ಚಿಕ್ಕಮಗಳೂರು: ಅತಿವೃಷ್ಟಿಯಿಂದ ನೆಲಸಮಗೊಂಡ ಮನೆಗಳು; ಸಂತ್ರಸ್ತರಿಗೆ ಈವರೆಗೂ ಸಿಗದ ಬಾಡಿಗೆ ಮನೆ ಪರಿಹಾರಧನ

Update: 2020-05-17 17:33 GMT

ಚಿಕ್ಕಮಗಳೂರು, ಮೇ 17: ಕಳೆದ 2019ರ ಆಗಸ್ಟ್ ನಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಣಾಮ ನೂರಾರು ಮನೆಗಳ ನೆಲಸಮಗೊಂಡಿದ್ದು, ಸಾವಿರಾರ ಮಂದಿ ನಿರಾಶ್ರಿತರಾಗಿದ್ದರು. ಹೀಗೆ ವಾಸದ ಮನೆಗಳನ್ನು ಕಳೆದುಕೊಂಡು ಅತಂತ್ರರಾಗಿದ್ದ ಕುಟುಂಬಗಳಿಗೆ ರಾಜ್ಯ ಸರಕಾರ ಹೊಸ ಮನೆಗಳ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಲ್ಲದೇ ಹೊಸ ಮನೆ ನಿರ್ಮಾಣ ಆಗುವವರೆಗೂ ಸಂತ್ರಸ್ತ ಕುಟುಂಬಗಳು ಬಾಡಿಗೆ ಮನೆಗಳಲ್ಲಿರಲು ತಿಂಗಳಿಗೆ 5 ಸಾವಿರ ರೂ. ನಂತೆ ಒಟ್ಟು 50 ಸಾವಿರ ರೂ. ನೀಡುವುದಾಗಿ ಘೋಷಿಸಿದೆ. ಆದರೆ ಕಳಸ ಹೋಬಳಿ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಸರಕಾರ ಇದುವರೆಗೂ ಬಾಡಿಗೆ ಹಣ ನೀಡದಿರುವುದು ಬೆಳಕಿಗೆ ಬಂದಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಜಿಲ್ಲೆಯಾದ್ಯಂತ ನೂರಾರು ಕುಟುಂಬಗಳ ಮನೆಗಳು ನೆಲಸಮಗೊಂಡಿದ್ದವು. ಈ ಪೈಕಿ ಮಲೆನಾಡು ಭಾಗದಲ್ಲಿ 300ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶಗೊಂಡಿದ್ದವು. ಹೀಗೆ ಸಂಪೂರ್ಣವಾಗಿ ನೆಲಸಮಗೊಂಡಿದ್ದ ಮನೆಗಳ ಮಾಲಕರಿಗೆ ಹೊಸ ಮನೆಗಳ ನಿರ್ಮಾಣಕ್ಕೆ ರಾಜ್ಯ ಸರಕಾರ ಈಗಾಗಲೇ 5 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಮನೆಗಳನ್ನು ನಿರ್ಮಿಸಿಕೊಳ್ಳಲು ಮುಂದಾದ ಕುಟುಂಬಗಳಿಗೆ ಈಗಾಗಲೇ ಮೊದಲ ಕಂತಿನ ರೂಪದಲ್ಲಿ 1 ಲಕ್ಷ ರೂ. ಪರಿಹಾರವನ್ನು ಜಿಲ್ಲಾಡಳಿತದ ಮೂಲಕ ಸಂತ್ರಸ್ತರ ಕುಟುಂಬಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. 

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ನೆಲಸಮಗೊಂಡ ಕೆಲ ಮನೆಗಳ ನಿರ್ಮಾಣ ಕೆಲಸ ಆರಂಭವಾಗಿದ್ದರೆ, ಉಳಿದ ಮನೆಗಳ ನಿರ್ಮಾಣಕ್ಕೆ ಸೂಕ್ತ ನಿವೇಶನ ಕೊರತೆಯಿಂದಾಗಿ ಮನೆಗಳ ನಿರ್ಮಾಣ ಕೆಲಸ ನೆನೆಗುದಿಗೆ ಬಿದ್ದಿದೆ. ಇನ್ನು ಕೆಲ ಮನೆಗಳನ್ನು ಜಿಲ್ಲಾಡಳಿತ ಸಂತ್ರಸ್ತರಿಗಾಗಿ ಗುರುತಿಸಿರುವ ನಿವೇಶನಗಳಲ್ಲೇ ನಿರ್ಮಾಣ ಮಾಡಬೇಕಿದ್ದು, ಇದಕ್ಕಾಗಿ ಕೆಲವೆಡೆ ಜಾಗಗಳನ್ನು ಗುರುತಿಸಲಾಗಿದೆಯಾದರೂ ನಿವೇಶನ ಹಂಚಿಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.

