ಜೈಪುರ ಜೈಲಲ್ಲಿ ಕೊರೋನ ತಾಂಡವ: ಹಿರಿಯ ಅಧಿಕಾರಿ ಸಹಿತ 128 ಕೈದಿಗಳಿಗೆ ಸೋಂಕು

Update: 2020-05-17 04:09 GMT

ಜೈಪುರ, ಮೇ 17: ಇಲ್ಲಿನ ಕಾರಾಗೃಹದಲ್ಲಿ ಶನಿವಾರ 128 ಕೈದಿಗಳಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ವರದಿಯಾದ ಒಟ್ಟು 332 ಹೊಸ ಪ್ರಕರಣಗಳ ಪೈಕಿ ಶೇಕಡ 40 ಪ್ರಕರಣಗಳು ಜೈಪುರ ಜೈಲಿನಿಂದ ವರದಿಯಾಗಿವೆ.

24 ಮಂದಿ ಸೋಂಕಿತ ಕೈದಿಗಳನ್ನು ವಯಸ್ಸು ಮತ್ತು ಇತರ ರೋಗಗಳಿರುವ ಕಾರಣದಿಂದ ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ 104 ಮಂದಿಗೆ ಜೈಲಿನ ಆವರಣದಲ್ಲೇ ಚಿಕಿತ್ಸೆ ನಿಡಲಾಗುತ್ತಿದೆ. ಜೈಲಿನ ಹಿರಿಯ ಅಧಿಕಾರಿಯೊಬ್ಬರಿಗೂ ಸೋಂಕು ತಗುಲಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಈ ಜೈಲಿನ ಪಕ್ಕದಲ್ಲೇ ಇರುವ ಜೈಪುರ ಕೇಂದ್ರ ಕಾರಾಗೃಹದಲ್ಲಿ 1,172 ಮಂದಿಯನ್ನು ಪರೀಕ್ಷೆಗೆ ಗುರಿಪಡಿಸಲಾಗಿದ್ದು, ಎಲ್ಲ ಪ್ರಕರಣಗಳು ನೆಗೆಟಿವ್ ಬಂದಿರುವುದು ಆರೋಗ್ಯ ಅಧಿಕಾರಿಗಳಿಗೆ ನೆಮ್ಮದಿ ತಂದಿದೆ.

ಜಿಲ್ಲಾ ಕಾರಾಗೃಹದಲ್ಲಿ ಮೇ 11ರಂದು ಮೊದಲ ಕೋವಿಡ್-19 ಸೋಂಕು ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಎಲ್ಲ ಕೈದಿಗಳು ಹಾಗೂ ಸಿಬ್ಬಂದಿಯನ್ನು ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಜೈಲಿನ ಆವರಣದಲ್ಲೇ ಚಿಕಿತ್ಸಾ ಕೇಂದ್ರ ತೆರೆದಿರುವುದರಿಂದ ಪರಿಸ್ಥಿತಿ ಸುಧಾರಿಸಲಿದೆ ಎಂಬ ವಿಶ್ವಾಸವನ್ನು ಜಿಲ್ಲಾ ಆರೋಗ್ಯಾಧಿಕಾರಿ ನರೋತ್ತಮ ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News