ಸೂಯೇಜ್ ಫಾರ್ಮ್ ಯೋಜನೆ ವಿಚಾರ: ಶಾಸಕ ರಾಮದಾಸ್ ವಿರುದ್ಧ ಪ್ರತಾಪ್ ಸಿಂಹ ಬಹಿರಂಗ ಸವಾಲು

Update: 2020-05-15 15:11 GMT

ಮೈಸೂರು,ಮೇ.15: ನಗರದ ಸೂಯೇಜ್ ಫಾರ್ಮ್ ಯೋಜನೆಗೆ ವಿರೋಧ ವ್ಯಕ್ತಪಡಿಸುವವರು ಪ್ರಧಾನಿ ನರೇಂದ್ರ ಮೋದಿ ಅವರ 'ಸ್ವಚ್ಛ ಭಾರತ್' ಯೋಜನೆ ವಿರೋಧಿಗಳು. ಆದ್ದರಿಂದ ಈ ಯೋಜನೆಯನ್ನ ನಾನು ಜಾರಿ ಮಾಡಿಯೇ ತಿರುತ್ತೇನೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿ ಬಹಿರಂಗ ಸವಾಲು ಹಾಕಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ತಮ್ಮದೇ ಪಕ್ಷದ ಮಾಜಿ ಸಚಿವ, ಹಾಲಿ ಶಾಸಕ ರಾಮದಾಸ್ ವಿರುದ್ಧ ತೊಡೆ ತಟ್ಟಿದ್ದಾರೆ.

ದೀಪ ಹಚ್ಚಿದರೆ ಕೊರೋನ ವೈರಸ್ ಹೋಗುತ್ತೆ ಅಂತ, ಗಾಳಿಯಲ್ಲಿ ದುರ್ವಾಸನೆ ಹೋಗುತ್ತೆ ಎಂದು ನಂಬಿಕೊಂಡು ಕೂರುವ ರಾಜಕಾರಣಿ ನಾನಲ್ಲ ಎಂದು ವ್ಯಂಗ್ಯವಾಡುವ ಮೂಲಕ ಶಾಸಕ ಎಸ್.ಎ.ರಾಮದಾಸ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಾನು ಸೂಯೇಜ್ ಫಾರ್ಮ್ ವಿಚಾರದಲ್ಲಿ ಜನರಿಗೆ ಮಾತು ಕೊಟ್ಟಿದ್ದೆ. ರಾಮದಾಸ್ ಅವರು ಮಾಜಿಯಾಗಿದ್ದಾಗ ಅವರ ಪ್ರತಿಭಟನಾ ಸ್ಥಳಕ್ಕೆ ನಾನು ಭೇಟಿ ಕೊಟ್ಟಿದ್ದೆ. ಸೂಯೇಜ್ ಫಾರ್ಮ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದೆ. ಅದಕ್ಕಾಗಿ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣರ ಜೊತೆ ಸ್ಥಳ ಪರಿಶೀಲನೆ ಮಾಡಿದ್ದೆ. ಜನರ ಅಭಿಪ್ರಾಯ ಸಂಗ್ರಹಿಸಿದ್ದೆವು. ಆಗ ಜನತೆ ಉಸ್ತುವಾರಿ ಸಚಿವರ ಬಳಿಯೇ ತಮ್ಮ ಸಲಹೆ ಸೂಚನೆ ನೀಡಿದ್ದರು ಎಂದು ಸಂಸದ ಪ್ರತಾಪ್ ಸ್ಪಷ್ಟಪಡಿಸಿದ್ದಾರೆ.

ಯಾವುದಾದರೂ ಹೊಸ ಯೋಜನೆಗೆ ಜನಾಭಿಪ್ರಾಯ ಸಂಗ್ರಹಿಸೋದು ನಿಯಮ. ಆದರೆ 35 ವರ್ಷದ ಸಮಸ್ಯೆಗೆ ಜನಾಭಿಪ್ರಾಯ ಸಂಗ್ರಹಿಸೋದು ಬೇಕಾ. ಈ ವಿಚಾರ ಶಾಸಕ, ಮಂತ್ರಿಯಾಗಿದ್ದ ರಾಮದಾಸ್ ಅವರಿಗೆ ಗೊತ್ತಿಲ್ವಾ? ಒಬ್ಬ ಗ್ರಾಮ ಪಂಚಾಯತ್ ಸದಸ್ಯನಿಗೆ ಜನಾಭಿಪ್ರಾಯದ ಬಗ್ಗೆ ಗೊತ್ತಿದೆ ಅಂದರೆ ರಾಮದಾಸ್ ಅವರಿಗೆ ಗೊತ್ತಿಲ್ಲವಾ? ಈ ಯೋಜನೆ ಸ್ವಚ್ಛ ಭಾರತ ಅಭಿಯಾನದ ಭಾಗ. ಈ ಯೋಜನೆಯನ್ನ ಮಾಡಿಯೇ ತಿರುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News