ನೆಲಸಮಗೊಂಡ ಮನೆಗಳ ಕುಟುಂಬಗಳು ಮನೆ ನಿರ್ಮಾಣವಾಗುವವರೆಗೆ ಬಾಡಿಗೆ ಮನೆಗಳಲ್ಲಿ ವಾಸಿಸಲು ರಾಜ್ಯ ಸರಕಾರ ಪ್ರತೀ ತಿಂಗಳಿಗೆ ತಲಾ 5 ಸಾವಿರ ರೂ. ನಂತೆ 10 ತಿಂಗಳಿಗೆ 50 ಸಾವಿರ ರೂ. ನೀಡುವುದಾಗಿ ಈ ಹಿಂದೆಯೇ ಘೋಷಣೆ ಮಾಡಿದೆ. ವಿಪರ್ಯಾಸ ಎಂದರೆ ಮನೆಗಳನ್ನು ಕಳೆದುಕೊಂಡ ಎಷ್ಟೋ ಕುಟುಂಬಗಳಿಗೆ ಈ ಬಾಡಿಗೆ ಪರಿಹಾರ ಧನದ ಪೈಕಿ ನಯಾ ಪೈಸೆಯನ್ನೂ ಜಿಲ್ಲಾಡಳಿತ ನೀಡಿಲ್ಲ ಎಂದು ಸಂತ್ರಸ್ತ ಕುಟುಂಬಗಳು ಆರೋಪಿಸುತ್ತಿವೆ.

ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯಲ್ಲಿರುವ ಚೆನ್ನಡ್ಲು, ಮರಸಣಿಗೆ ಗ್ರಾಮಗಳಲ್ಲಿ ಸುಮಾರು 27 ಕುಟುಂಬಗಳಿಗೆ ಸೇರಿದ್ದ ಮನೆಗಳು ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ನೆಲಸಮಗೊಂಡಿದ್ದವು. ಅತಿವೃಷ್ಟಿಯಿಂದಾಗಿ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಭೂ ಕುಸಿತಗಳು ಸಂಭವಿಸಿ ಸಂಪರ್ಕ ರಸ್ತೆಗಳೇ ಇಲ್ಲದಂತಾಗಿದ್ದವು. ಈ ಗ್ರಾಮಗಳಲ್ಲಿ ಸಿಲುಕೊಂಡಿದ್ದ ಜನರನ್ನು ಅರೆಸೇನಾ ಪಡೆಯ ಯೋಧರು ರಕ್ಷಣೆ ಮಾಡಿ ನಿರಾಶ್ರಿತರ ಕೇಂದ್ರಗಳಿಗೆ ತಲುಪಿಸಿದ್ದರು.

