ರಸ್ತೆಯಲ್ಲಿರುವ ವಲಸಿಗ ಕಾರ್ಮಿಕರ ಬಗ್ಗೆ ನಿರ್ಧರಿಸುವುದು ರಾಜ್ಯಕ್ಕೆ ಬಿಟ್ಟ ವಿಚಾರ: ಸುಪ್ರೀಂಕೋರ್ಟ್‌

Update: 2020-05-15 08:07 GMT

        ಹೊಸದಿಲ್ಲಿ ಮೇ.15: ರಸ್ತೆಯಲ್ಲಿ ಸಾಗುತ್ತಿರುವ ವಲಸಿಗ ಕಾರ್ಮಿಕರಿಗೆ ಆಹಾರ , ನೀರು ಹಾಗೂ ಆಶ್ರಯ ಒದಗಿಸಲು ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಇಂದು ತಿರಸ್ಕರಿಸಿದ ಸುಪ್ರೀಂಕೋರ್ಟ್ ರಸ್ತೆಯಲ್ಲಿ ಯಾರು ನಡೆದುಕೊಂಡು ಹೋಗುತ್ತಿದ್ದಾರೆ, ಯಾರು ಹೋಗುತ್ತಿಲ್ಲ ಎಂದು ಮೇಲ್ವಿಚಾರಣೆ ನಡೆಸುವುದಕ್ಕೆ ಈ ನ್ಯಾಯಾಲಯದಿಂದ ಸಾಧ್ಯವಿಲ್ಲ. ಇದನ್ನು ಆಯಾ ರಾಜ್ಯ ಸರಕಾರಗಳೆ ನಿರ್ಧರಿಸಲಿ. ಕೋರ್ಟ್ ಈ ಅರ್ಜಿಯನ್ನು ಏಕೆ ಆಲಿಸಬೇಕು ಅಥವಾ ತೀರ್ಮಾನಿಸಬೇಕು ಎಂದು ತೀಕ್ಷ್ಣವಾಗಿ ಕೇಳಿತು.

ರಸ್ತೆಗಳಲ್ಲಿ ನಡೆದುಕೊಂಡು ಹೋಗುತ್ತಿರುವ ವಲಸಿಗ ಕಾರ್ಮಿಕರನ್ನು ಗುರುತಿಸಿ ಆಹಾರ ಹಾಗೂ ಆಶ್ರಯ ನೀಡುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ಅಲೋಕ್ ಶ್ರೀನಿವಾಸ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ರೈಲು ಹಳಿ ಮೇಲೆ ಮಲಗಿದ್ದ 16 ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು ಮೃತಪಟ್ಟಿರುವ ದಾರುಣ ಘಟನೆಯನ್ನು ವಕೀಲರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
 ಜನರು ಎಲ್ಲೂ ನಿಲ್ಲದೇ ನಡೆದುಕೊಂಡು ತಮ್ಮೂರಿನತ್ತ ಹೋಗುತ್ತಿದ್ದಾರೆ.ಅವರನ್ನು ತಡೆಯುವುದು ಹೇಗೆ? ವಲಸಿಗ ಕಾರ್ಮಿಕರ ಕುರಿತು ನಿರ್ಧರಿಸುವುದು ಆಯಾ ರಾಜ್ಯ ಸರಕಾರಕ್ಕೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ಹೇಳಿತು.
 ಅರ್ಜಿಯು ಸಂಪೂರ್ಣವಾಗಿ ಸುದ್ದಿಪತ್ರಿಕೆಗಳ ತುಣಕುಗಳನ್ನು ಆಧರಿಸಿದೆ. ಪ್ರತಿಯೊಬ್ಬ ವಕೀಲರು ಘಟನೆಯ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಾರೆ. ಪ್ರತಿಯೊಂದು ವಿಷಯದ ಬಗ್ಗೆ ಜ್ಞಾನ ಪಡೆಯುತ್ತಾರೆ. ನಿಮ್ಮ ಜ್ಞಾನವು ಸಂಪೂರ್ಣವಾಗಿ ದಿನಪತ್ರಿಕೆಯ ತುಣುಕುಗಳನ್ನೇ ಆಧರಿಸಿದೆ. ನಂತರ ನ್ಯಾಯಾಲಯ ಇದನ್ನು ತೀರ್ಮಾನಿಸಬೇಕೆಂದು ನೀವು ಬಯಸುತ್ತೀರಿ. ಇದನ್ನು ರಾಜ್ಯಗಳೇ ನಿರ್ಧರಿಸಲಿ, ಈ ನ್ಯಾಯಾಲಯ ಏಕೆ ನಿರ್ಧರಿಸಬೇಕು ಅಥವಾ ಕೇಳಬೇಕು? ನಾವು ನಿಮಗೆ ವಿಶೇಷ ಪಾಸ್ ನೀಡುತ್ತೇವೆ. ನೀವು ಹೋಗಿ ಸರಕಾರದ ಆದೇಶವನ್ನು ಜಾರಿಗೊಳಿಸಬಹುದೇ? ಎಂದು ಹೇಳಿದ ನ್ಯಾಯಾಲಯ,ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.
 ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸರಕಾರ ಈಗಾಗಲೇ ವಲಸಿಗ ಕಾರ್ಮಿಕರು ತಮ್ಮ ಊರಿಗೆ ತಲುಪಲು ಸಾರಿಗೆ ವ್ಯವಸ್ಥೆ ಮಾಡಿದೆ. ಕೆಲವರು ತಮ್ಮ ಸರದಿಯನ್ನು ಕಾಯದೇ ಹೊರಡುತ್ತಿದ್ದಾರೆ... ಎಂದು ದೇಶದ ಹೆದ್ದಾರಿಗಳಲ್ಲಿ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ವಲಸಿಗರನ್ನು ಉದ್ದೇಶಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News