ರೈಲು ಸಂಚಾರ ಆರಂಭವಾದರೂ ಬಾಲಮಂದಿರದಲ್ಲೇ ಉಳಿಯಲಿರುವ ಅಂತರ್ ರಾಜ್ಯ ಮಕ್ಕಳು !

Update: 2020-05-12 17:26 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 12: ಕೊರೋನ ಲಾಕ್​ಡೌನ್ ಹಿನ್ನೆಲೆಯಲ್ಲಿ ಅನ್ಯರಾಜ್ಯದ ಕಾರ್ಮಿಕರಿಗೆ ತಮ್ಮೂರಿಗೆ ತೆರಳುವ ಭಾಗ್ಯ ಬಂದರೂ, ಬಾಲಕಾರ್ಮಿಕ, ಭಿಕ್ಷಾಟನೆ ಸುಳಿಯಿಂದ ಪಾರಾದ ಉತ್ತರ ಭಾರತದ ಮಕ್ಕಳು ಮಾತ್ರ ರಾಜ್ಯದಲ್ಲಿಯೇ ಇರಬೇಕಾದ ದುಸ್ಥಿತಿ ಎದುರಾಗಿದೆ. ಹೆತ್ತವರ ಮಡಿಲು ಸೇರಬೇಕಾದ ಸುಮಾರು 50ಕ್ಕೂ ಅಧಿಕ ಮಕ್ಕಳು ಇನ್ನೆರಡು ತಿಂಗಳು ಬಾಲಮಂದಿರದಲ್ಲಿಯೇ ಉಳಿಯಬೇಕಾಗಿದೆ!

ಪೋಷಕರು ತಮ್ಮ ಮಕ್ಕಳು ಬರುತ್ತಾರೆಂದು ಆಸೆ ಕಣ್ಣುಗಳಿಂದ ಎದುರು ನೋಡುತ್ತಿದ್ದು, ಗೂಡು ಸೇರಬೇಕಾದ ಅಂತರ್ ರಾಜ್ಯ ಮಕ್ಕಳು, ರೈಲು ಸಂಚಾರ ಆರಂಭವಾದರೂ, ತಮ್ಮ ಮನೆಗಳಿಗೆ ತೆರಳುವ ಭಾಗ್ಯವಿಲ್ಲದಂತಾಗಿದೆ.

ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ನಾಗಾಲ್ಯಾಂಡ್, ಅಸ್ಸಾಂ ಸೇರಿದಂತೆ ಉತ್ತರ ಭಾರತದ 18 ವರ್ಷ ಕೆಳಗಿನ ಮಕ್ಕಳನ್ನು ಉದ್ಯೋಗ ನೀಡುವುದಾಗಿ ಕರೆದುಕೊಂಡು ಬಂದು ಅವರಿಂದ ಭಿಕ್ಷಾಟನೆ, ಲೈಂಗಿಕ ಚಟುವಟಿಕೆ ನಡೆಸಲಾಗುತ್ತಿದೆ. 1098 ಚೈಲ್ಡ್ ಲೈನ್ ಸದಸ್ಯರು ಇಂತಹ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸುತ್ತಾರೆ. ಅವರಿಗೆ ಕೌನ್ಸಲಿಂಗ್ ಮಾಡಿ, ಮಾಹಿತಿ ಪಡೆದು ಬಾಲಮಂದಿರದಲ್ಲಿ ಇರಿಸಲಾಗುತ್ತದೆ. ನಂತರ ಮಕ್ಕಳು ಇರುವ ರಾಜ್ಯದ ಮಕ್ಕಳ ಕಲ್ಯಾಣ ಸಮಿತಿ ಜತೆ ಚರ್ಚಿಸಿ ಮಗುವಿನ ವಿಳಾಸ ಪತ್ತೆ ಹಚ್ಚಿ ಪೊಲೀಸರ ಸಹಕಾರದೊಂದಿಗೆ ಮಕ್ಕಳನ್ನು ಕಳುಹಿಸಿಕೊಡಲಾಗುತ್ತದೆ.

ಇದೇ ರೀತಿ ಪ್ರತಿ ವರ್ಷ ನೂರಾರು ಮಕ್ಕಳನ್ನು ತಮ್ಮ ಹುಟ್ಟೂರಿಗೆ ಕಳುಹಿಸಿ ಕೊಡಲಾಗುತ್ತದೆ. ಈಗಾಗಲೇ 50ಕ್ಕೂ ಅಧಿಕ ಮಕ್ಕಳನ್ನು ಕಳುಹಿಸಲು ಸಿದ್ಧತೆ ನಡೆಸಿದೆ. ಆದರೆ, ಕೊರೋನ ಲಾಕ್​ಡೌನ್ ಹಿನ್ನೆಲೆಯಲ್ಲಿ ಈ ರೀತಿ ಬಂಧಿಗಳಾದ ಮಕ್ಕಳು ಇನ್ನು ಬಾಲಮಂದಿರದಲ್ಲಿಯೇ ಉಳಿದಿದ್ದಾರೆ. 

