ಹಸಿವಿನಿಂದ ಐದು ವರ್ಷದ ಮಗು ಮೃತ್ಯು: ಆರೋಪ

Update: 2020-05-17 16:36 GMT
Photo: twitter/roadscholarz

ಹೊಸದಿಲ್ಲಿ, ಮೇ 17: ಜಾರ್ಖಂಡ್‌ನ ಲತೆಹಾರ್ ಜಿಲ್ಲೆಯ ಹೆಸಾತು ಎಂಬ ಗ್ರಾಮದಲ್ಲಿ ಹಸಿವಿನಿಂದ ಬಳಲಿ ಐದು ವರ್ಷದ ಹೆಣ್ಣು ಮಗುವೊಂದು ಪ್ರಾಣ ಬಿಟ್ಟಿದೆ ಎಂದು ಸಾಮಾಜಿಕ ಕಾರ್ಯಕರ್ತರು ಹೇಳಿದ್ದು ಇದಕ್ಕೆ ಪೂರಕವಾಗಿ ಕೆಲವು ವೀಡಿಯೊ ದಾಖಲೆಗಳನ್ನು ಬಿಡುಗಡೆಗೊಳಿಸಿದ್ದಾರೆ.

ಮಗು ಉಪವಾಸ ಬಿದ್ದು ಹಸಿವಿನಿಂದ ಬಳಲಿ ಸಾವನ್ನಪ್ಪಿದೆ ಎಂದು ಮಗುವಿನ ಕುಟುಂಬದ ಸದಸ್ಯರು, ನೆರೆಹೊರೆಯವರು ಹಾಗೂ ಸಮುದಾಯ ಕಾರ್ಯಕರ್ತರು ಹೇಳಿಕೆ ನೀಡಿದ್ದಾರೆ. ಮಗು ಕಳೆದ ನಾಲ್ಕೈದು ದಿನದಿಂದ ಏನನ್ನೂ ತಿಂದಿಲ್ಲ. ತಿನ್ನಲು ಏನೂ ಸಿಗದಿದ್ದ ಕಾರಣ ಮಗು ಉಪವಾಸವಿತ್ತು ಎಂದು ಮಗುವಿನ ತಾಯಿ ಕಮಲಾವತಿ ಅಸಹಾಯಕತೆ ವ್ಯಕ್ತಪಡಿಸುವ ವೀಡಿಯೊವನ್ನು ಕಾರ್ಯಕರ್ತರು ಬಿಡುಗಡೆಗೊಳಿಸಿದ್ದಾರೆ.

ಆಹಾರದ ಹಕ್ಕು ಅಭಿಯಾನದ ಕಾರ್ಯಕರ್ತ ಮತ್ತು ಅರ್ಥಶಾಸ್ತ್ರಜ್ಞ ಜೇನ್ ಡ್ರೆಝ್ ಹೇಳುವಂತೆ, 10 ಮಂದಿ ಸದಸ್ಯರಿದ್ದ ಮಗುವಿನ ಕುಟುಂಬಕ್ಕೆ ಪಡಿತರ ಚೀಟಿ ಇರಲಿಲ್ಲ. ಪಡಿತರ ಚೀಟಿ ಇಲ್ಲದವರಿಗೂ ಪಡಿತರ ಒದಗಿಸುವ ತುರ್ತು ನಿಧಿಯಲ್ಲಿ ಹಣ ಖಾಲಿಯಾಗಿರುವುದರಿಂದ ಕುಟುಂಬಕ್ಕೆ ಈ ಯೋಜನೆಯಡಿಯೂ ನೆರವು ದೊರೆತಿಲ್ಲ. ಈ ಕುಟುಂಬಕ್ಕೆ ಎರಡನೇ ಕಂತಿನಲ್ಲಿ ತುರ್ತು ನೆರವು ಒದಗಿಸುವಂತೆ ಗ್ರಾಮದ ಮುಖ್ಯಸ್ಥರು ಕ್ಷೇತ್ರಾಭಿವೃದ್ಧಿ ಅಧಿಕಾರಿಗೆ ಬರೆದ ಪತ್ರಕ್ಕೆ ಸ್ಪಂದನೆ ಸಿಕ್ಕಿಲ್ಲ ಎಂದು ವರದಿಯಾಗಿದೆ.

ಮಗುವಿನ ತಾಯಿ ಕಮಲಾವತಿಯ ಜನಧನ ಖಾತೆಗೆ ಒಂದು ಬಾರಿ 500 ರೂ. ಜಮೆಯಾಗಿರುವುದನ್ನು ಬಿಟ್ಟರೆ ಕುಟುಂಬಕ್ಕೆ ಸರಕಾರದಿಂದ ಯಾವುದೇ ನೆರವು ದೊರೆತಿಲ್ಲ . ನೆರೆಹೊರೆಯವರು ಕೆಲವೊಮ್ಮೆ ಕುಟುಂಬದವರಿಗೆ ಆಹಾರ ಒದಗಿಸಿದ್ದಾರೆ. ಆದರೆ ಅವರು ಎಷ್ಟು ದಿನ ನೀಡಬಹುದು ಎಂದು ಅಂಗನವಾಡಿ ಕಾರ್ಯಕರ್ತೆ ಆಶಾ ದೇವಿ ಹೇಳಿದ್ದಾರೆ. ಈ ಹೇಳಿಕೆಯನ್ನೂ ವೀಡಿಯೊದಲ್ಲಿ ದಾಖಲಿಸಲಾಗಿದೆ.

ಆದರೆ ಈ ಘಟನೆಯನ್ನು ಜಿಲ್ಲಾಡಳಿತ ನಿರಾಕರಿಸಿದೆ. ಮಗು ಬೆಳಗ್ಗಿನ ಉಪಾಹಾರ ಸೇವಿಸಿ ಸಮೀಪದ ಕೆರೆಯಲ್ಲಿ ಈಜಲು ತೆರಳಿರುವ ಬಗ್ಗೆ ಮಾಹಿತಿಯಿದೆ. ಮಗು ಉಪಾಹಾರ ಸೇವಿಸಿರುವುವಾಗ ಅದು ಉಪವಾಸದಿಂದ ಮೃತಪಟ್ಟಿದೆ ಎಂದು ಹೇಳಲು ಸಾಧ್ಯವೇ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಮಗು ಕೆರೆಯಲ್ಲಿ ಸ್ನಾನ ಮಾಡಿದ್ದು ನಿಜ. ಆದರೆ ಅದು ಕಳೆದ ನಾಲ್ಕೈದು ದಿನದಿಂದ ಉಪವಾಸ ಇತ್ತು ಎಂದು ನೆರೆಮನೆಯವರು ದೃಢಪಡಿಸಿದ್ದಾರೆ ಎಂದು ಆಶಾದೇವಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News