಂದು ಪ್ರಶ್ನಿಸಿದ್ದಾರೆ.

ಜನರ ಕಷ್ಟ ಪರಿಹಾರ ಮಾಡಲೇಬೇಕೆಂಬ ಕಾಳಜಿಯಿಂದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರು ಸೋಮಣ್ಣನವರು ಕರೆದ ಸಭೆಗೆ ಬರಲು ಸಾಧ್ಯವಾಗುವುದಾದರೆ ಉಳಿದವರಿಗೆ ಏನು ಸಮಸ್ಯೆಯಿತ್ತು? ಮೂರು ಸಭೆಗಳಲ್ಲಿ ಕನಿಷ್ಠ ಒಂದಕ್ಕಾದರೂ ಬರಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕಳೆದ 30-35 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದರೂ ಯಾರಿಂದಲೂ ಪರಿಹಾರ ಕಾಣದ ಸೂಯೇಜ್ ಫಾರಂ ದುರ್ವಾಸನೆ ಬೀರುವ ಎರಡೂವರೆ ಲಕ್ಷ ಟನ್ ಕಸದ ನಿರ್ಮೂಲನೆಗೆ, ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮುಂದಾಳತ್ವದಲ್ಲಿ ಕಳೆದ 5 ತಿಂಗಳಿನಿಂದ ಮಾಡಿದ ಪ್ರಾಮಾಣಿಕ ಪ್ರಯತ್ನದ ಪತ್ರಿಕಾ ವರದಿ ನೋಡಿ ಎಂದು ಪ್ರತಾಪ್ ಸಿಂಹ ಛೇಡಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News