ಇದೀಗ ರೈಲುಗಳ ಸಂಚಾರಕ್ಕೆ ಭಾಗಶಃ ಅನುಮತಿ ಸಿಕ್ಕಿದ್ದು, ಮಕ್ಕಳು ತೆರಳಲು ಪೊಲೀಸ್ ವ್ಯವಸ್ಥೆ, ರೈಲ್ವೆ ಟಿಕೆಟ್ ಸೇರಿ ಇನ್ನಿತರ ಕೆಲಸಗಳಿಗಾಗಿ ಸುಮಾರು ಎರಡು ತಿಂಗಳಾದರೂ ಬೇಕಾಗಲಿದೆ ಎಂದು 'ವಾರ್ತಾಭಾರತಿ'ಗೆ ಮಕ್ಕಳ ಕಲ್ಯಾಣ ಸಮಿತಿ ತಿಳಿಸಿದೆ.

ಇಲಾಖೆಗೆ ಪತ್ರ ಬರೆದ ಸಮಿತಿ: ಅಂತರ್ರಾಜ್ಯದವರಿಗೆ ತಮ್ಮ ಮನೆಗೆ ತೆರಳಲು ಸರಕಾರ ರೈಲು ಸಂಚಾರಕ್ಕೆ ಅವಕಾಶ ನೀಡಿದ ಬೆನ್ನಲ್ಲೆ ಮಕ್ಕಳ ಕಲ್ಯಾಣ ಸಮಿತಿಯು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ. ಕಾರ್ಮಿಕರು ತೆರಳಿದಂತೆ ಮಕ್ಕಳನ್ನು ಹುಟ್ಟೂರಿಗೆ ಕಳುಹಿಸಲು ಪೊಲೀಸ್ ಭದ್ರತೆಗಾಗಿ ಪತ್ರ ಬರೆಯುವಂತೆ, ರೈಲ್ವೆ ಟಿಕೆಟ್ ಬುಕ್ ಮಾಡುವಂತೆ ಪತ್ರದ ಮೂಲಕ ತಿಳಿಸಿದೆ.

ಅಂತರ್ರಾಜ್ಯ ಮಕ್ಕಳ ಕಲ್ಯಾಣ ಸಮಿತಿಗೆ ಮನವಿ: ಮಕ್ಕಳನ್ನು ಕರೆಸಿಕೊಳ್ಳುವ ಸಂಬಂಧ ಆಯಾ ರಾಜ್ಯಗಳ ಮಕ್ಕಳ ಕಲ್ಯಾಣ ಸಮಿತಿಯು ಅಲ್ಲಿನ ಅಧಿಕಾರಿಗಳು ಮತ್ತು ಸರಕಾರಕ್ಕೆ ಒತ್ತಡ ಹೇರಬೇಕು. ಮಗು ತೆರಳಲು ಇರುವ ನಿಯಾಮಾವಳಿಗಳನ್ನು ಪೂರ್ಣಗೊಳಿಸಬೇಕು ಎಂದು ಸಮಿತಿ ಮನವಿ ಮಾಡಿದೆ.

ಪೊಲೀಸ್ ಭದ್ರತೆ ಸಿಗುವುದು ಕಷ್ಟ: ಬಾಲ ನ್ಯಾಯ ಕಾಯ್ಡೆಯಡಿ ಅಂತರ್ರಾಜ್ಯ ಮತ್ತು ಅಂತರ್ಜಿಲ್ಲಾ ಮಕ್ಕಳನ್ನು ಪೊಲೀಸರ ಭದ್ರತೆಯಲ್ಲಿಯೇ ಕಳುಹಿಸಬೇಕು ಎಂಬ ನಿಯಮವಿದೆ. ಆದರೆ, ಪ್ರಸ್ತುತ ಪೊಲೀಸರು ಕೊರೋನ ಸಂಬಂಧಿತ ಕೆಲಸದಲ್ಲಿ ನಿರತರಾಗಿದ್ದು, ಪೊಲೀಸರಿಗೆ ಬಿಡುವಿಲ್ಲದ ಕೆಲಸವಿದೆ. ಆದ್ದರಿಂದ ಅವರ ಭದ್ರತೆ ಸಿಗುವುದು ಕಷ್ಟವಿದೆ. ಕೊರೋನ ಬರುವುದಕ್ಕಿಂತ ಮೊದಲು ಅಂತರ್ರಾಜ್ಯಕ್ಕೆ ಮಕ್ಕಳನ್ನು ಪೊಲೀಸರೊಂದಿಗೆ ಕಳುಹಿಸಲು ಪತ್ರಗಳನ್ನು ಬರೆದರೂ, ಉತ್ತರಿಸದ ಇಲಾಖೆ ಕೊರೋನ ಬರಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.

