ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಒತ್ತಾಯ: ಸೋಮವಾರ ಸಿಎಂಗೆ ಮನಿ ಆರ್ಡರ್ ಮಾಡಿ ಸಾಂಕೇತಿಕ ಪ್ರತಿಭಟನೆ

Update: 2020-05-17 11:26 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 17: ರಾಜ್ಯದಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ಬಂದ್ ಮಾಡಬೇಕೆಂದು ಒತ್ತಾಯಿಸಿ ಮದ್ಯ ನಿಷೇಧ ಆಂದೋಲನ ಸಮಿತಿ ವತಿಯಿಂದ ಮೇ 18ರಂದು ರಾಜ್ಯಾದ್ಯಂತ ಮಹಿಳೆಯರು ಅಂಚೆ ಕಚೇರಿಯಲ್ಲಿ ಮುಖ್ಯಮಂತ್ರಿಗಳಿಗೆ 10 ರೂ., 20ರೂ. ಮನಿ ಆರ್ಡರ್ ಮಾಡಿ ಸಾಂಕೇತಿಕ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ.

'ಕೋವಿಡ್-19 ಪರಿಣಾಮವಾಗಿ ರಾಜ್ಯಾದ್ಯಂತ ಲಾಕ್‍ಡೌನ್ ಮಾಡಲಾಗಿತ್ತು. ಈ ವೇಳೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಈ ಸಂದರ್ಭದಲ್ಲಿ ಲಕ್ಷಾಂತರ ಮದ್ಯ ವ್ಯಸನಿಗಳು ಮದ್ಯ ಸೇವನೆ ಚಟದಿಂದ ಮುಕ್ತರಾಗಿದ್ದರು, ಇಡೀ ಕುಟುಂಬ ನೆಮ್ಮದಿಯ ಕಡೆಗೆ ಹೋಗುತ್ತಿತ್ತು. ಆದರೆ, ಸರಕಾರ ತನ್ನ ಹಣದಾಸೆಗೆ ಮದ್ಯದಂಗಡಿಗಳನ್ನು ಪ್ರಾರಂಭಿಸಿದ ಮೇಲೆ ಪುನಃ ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಾಗಿ ರಾಜ್ಯಾದ್ಯಂತ ಹಲವು ಅವಾಂತರಕ್ಕೆ ಕಾರಣವಾಗಿದೆ'.

'ಮದ್ಯದಂಗಡಿಗಳು ಪ್ರಾರಂಭವಾದ ಕೆಲವೇ ದಿನಗಳಲ್ಲಿ ಕೊಲೆ, ಸುಲಿಗೆಗಳು ಹೆಚ್ಚಾಗಿವೆ. ಒಂದು ಕಡೆ ಕೊರೋನ ಪರಿಣಾಮವಾಗಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಇದರ ನಡುವೆ ಮದ್ಯದಂಗಡಿಗಳನ್ನು ಪ್ರಾರಂಭಿಸಿರುವುದರಿಂದ ಮನೆಯಲ್ಲಿದ್ದ ದವಸ-ಧಾನ್ಯಗಳನ್ನು ಹಾಗೂ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣದಿಂದ ಕುಡಿಯುವಂತಹ ಪರಿಪಾಠ ಹೆಚ್ಚಾಗಿದೆ'.

ಜೀವನ ನಿರ್ವಹಣೆಗಾಗಿ ಜನಧನ್-ಕಾರ್ಮಿಕ ಕಾರ್ಡ್‍ಗಳಿಗೆ ಜಮೆ ಆದ ಹಣವೆಲ್ಲ ಪುನಃ ಮದ್ಯದಂಗಡಿಯ ಮೂಲಕ ಸರಕಾರಕ್ಕೆ ಸೇರುತ್ತಿದೆ. ಕೊರೋನದಂತಹ ಸಂದರ್ಭದಲ್ಲಿ ಜನರ ಹಿತಾಸಕ್ತಿಗಿಂತ ರಾಜ್ಯ ಸರಕಾರಕ್ಕೆ ಅದರ ಆದಾಯವೇ ಮುಖ್ಯವಾಗಿದೆ. ಸರಕಾರಕ್ಕೆ ಆದಾಯ ಬೇಕಾದರೆ ಬೇರೆ ಮೂಲಗಳಿಂದ ಪಡೆದುಕೊಳ್ಳಲಿ. ಬಡವರ ಬದುಕನ್ನು ನಾಶ ಮಾಡುವಂತಹ ಮದ್ಯದ ಮೂಲಕ ಸರಕಾರ ಹಣ ಗಳಿಸಬಾರದು.

ಮದ್ಯದಂಗಡಿಗಳನ್ನು ಮುಚ್ಚುವ ಮೂಲಕ ಜನರಿಗೆ ಬದುಕಲು ಅವಕಾಶ ಕೊಡಿ ಎಂಬ ಸಂದೇಶವನ್ನು ಸರಕಾರಕ್ಕೆ ಮುಟ್ಟಿಸುವ ಸಲುವಾಗಿ ಮೇ 18ರಂದು ರಾಜ್ಯಾದ್ಯಂತ ಮಹಿಳೆಯರು ತಾವಿರುವ ಕಡೆಗಳಲ್ಲಿರುವ ಅಂಚೆ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳಿಗೆ 10, 20ರೂ. ಮನಿ ಆರ್ಡರ್ ಮಾಡುವ ಮೂಲಕ ಆಂದೋಲನ ನಡೆಸಲು ಮುಂದಾಗಿದ್ದೇವೆಂದು ಮದ್ಯ ನಿಷೇಧ ಆಂದೋಲನದ ರಾಜ್ಯ ಸಂಚಾಲಕಿ ಸ್ವರ್ಣ ಭಟ್ ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News