ಕನ್ನಡಿಗರನ್ನು ಕರೆತರಲು ವಿಮಾನ ವ್ಯವಸ್ಥೆ ಕಲ್ಪಿಸಿ: ಯು.ಟಿ.ಖಾದರ್ ಆಗ್ರಹ

Update: 2020-05-11 17:43 GMT

ಬೆಂಗಳೂರು, ಮೇ 11: ದುಬೈ ಸೇರಿದಂತೆ ವಿದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ಮಂಗಳೂರು ಮತ್ತು ಬೆಂಗಳೂರಿಗೆ ಕೂಡಲೇ ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅನ್ಯ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ರೈಲು ಮತ್ತು ಬಸ್ ವ್ಯವಸ್ಥೆ ಕಲ್ಪಿಸಬೇಕು. ಕೂಲಿ ಕಾರ್ಮಿಕರು ಪಾಸ್ ಪಡೆದುಕೊಳ್ಳಲು ಹರಸಾಹಸ ಪಡಬೇಕಿದೆ. ಕ್ವಾರಂಟೈನ್ ವಿಚಾರದಲ್ಲಿಯೂ ಸರಕಾರಕ್ಕೆ ಸ್ಪಷ್ಟತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮಾರಕ ಕೊರೋನ ಸೋಂಕು ನಿಯಂತ್ರಣ ದೃಷ್ಟಿಯಿಂದ ನಲವತ್ತೈದು ದಿನಗಳಿಂದ ರಾಜ್ಯ ಸರಕಾರಕ್ಕೆ ಪಕ್ಷ ಅಗತ್ಯ ಸಹಕಾರ ನೀಡಿದೆ. ಆದರೆ, ಸೋಂಕು ತಡೆಗಟ್ಟಲು ಸರಕಾರದ ಸಾಧನೆ ಶೂನ್ಯ. ಐಸಿಎಂಆರ್ ಈವರೆಗೂ ರಾಜ್ಯ ಸರಕಾರಕ್ಕೆ ವರದಿ ನೀಡಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ಸರಕಾರ ಐಸಿಎಂಆರ್ ವರದಿ ಬಹಿರಂಗಪಡಿಸದಿದ್ದಲ್ಲಿ ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಲಾಕ್‍ಡೌನ್ ವಿಚಾರದಲ್ಲಿಯೂ ಗೊಂದಲ ಮುಂದುವರಿದಿದೆ. ಈವರೆಗೂ ಎಷ್ಟು ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂಬ ಪಟ್ಟಿ ನೀಡಿಲ್ಲ. ರಾಜ್ಯ ಸರಕಾರಕ್ಕೆ ಯಾವುದೇ ಯೋಜನೆ ಇಲ್ಲ. ಆರ್ಥಿಕ ಕುಸಿತ ತಡೆಗೆ ಸರಕಾರ ಯಾವುದೇ ಕ್ರಿಯಾ ಯೋಜನೆ ರೂಪಿಸಿಲ್ಲ ಎಂದು ದೂರಿದ ಅವರು, ಕೂಡಲೇ ಐಸಿಎಂಆರ್ ವರದಿ ತರಿಸಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News