ಕಾರವಾರ: ಕ್ವಾರಂಟೈನ್ ನಲ್ಲಿದ್ದವರನ್ನು ಸ್ಥಳಾಂತರ ಮಾಡಲು ಒತ್ತಾಯಿಸಿ ಸ್ಥಳೀಯರಿಂದ ಹಠಾತ್ ಪ್ರತಿಭಟನೆ

Update: 2020-05-17 17:30 GMT

ಕಾರವಾರ, ಮೇ.17: ಜನರ ಸುರಕ್ಷತೆ ಬಗ್ಗೆ ಚಿಂತೆ ಮಾಡದೆ ಕ್ವಾರಂಟೈನ್ ಆಗಿದ್ದವರು ಹೊರಗೆ ಬಂದು ಸುತ್ತಾಡುತ್ತಿದ್ದಾರೆ. ಇದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು ಶಂಕಿತರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂದು ಜನರು ಹಠಾತ್ ಪ್ರತಿಭಟನೆ ಮಾಡಿದರು.  

ತಾಲೂಕಿನ ಬಾಡ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯದಲ್ಲಿ ಹೊರ ರಾಜ್ಯದಿಂದ ಹಾಗೂ ಬೇರೆ ಜಿಲ್ಲೆಯಿಂದ ಬಂದ 22 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಆದರೆ ಈ ಪ್ರದೇಶ ಜನ ವಸತಿಯ ಸ್ಥಳವಾಗಿದೆ. ಶಂಕಿತರು ಹೊರಗಡೆ ಬಂದು ಸುತ್ತಾಡುತ್ತಿದ್ದದನ್ನು ಸ್ಥಳೀಯ ಜನರು ಗಮನಿಸಿದ್ದಾರೆ. ಕೂಡಲೇ ಇಲ್ಲಿ ಇದ್ದ ಜನರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು, ಇಲ್ಲಿನ ಯಾವುದೇ ಸುರಕ್ಷತೆಯಿಲ್ಲ, ಇಲ್ಲವಾದರೆ ವಸತಿ ನಿಲಯ ಪ್ರದೇಶದಲ್ಲಿ 24 ತಾಸು ಪೊಲೀಸ್ ಸಿಬ್ಬಂದಿಗಳಿಗೆ ಕಾವಲು ಹಾಕಬೇಕು ಎಂದು ಸ್ಥಳೀಯ ಜನರು ಆಗ್ರಹಿಸಿದರು.

ಆ ಬಳಿಕ ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪ್ರಮೀಣ ಪಾಟೀಲ್ ಅವರು, ಸ್ಥಳೀಯ ಜನರನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯದಲ್ಲಿ ಇದ್ದ ಜನರ ಕ್ವಾರಂಟೈನ್ ಅವಧಿ ಮುಕ್ತಾಯಗೊಳ್ಳುತ್ತಿದೆ. ಯಾರು ಆತಂಕ ಪಡುವ ಅವಶ್ಯಕತೆಯಿಲ್ಲ, ಎಲ್ಲರೂ ಆರೋಗ್ಯವಾಗಿದ್ದಾರೆ. ಅಗತ್ಯವಿದ್ದರೆ ಅವರ ಗಂಟಲ ದ್ರವ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದ್ದು ಇನ್ನು ಮುಂದೆ ಕ್ವಾರಂಟೈನ್ ನಲ್ಲಿ ಇದ್ದ ಜನರು ವಸತಿ ನಿಲಯದಿಂದ ಹೊರ ಬರದಂತೆ ನೋಡಿಕೊಳ್ಳಲಾಗುವುದು ಹಾಗೂ ವಸತಿ ನಿಲಯದ ಸುತ್ತಮುತ್ತ 24 ತಾಸು ಪೊಲೀಸ್ ಸಿಬ್ಬಂದಿಗೆ ಕಾವಲು ಹಾಕಲಾಗುವುದು. ಕ್ವಾರಂಟೈನ್ ನಲ್ಲಿ ಇದ್ದ ಜನರನ್ನು ಹೊರಗೆ ಬರದಂತೆ ಕ್ರಮಕೈಗೊಳ್ಳಲಾಗುವುದು ಎಂದರು.  

ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಾರವಾರ ತಹಸೀಲ್ದಾರ್ ಆರ್.ವಿ.ಕಟ್ಟಿ, ಸಿಪಿಐ ಸಂತೋಷ ಕುಮಾರ್ ಶೆಟ್ಟಿ, ಪಿಎಸೈ ಸಂತೋಷ ಕುಮಾರ್ ಎಮ್, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಸೇರಿದಂತೆ ಸ್ಥಳೀಯ ಜನರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News