ಮರಸಣಿಗೆ, ಚೆನ್ನಡ್ಲು ಗ್ರಾಮದ 27 ಕುಟುಂಬಗಳಿಗೆ ಸೇರಿದ್ದ ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಎಲ್ಲ ಕುಟುಂಬಗಳಿಗೂ ಹೊಸ ಮನೆಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಮನೆಗಳ ನಿರ್ಮಾಣಕ್ಕೆಂದು ತಲಾ 1 ಲಕ್ಷ ರೂ. ಅನ್ನು ಬಿಡುಗಡೆ ಮಾಡಿದೆ. ಆದರೆ ಈ ಕುಟುಂಬಗಳ ಪೈಕಿ ಚೆನ್ನಡ್ಲು, ಮರಸಣಿಗೆ ಗ್ರಾಮಗಳಲ್ಲಿ ಮನೆಗಳ ನಿರ್ಮಾಣಕ್ಕೆ ಜಾಗ ಯೋಗ್ಯವಾಗಿಲ್ಲ ಎಂದು ಜಿಲ್ಲಾಡಳಿತವೇ ಸರಕಾರಕ್ಕೆ ವರದಿ ನೀಡಿದ್ದು, ಅದರಂತೆ ಅಲ್ಲಿನ ಕುಟುಂಬಗಳನ್ನು ಬೇರೆಡೆ ಸ್ಥಳಂತರ ಮಾಡಬೇಕಿದೆ. ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ಜಿಲ್ಲಾಡಳಿತ ಕಳಸ ಹೋಬಳಿ ವ್ಯಾಪ್ತಿಯ ಕುಂಬಳಡಿಕೆ ಎಂಬಲ್ಲಿ ಜಾಗ ಗುರುತಿಸಿದೆಯಾದರೂ ಈ ಜಾಗದ ವಿವಾದ ಇನ್ನೂ ಬಗೆಹರಿಯದ ಪರಿಣಾಮ ಸಂತ್ರಸ್ತರು ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಚೆನ್ನಡ್ಲು, ಮರಸಣಿಗೆ ಗ್ರಾಮಗಳಲ್ಲಿ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಜಿಲ್ಲಾಡಳಿತ ಇನ್ನೂ ನಿವೇಶನ ಹಂಚಿಕೆ ಮಾಡದಿರುವುದರಿಂದ ಈ ಕುಟುಂಬಗಳು ಸರಕಾರ ನೀಡುವ ಬಾಡಿಗೆ ಹಣವನ್ನು ನಂಬಿಕೊಂಡು ಕಳಸ, ಹಿರೇಬೈಲು ಸೇರಿದಂತೆ ವಿವಿಧೆಡೆ ಬಾಡಿಗೆ ಮನೆಗಳಲ್ಲಿ ವಾಸಮಾಡುತ್ತಿವೆ, ಆದರೆ ಅತಿವೃಷ್ಟಿ ಸಂಭವಿಸಿ 9 ತಿಂಗಳಾದರೂ ಈ ಗ್ರಾಮಗಳಲ್ಲಿನ 27 ಅತಿವೃಷ್ಟಿ ಸಂತ್ರಸ್ತ ಕುಟುಂಬಗಳಿಗೆ ಸರಕಾರ ಘೋಷಿಸಿದ್ದ ಬಾಡಿಗೆ ಮನೆ ಪರಿಹಾರ ಧನವನ್ನು ಜಿಲ್ಲಾಡಳಿತ ಇನ್ನೂ ನೀಡಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಜಿಲ್ಲಾಡಳಿತ ಮನೆಗಳ ನಿರ್ಮಾಣಕ್ಕೆ ಬೇರೆ ಜಾಗ ನೀಡುವುದಾಗಿ ಹೇಳಿದೆಯಾದರೂ ಇನ್ನೂ ನಿವೇಶನ ಹಂಚಿಕೆ ಮಾಡಿಲ್ಲ. ನಿವೇಶನ ನೀಡದಿರುವುದರಿಂದ ಮನೆಗಳ ನಿರ್ಮಾಣ ಕೆಲಸವನ್ನೂ ಮಾಡಲಾಗುತ್ತಿಲ್ಲ. ಜಿಲ್ಲಾಡಳಿತ ಮನೆ ನಿರ್ಮಾಣಕ್ಕೆಂದು ನೀಡಿದ್ದ ಹಣವನ್ನು ಬಾಡಿಗೆ ಕಟ್ಟಲು ಬಳಸಿದ್ದೇವೆ. ಬಾಡಿಗೆ ಮನೆಗಳಲ್ಲಿ ವಾಸ ಇರಲು ಪರಿಹಾರಧನವನ್ನು ನೀಡುತ್ತೇವೆಂದು ಹೇಳಿದ್ದ ಜಿಲ್ಲಾಡಳಿತ ಚೆನ್ನಡ್ಲು, ಮರಸಣಿಗೆ ಗ್ರಾಮಗಳ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ನಾಶವಾಗಿರುವ ಮನೆಗಳ ಮಾಲಕರಿಗೆ ಇದುವರೆಗೂ ಬಾಡಿಗೆ ಪರಿಹಾರವನ್ನು ಬಿಡುಗಡೆ ಮಾಡಿಲ್ಲ. ಆದರೆ ಸುಂಕಸಾಲೆ ಮತ್ತಿತರ ಕಡೆಗಳಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಬಾಡಿಗೆ ಪರಿಹಾವನ್ನು ನೀಡಲಾಗಿದೆ. ಜಿಲ್ಲಾಡಳಿತ ನಮಗೆ ಮನೆ ಕಟ್ಟಿಕೊಳ್ಳಲು ನಿವೇಶನಗಳನ್ನೂ ನೀಡದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಬಾಡಿಗೆ ಮನೆಗಳಲ್ಲಿರುವ ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ ಧನವನ್ನೂ ನೀಡಿಲ್ಲ. ಈ ತಾರತಮ್ಯ ಏಕೆಂದು ತಿಳಿಯುತ್ತಿಲ್ಲ ಎಂದು ಚೆನ್ನಡ್ಲು ಗ್ರಾಮದ ಅತಿವೃಷ್ಟಿ ಸಂತ್ರಸ್ತ ಮುನಿಕೃಷ್ಣ ವಾರ್ತಾಭಾರತಿಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಅಧಿಕಾರಿಗಳನ್ನು ವಿಚಾರಿಸಿದರೆ ನಾಳೆ, ನಾಡಿದ್ದು ಬರುತ್ತೆ ಎನ್ನುತ್ತಿದ್ದಾರೆಯೇ ಹೊರತು ಇದುವರೆಗೂ ಬಾಡಿಗೆ ಪರಿಹಾರಧನವನ್ನು ಬಿಡುಗಡೆ ಮಾಡಿಲ್ಲ. ಕಳೆದ 9 ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಸಾಲ ಮಾಡಿ ಬಾಡಿಗೆ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಾಯುವುದಿಲ್ಲ. ಜಿಲ್ಲಾಡಳಿತ ಚೆನ್ನಡ್ಲು, ಮರಸಣಿಗೆ ಗ್ರಾಮಗಳ ಕುಟುಂಬಗಳಿಗೆ ಕೂಡಲೇ ಬಾಡಿಗೆ ಪರಿಹಾರಧನ ನೀಡಬೇಕು. ತಪ್ಪಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಆರಂಭಿಸುತ್ತೇವೆಂದು ಇದೇ ವೇಳೆ ಮುನಿಕೃಷ್ಣ ಎಚ್ಚರಿಕೆಯನ್ನೂ ನೀಡಿದ್ದಾರೆ.