ಹಮಾರಾ ಘರ್ ಕೋ ಚೋಡೊ..
ಉತ್ತರ ಭಾರತದ 5 ಬಾಲಕಿಯರು, 45 ಬಾಲಕರು ತಮ್ಮೂರಿಗೆ ತೆರಳಲು ತುದಿಗಾಲಿನಲ್ಲಿದ್ದು, ಬಾಲಮಂದಿರದ ಅಧಿಕಾರಿಗಳಿಗೆ ಹಮಾರಾ ಘರ್ ಕೋ ಚೋಡೋ ಎಂದು ಹೇಳುತ್ತಿದ್ದಾರೆ. ಪ್ರತಿಯೊಬ್ಬರೂ ಬೆಂಗಳೂರಿಗೆ ಬಂದು 2, 3 ವರ್ಷಗಳಾಗಿದ್ದು, ಈವರೆಗೆ ತಮ್ಮೂರಿಗೆ ತೆರಳಿಲ್ಲ. ಇದೀಗ ಮಹಾಮಾರಿ ಕೊರೋನ ಇದ್ದು, ಆತಂಕ ಮನೆ ಮಾಡಿದೆ. ಯಾವಾಗ ಪೋಷಕರನ್ನು ನೋಡುತ್ತೇವೆ ಎಂಬ ಚಿಂತೆಯಲ್ಲಿ ಮಕ್ಕಳು ಇದ್ದಾರೆ.

ಕೆಲ ಮಕ್ಕಳ ಊರಿಗೆ ರೈಲು ವ್ಯವಸ್ಥೆ ಇಲ್ಲ: ಅಸ್ಸಾಂ, ನಾಗಾಲ್ಯಾಂಡ್ ನಂತಹ ರಾಜ್ಯಗಳಿಂದ ಬಂದು ಬಾಲಕಾರ್ಮಿಕರ ಸುಳಿಯಲ್ಲಿ ಸಿಲುಕಿದ್ದ ಮಕ್ಕಳನ್ನು ರಕ್ಷಿಸಲಾಗಿದ್ದು, ಅವರನ್ನು ತಮ್ಮ ಊರಿಗೆ ಕಳುಹಿಸಲು ಕಷ್ಟವಾಗಿದೆ. ಏಕೆಂದರೆ ಅಸ್ಸಾಂ, ನಾಗಾಲ್ಯಾಂಡ್ ಗುಡ್ಡಗಾಡು ಪ್ರದೇಶವಾಗಿದ್ದು, ಅಲ್ಲಿಗೆ ತೆರಳಲು ರೈಲ್ವೆ ವ್ಯವಸ್ಥೆ ಇಲ್ಲ. ಕರ್ನಾಟಕದಿಂದ ಅವರ ರಾಜ್ಯಕ್ಕೆ ರೈಲು ಮೂಲಕ ತೆರಳಿ, ಅಲ್ಲಿಂದ ಬಸ್, ಆಟೋ, ಲಾರಿ ಮೂಲಕ ತೆರಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ಆಟೋ, ಬಸ್ ಸಿಗುವುದು ಕಷ್ಟವಿದೆ. ಆದ್ದರಿಂದ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ ಎಂದು ಇಲಾಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರ್ಮಿಕರು ರೈಲು ಮೂಲಕ ಅಂತರ್ ರಾಜ್ಯಕ್ಕೆ ಹೋದಂತೆ ಮಕ್ಕಳು ಹೋಗಲು ಸಾಧ್ಯವಿಲ್ಲ. ಕೆಲ ನಿಯಮಗಳಿವೆ. ಪೊಲೀಸ್ ಎಸ್ಕಾರ್ಟ್, ಟಿಕೆಟ್ ಬುಕ್ ಸೇರಿದಂತೆ ಇನ್ನಿತರೆ ಕೆಲಸಗಳಿಗೆ ವಿಳಂಬವಾಗಲಿದೆ. ಕೊರೋನ ಮುಕ್ತವಾದ ನಂತರ ಮಕ್ಕಳನ್ನು ಕಳಿಸುವುದು ಉತ್ತಮ.
-ವಾಸುದೇವ ಶರ್ಮಾ, ಚೈಲ್ಡ್ ರೈಟ್ಸ್ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕ

Writer - -ಯುವರಾಜ್ ಮಾಳಗಿ

contributor

Editor - -ಯುವರಾಜ್ ಮಾಳಗಿ

contributor

Similar News