ಹಾಸನದಲ್ಲಿ ಮತ್ತೆ 6 ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆ

Update: 2020-05-17 17:09 GMT

ಹಾಸನ, ಮೇ.17: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರವಿವಾರ ಒಂದೇ ದಿನ ಆರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸೋಂಕಿತರಲ್ಲರೂ ಮಹಾರಾಷ್ಟ್ರದಿಂದ ವಿವಿಧ ದಿನಗಳಲ್ಲಿ ಜಿಲ್ಲೆಗೆ ಪ್ರಯಾಣ ಮಾಡಿದವರಾಗಿದ್ದು, ಅವರೆಲ್ಲರನ್ನೂ ಗಡಿ ಭಾಗದಲ್ಲಿಗೆ ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗಿತ್ತು. ನಿನ್ನೆ ಪರೀಕ್ಷಾ ವರದಿ ಬಾಕಿ ಇದ್ದ 31 ಜನರಲ್ಲಿ ಆರು ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನುಳಿದ 25 ಮಂದಿಯ ವರದಿಗಾಗಿ ಕಾಯಲಾಗುತ್ತಿದೆ ಎಂದರು.

ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿ ಮಹಾರಾಷ್ಟ್ರದಿಂದ ಹಾಸನಕ್ಕೆ ಬರುತ್ತಿರುವವರಲ್ಲಿ ಸೋಂಕು ಕಂಡು ಬರುತ್ತಿದೆ. ಇಂದು ಪತ್ತೆಯಾದ ಪಾಸಿಟಿವ್ ಪ್ರಕರಣಗಳಲ್ಲಿ ಇಬ್ಬರು ಚನ್ನರಾಯಪಟ್ಟಣದ ಮೂಲದವರು, ಮೂವರು ಆಲೂರು ತಾಲೂಕಿನವರು ಹಾಗೂ ಒಬ್ಬರು ಹೊಳೆನರಸೀಪುರ ತಾಲೂಕಿಗೆ ಸೇರಿದವರಾಗಿದ್ದಾರೆ ಎಂದು ಹೇಳಿದರು.

ಆಲೂರು ತಾಲೂಕಿನಲ್ಲಿ ಗಂಡ, ಹೆಂಡತಿ ಮತ್ತು ಮಗುವಿನಲ್ಲಿ ಸೋಂಕು ಪತ್ತೆಯಾಗಿದ್ದು, ಅವರೆಲ್ಲರೂ ಸ್ವಂತ ಲಾರಿಯಲ್ಲಿ ಜಿಲ್ಲೆಗೆ ಬಂದಿದ್ದರು. ಪುಣೆಯಿಂದ ಟಿಟಿ ವಾಹನದಲ್ಲಿ ಬಂದಿದ್ದ 15 ಮಂದಿಯಲ್ಲಿ ತುಮಕೂರಿಗೆ ಸೇರಿದವರು 10 ಜನ ಮತ್ತು ಚನ್ನರಾಯಪಟ್ಟಣಕ್ಕೆ ಸೇರಿದ 5 ಜನರಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಮುಂಬೈನಿಂದ ಬಂದಿರುವ 13 ಮಂದಿಯಲ್ಲಿ ಒಬ್ಬರಿಗೆ ಪಾಸಿಟಿವ್ ಪತ್ತೆಯಾಗಿದೆ ಮತ್ತು ಹೊಳೆನರಸೀಪುರದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದ್ದಾರೆ.

ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿಗೆ ಅಗಮಿಸಿದವರಲ್ಲಿ ಹೆಚ್ಚು ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದೆ, ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 26 ಪ್ರಕರಣಗಳು ದಾಖಲಾಗಿವೆ. ಎಲ್ಲಾ ಸೋಂಕಿತರನ್ನು ಹಾಸನದ ಕೋವಿದ್-19 ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಶಂಕಿತರನ್ನು ಆಯಾಯ ತಾಲೂಕಿನ  ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಎಲ್ಲರೂ ನೇರವಾಗಿ ಆಸ್ಪತ್ರೆ ಕ್ವಾರಂಟೈನ್ ಕೇಂದ್ರಗಳಿಗೆ ಬಂದಿದ್ದರಿಂದ ಜಿಲ್ಲೆಯಲ್ಲಿ ಸೋಂಕು ಹರಡಿರುವ ಯಾವುದೇ ಆತಂಕವಿಲ್ಲ ಎಂದು ಜಿಲ್ಲಾಧಿಕಾರಿ ಅರ್ ಗಿರೀಶ್ ತಿಳಿಸಿದ್ದಾರೆ.

ಹಾಸನದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಮ್ಮ ಸ್ವಸ್ಥಾನಕ್ಕೆ ಹೋಗಲು ಇಚ್ಚಿಸುತ್ತಿದ್ದು ಅವರನ್ನು ಬಿಹಾರದ ಕತ್ತಿಹಾರ ಎಂಬ ಪ್ರದೇಶಕ್ಕೆ ಸಂಜೆ 5 ಗಂಟೆಗೆ ರೈಲಿನ ಮೂಲಕ ಕಳುಹಿಸಲಾಗುತ್ತಿದೆ. ಅವರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News