ಕಳೆದ ಬಾರಿ ಮೂಡಿಗೆರೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ನೂರಾರು ಮನೆಗಳು ನೆಲಸಮಗೊಂಡಿವೆ. ಈ ಪೈಕಿ ಚೆನ್ನಡ್ಲು ಗ್ರಾಮದಲ್ಲಿ ಸಂತೋಷ್ ಎಂಬವರ ಮೇಲೆಯೇ ಮನೆ ಕುಸಿದ ಪರಿಣಾಮ ಅವರು ಮಣ್ಣಿನಡಿ ಹೂತು ಹೋಗಿದ್ದರು. ವಾರ ಕಳೆದ ನಂತರ ಅವರ ಶವ ಸಿಕ್ಕಿತ್ತು, ಸಂತೋಷ್ ಅವರ ತಾಯಿ ಹೆಸರಿಗೆ ಜಿಲ್ಲಾಡಳಿತ ಹೊಸ ಮನೆ ಮಂಜೂರು ಮಾಡಿದೆ. ಆದರೆ ಜಿಲ್ಲಾಡಳಿತ ಬೇರೆಡೆ ಜಾಗ ನೀಡದಿರುವುದರಿಂದ ಮನೆ ನಿರ್ಮಾಣ ಸಾಧ್ಯವಾಗಿಲ್ಲ. ಚೆನ್ನಡ್ಲು ಗ್ರಾಮದಲ್ಲಿದ್ದ ನನ್ನ ಮನೆಯೂ ನಾಶವಾಗಿದ್ದು, ಮರಸಣಿಗೆ ಗ್ರಾಮದಲ್ಲಿ ಒಟ್ಟು 27 ಕುಟುಂಬಗಳ ಮನೆಗಳು ನಾಶವಾಗಿವೆ. ನನಗೂ ಸೇರಿದಂತೆ ಎಲ್ಲ ಕುಟುಂಬಗಳಿಗೆ ಬೇರೆಡೆ ಮನೆ ಮಂಜೂರಾಗಿದ್ದರೂ ನಿವೇಶನ ಹಂಚಿಕೆ ಮಾಡದ ಪರಿಣಾಮ ಬಾಡಿಗೆ ಮನೆಗಳಲ್ಲಿ ವಾಸಿಸುವಂತಾಗಿದೆ. ಆದರೆ ಜಿಲ್ಲಡಳಿತ ಬಾಡಿಗೆ ಹಣವನ್ನೂ ನೀಡಿಲ್ಲ. ಕುಂಬಳಡಿಕೆ ಗ್ರಾಮದಲ್ಲಿ ಅತಿವೃಷ್ಟಿ ಸಂತ್ರಸ್ತರಿಗೆ ನಿವೇಶನ ನೀಡಲು ಜಾಗ ಗುರುತು ಮಾಡಲಾಗಿದೆಯಾದರೂ ಈ ಜಾಗ ಗುಡ್ಡದ ಇಳಿಜಾರಿನಲ್ಲಿದೆ. ಅಲ್ಲಿ ಮನೆಗಳನ್ನು ನಿರ್ಮಿಸಿಕೊಂಡರೆ ಭೂ ಕುಸಿತದಿಂದಾಗಿ ಮತ್ತೆ ಮನೆಗಳು ನೆಲಸಮವಾಗುತ್ತವೆ. ಜಿಲ್ಲಾಡಳಿತ ಈ ಜಾಗ ಕೈಬಿಟ್ಟು ಸಂತ್ರಸ್ತರಿಗೆ ಶೀಘ್ರ ಬೇರೆ ಸಮತಟ್ಟು ಜಾಗದಲ್ಲಿ ನಿವೇಶನ ಹಂಚಿಕೆ ಮಾಡಬೇಕು.
- ಮುನಿಕೃಷ್ಣ, ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಸಂತ್ರಸ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News