ಹಾಲು ಒಕ್ಕೂಟದ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅವ್ಯವಹಾರ: ಶಾಸಕ ಸಾ.ರಾ.ಮಹೇಶ್ ಆರೋಪ

Update: 2020-05-12 18:46 GMT

ಮೈಸೂರು,ಮೇ.12: ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ, ಅವ್ಯವಹಾರಗಳು ನಡೆದಿವೆ ಎಂದು  ಶಾಸಕ ಸಾ.ರಾ,ಮಹೇಶ್ ಗಂಭೀರವಾಗಿ ಆರೋಪಿಸಿದರು.

ನಗರದ ಅವರ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಸಭೆಯಲ್ಲಿ ಅಕ್ರಮವಾಗಿ ಅನುಮತಿ ನೀಡಿ ಹೆಚ್ಚುವರಿ ಹುದ್ದೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಸದ್ಯ ನಡೆಯುತ್ತಿರುವ ಎಲ್ಲಾ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು  ಆಗ್ರಹಿಸಿದರು.

ಪ್ರಸ್ತುತ 168 ಹುದ್ದೆಗಳ ನೇಮಕಾತಿಗೆ ಆದೇಶ ಇದೆ.ಆದರೆ ಹೆಚ್ಚುವರಿಯಾಗಿ 25 ಹುದ್ದೆಗಳನ್ನು ಇವರು ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. 18 ಸಾವಿರ ಜನ ಪರೀಕ್ಷೆ ಎದುರಿಸಿದ್ದರು. ಈ ಪೈಕಿ 168 ಹಾಗೂ 25 ಮಂದಿ ಮಾತ್ರ ಪಾಸಾಗಿದ್ದಾರೆ. ಈ ಎಲ್ಲಾ ವ್ಯವಹಾರದಲ್ಲಿ 30 ರಿಂದ 40 ಕೋಟಿ ರೂ. ಅವ್ಯವಹಾರ ನಡೆದಿದೆ. ಈ ಪರೀಕ್ಷೆ ನಡೆಸಿದ್ದ ಏಜೆನ್ಸಿಯ ಮೇಲೂ ಆರೋಪ ಇದೆ. ಇವೆಲ್ಲದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸದ್ಯ ನಡೆಯುತ್ತಿರುವ ಎಲ್ಲಾ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಮೈಸೂರು ಹಾಲು ಒಕ್ಕೂಟದಲ್ಲಿ 168 ಹುದ್ದೆಗಳಿಗೆ ನೇಮಕಾತಿ ಪ್ರಾರಂಭಗೊಂಡು ತದನಂತರ ಹೆಚ್ಚುವರಿಯಾಗಿ 25 ಹುದ್ದೆಗಳನ್ನು ನೇಮಕಾತಿ ಮಾಡಲು ಕೈಗೊಂಡಿರುವ ನಿರ್ಧಾರದ ಹಿಂದೆ ಅಕ್ರಮ ಅವ್ಯವಹಾರಗಳು ನಡೆದಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆ ನಂತರ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ ಎಂದ ಅವರು ಮೈಸೂರು ಹಾಲು ಒಕ್ಕೂಟದ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮ ಮ್ಯಾಚ್ ಫಿಕ್ಸಿಂಗ್ ಎಂದು ಆರೋಪಿಸಿದರು. ಮೈಸೂರು ಜಿಲ್ಲಾ ಹಾಲು ಒಕ್ಕೂಟ ರೈತರಿಂದ ಹಾಲು ಖರೀದಿ ಮಾಡುವ ವಿಚಾರದಲ್ಲೂ ರೈತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದೆ. ರೈತರಿಂದ ಖರೀದಿ ಮಾಡುತ್ತಿರುವ ಹಾಲಿನ ದರ ಕಡಿತ ಮಾಡಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಲಕ್ಷಾಂತರ ರೈತರಿಗೆ ನಷ್ಟವಾಗಲಿದೆ ಎಂದರು.

ಡೈರಿ ಆರ್ಥಿಕವಾಗಿ ಲಾಭದಲ್ಲಿ ನಡೆಯುತ್ತಿರುವುದರಿಂದಲೇ ಮೆಗಾ ಡೈರಿ ಆರಂಭವಾಗಿದೆ. ಹಾಲಿನ ದರವನ್ನು 4.50 ಪೈಸೆ ಕಡಿಮೆ ಮಾಡಿ ರೈತರಿಗೆ ನಷ್ಟ ಮಾಡುವುದು ಸರಿಯಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

ಹುಣಸೂರನ್ನು ಜಿಲ್ಲೆ ಮಾಡುತ್ತೇನೆ ಎಂದು ಹೇಳಲು ಎಚ್.ವಿಶ್ವನಾಥ್ ಯಾರು
ಹುಣಸೂರನ್ನು ದೇವರಾಜ ಅರಸು ಜಿಲ್ಲೆಯಾಗಿ ಮಾಡುತ್ತೇನೆ ಎಂದು ಹೇಳಲು ಎಚ್.ವಿಶ್ವನಾಥ್ ಯಾರು ಎಂದು ಶಾಸಕ ಸಾ.ರಾ ಮಹೇಶ್ ಪ್ರಶ್ನೆ ಮಾಡಿದ್ದಾರೆ.

ಕೊರೋನ ಎಲ್ಲಾ ಮುಗಿಯಲಿ, ನಂತರ ಹುಣಸೂರು ಜಿಲ್ಲೆ ಮಾಡುವುದೋ ಬೇಡವೋ ಎಂಬುದನ್ನು ಜನ ಹಾಗೂ ಸರ್ಕಾರ ತೀರ್ಮಾನ ಮಾಡಲಿದೆ. ಹುಣಸೂರು ಜಿಲ್ಲೆ ಮಾಡಲು ಹುಣಸೂರಿನ ಶಾಸಕ ಎಚ್.ಪಿ.ಮಂಜುನಾಥ್ ಹಾಗೂ ಕೆ.ಆರ್.ನಗರದ ಶಾಸಕ ಸಾ.ರಾ.ಮಹೇಶ್ ಅವರ ಅಭಿಪ್ರಾಯ ಬೇಡ ಎಂದು ಹೇಳಿದ್ದಾರೆ. ಆದರೆ, ಜನ ನನ್ನನ್ನು 3 ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಹುಣಸೂರನ್ನು ಜಿಲ್ಲೆ ಮಾಡುತ್ತೇನೆ ಎಂದು ಹೇಳಲು ವಿಶ್ವನಾಥ್ ಯಾರು ಎಂಬ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ಅಲ್ಲದೇ ಹುಣಸೂರು ಜಿಲ್ಲೆ ಮಾಡಲು ವಿಶ್ವನಾಥ್ ಯಾರು? ಅವರೇನು ಜನಪ್ರತಿನಿಧಿಯೇ? ಎಂದು ಸಾ.ರಾ ಮಹೇಶ್ ಹುಣಸೂರನ್ನು ದೇವರಾಜ ಅರಸು ಜಿಲ್ಲೆಯಾಗಿ ಮಾಡುತ್ತೇನೆ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News