ಉ.ಪ್ರದೇಶದಲ್ಲಿ ಹಸಿವೆಯಿಂದ ಕುಸಿದು ಬಿದ್ದು ವಲಸೆ ಕಾರ್ಮಿಕನ ಸಾವು: ಆರೋಪ

Update: 2020-05-17 16:21 GMT

ಲಕ್ನೋ,ಮೇ 17: ಮೂರು ದಿನಗಳ ಹಿಂದೆ ತನ್ನ ಕುಟುಂಬದ ಕೆಲವು ಸದಸ್ಯರೊಂದಿಗೆ ಮಹಾರಾಷ್ಟ್ರದಿಂದ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ತನ್ನೂರಿಗೆ ಪ್ರಯಾಣವನ್ನು ಆರಂಭಿಸಿದ್ದ ವಲಸೆ ಕಾರ್ಮಿಕನೋರ್ವ ರವಿವಾರ ಬೆಳಿಗ್ಗೆ ರಾಜ್ಯದ ಕನೌಜ್ ಜಿಲ್ಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದು, ಬಹುಶಃ ಹಸಿವು ಸಾವಿಗೆ ಕಾರಣವಾಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಕ್ರಂ (60) ಪ್ರಯಾಣ ಆರಂಭಿಸಿದ ಬಳಿಕ ಶುಕ್ರವಾರ ಮಾತ್ರ ಸರಿಯಾಗಿ ಊಟವನ್ನು ಮಾಡಿದ್ದ,ಆದರೆ ನಂತರ ಕೆಲವು ಬಿಸ್ಕಿಟ್ ಮತ್ತು ನೀರಿನಲ್ಲಿಯೇ ದಿನಗಳನ್ನು ದೂಡಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಗುರುವಾರ ವಿಕ್ರಂ ಕುಟುಂಬ ಸದಸ್ಯರೊಂದಿಗೆ ಟ್ರಕ್ಕೊಂದರಲ್ಲಿ ಮಹಾರಾಷ್ಟ್ರದಿಂದ ಪ್ರಯಾಣ ಆರಂಭಿಸಿದ್ದು, ರವಿವಾರ ನಸುಕಿನ 3:30 ರ ಸುಮಾರಿಗೆ ಅವರೆಲ್ಲ ಕನೌಜ್ ಜಿಲ್ಲೆಯಲ್ಲಿ ಇಳಿದಿದ್ದರು. ಅಲ್ಲಿಂದ ಕಾಲ್ನಡಿಗೆಯಿಂದ ತಮ್ಮ ಊರಿಗೆ ಪಯಣ ಆರಂಭಿಸಿದ್ದು, ಒಂದು ಕಿ.ಮೀ.ಸಾಗುವಷ್ಟರಲ್ಲೇ ವಿಕ್ರಂ ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಹಸಿವೆಯಿಂದ ಸಾವು ಸಂಭವಿಸಿದೆ ಎಂದು ಪ್ರಾರಂಭಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲುಗಳು ಮತ್ತು ಬಸ್‌ಗಳನ್ನು ಓಡಿಸುತ್ತಿದ್ದರೂ ಆಹಾರ, ಹಣ ಮತ್ತು ಕೆಲಸವಿಲ್ಲದೆ ಅಸಹಾಯಕರಾಗಿರುವ ಈ ಕಾರ್ಮಿಕರ ಸಂಕಷ್ಟಗಳು ಮಾತ್ರ ನಿಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News