20 ಲಕ್ಷ ಕೋಟಿ ರೂ. ಪ್ಯಾಕೇಜ್‍ನಿಂದ ರೈತರಿಗೆ ಯಾವುದೇ ಲಾಭವಿಲ್ಲ: ಎಚ್.ಎಚ್.ದೇವರಾಜ್

Update: 2020-05-15 11:47 GMT

ಚಿಕ್ಕಮಗಳೂರು, ಮೇ 15: ಕೇಂದ್ರ ಸರಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್‍ನಿಂದ ಜನಸಾಮಾನ್ಯರಿಗೆ ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ಯಾವುದೇ ಲಾಭವಾಗಿಲ್ಲ. ಇದೊಂದು ಅವೈಜ್ಞಾನಿಕವಾದ ಬಜೆಟ್ ಆಗಿದೆ. ಅಲ್ಲದೇ ರಾಜ್ಯ ಸರಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ರೈತರ ವಿರೋಧಿಯಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಟೀಕಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಮೌಲ್ಯದ ಪ್ಯಾಕೇಜ್‍ನಿಂದ ರೈತರು, ಕಾಫಿಬೆಳೆಗಾರರು, ವಾಣಿಜ್ಯ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಅವರು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿರುವ ಬೆಳೆ ಸಾಲದ ಮೇಲಿನ ಮೂರು ತಿಂಗಳ ಬಡ್ಡಿಮನ್ನಾ ಯೋಜನೆ ಅವೈಜ್ಞಾನಿಕ ಯೋಜನೆಯಾಗಿದೆ. ರೈತರಿಗೆ ಗ್ರಾಮೀಣ ಬ್ಯಾಂಕ್‍ಗಳು ಮತ್ತು ಕೃಷಿ ಬ್ಯಾಂಕ್‍ಗಳ ಮೂಲಕ  4 ಲಕ್ಷ ರೂ. ಸಾಲ ನೀಡುತ್ತೇವೆಂದು ಹೇಳಿರುವುದು ಹಾಸ್ಯಾಸ್ಪದ. ಈಗಾಗಲೇ ಸಹಕಾರಿ ಬ್ಯಾಂಕ್‍ಗಳ ಮೂಲಕ 3 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲಾಗುತ್ತಿದ್ದು, ಕೇಂದ್ರ ಘೋಷಿಸಿರುವ 3 ತಿಂಗಳ ಸಾಲ ಮನ್ನಾ ಯೋಜನೆಯಿಂದ ಯಾವುದೇ ರೈತರಿಗೆ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ  ಘೋಷಣೆ ಮಾಡಿರುವ 10 ಸಾವಿರ ರೂ. ಸಾಲ ಯೋಜನೆಯು ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲೇ ರಾಜ್ಯ ಸರಕಾರ ಘೋಷಣೆ ಮಾಡಿರುವ ಯೋಜನೆಯಾಗಿದೆ ಎಂದ ಅವರು, ಅತೀವೃಷ್ಟಿಯಿಂದ ಮನೆ ಹಾಗೂ ಆಸ್ತಿ ಕಳೆದುಕೊಂಡವರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡದಿರುವುದು ಕೇಂದ್ರ ಜನವಿರೋಧಿ ನೀತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಟೀಕಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಹೊರಟಿರುವ ರಾಜ್ಯ ಸರಕಾರ ಕ್ರಮವನ್ನು ಜೆಡಿಎಸ್ ಖಂಡಿಸುತ್ತದೆ. ಸ್ವದೇಶಿ ವಸ್ತುಗಳ ಬಳಕೆಗೆ ಮಾಡಿ ಎಂದು ಪ್ರಧಾನಿ ಮೋದಿ ಕರೆ ನೀಡುತ್ತಾರೆ, ಆದರೆ ರಾಜ್ಯ ಸರಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತರ ಬದುಕನ್ನು ಸರ್ವನಾಶ ಮಾಡಲು ಹೋರಟಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ನಿರ್ಧಾರವನ್ನು ವಾಪಾಸ್ ಪಡೆಯಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜೆಡಿಎಸ್ ಮುಖಂಡ ಚಂದ್ರಪ್ಪ ಮಾತನಾಡಿ, ವಿದ್ಯುತ್ ಕಂಪೆನಿಗಳು ವಿದ್ಯುತ್ ವಿದ್ಯುತ್ ಬಿಲ್‍ನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ವಿದ್ಯುತ್ ಬಿಲ್ ವಿತರಣೆಯಲ್ಲಿ ಲೋಪವಾಗಿದೆ. ಆ ಬಿಲ್‍ಗಳನ್ನು ವಾಪಾಸ್ ಪಡೆದು ತಪ್ಪನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು. 

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಜಮೀಲ್ ಅಹ್ಮದ್, ಆನಂದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News