ಶಬರಿಮಲೆ ದೇಗುಲ ಪ್ರವೇಶಿಸಲೆತ್ನಿಸಿದ್ದ ಯುವತಿಗೆ ಕಡ್ಡಾಯ ನಿವೃತ್ತಿ ಪಡೆಯುವಂತೆ ಸೂಚಿಸಿದ ಬಿಎಸ್ಸೆನ್ನೆಲ್

Update: 2020-05-15 10:51 GMT
File Photo

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನಿಸಿದ್ದ ಕೇರಳದ ಯುವತಿ ರೆಹಾನ ಫಾತಿಮಾ ಅವರಿಗೆ ಬಿಎಸ್ಸೆನ್ನೆಲ್ ಸೇವೆಯಿಂದ ಕಡ್ಡಾಯ ನಿವೃತ್ತಿ ಪಡೆಯುವಂತೆ ಸಂಸ್ಥೆ ಸೂಚಿಸಿದೆ.

ಶಬರಿಮಲೆ ದೇಗುಲವನ್ನು ಪ್ರವೇಶಿಸಲು ಆಕೆ ನಡೆಸಿದ ಯತ್ನವು ಗ್ರಾಹಕರ ದೃಷ್ಟಿಯಲ್ಲಿ ಸಂಸ್ಥೆಯ ಗೌರವಕ್ಕೆ  ಧಕ್ಕೆ ತಂದಿದೆ ಎಂಬ ಕಾರಣ ನೀಡಿ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಆಕೆಗೆ ಸೂಚಿಸಲಾಗಿದೆ. ಆಕೆಯ ಕೃತ್ಯ ಅಶಿಸ್ತಿಗೆ ಸಮನಾಗಿದೆ ಹಾಗೂ ಅನುಚಿತ ವರ್ತನೆಯಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಆಕೆಯ ಉದ್ದೇಶಪೂರಿತ ಕೃತ್ಯವು ಕಂಪೆನಿಯ ಗೌರವಕ್ಕೆ ಚ್ಯುತಿ ತಂದಿದೆ ಎಂದೂ ಬಿಎಸ್ಸೆನ್ನೆಲ್ ಹೇಳಿದೆ.

ನವೆಂಬರ್ 2018ರಲ್ಲಿ ಆಕೆಯ ಫೇಸ್ ಬುಕ್ ಪೋಸ್ಟ್ ಗಳ ಹಿನ್ನೆಲೆಯಲ್ಲಿ ಆಕೆಯ ಬಂಧನದ ಬೆನ್ನಲ್ಲೇ ಆಕೆಯನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಟೆಕ್ನಿಷಿಯನ್ ಆಗಿ ದುಡಿಯುತ್ತಿದ್ದ ಫಾತಿಮಾ ಸಂಸ್ಥೆಯ ಆದೇಶದ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಯತ್ನಿಸುವುದಾಗಿ ತಿಳಿಸಿದ್ದಾರೆ.

ಹತ್ತರಿಂದ 50 ವರ್ಷದ ಮಹಿಳೆಯರ ಪ್ರವೇಶಾತಿಗೆ ಅನುಮತಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ ಅಕ್ಟೋಬರ್ 2018ರಲ್ಲಿ ದೇವಳ ತೆರೆದುಕೊಂಡಾಗ ಫಾತಿಮಾ ದೇವಳ ಪ್ರವೇಶಿಸಲೆತ್ನಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News