ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಬಿಜೆಪಿ ಶಾಸಕ ವೀರಣ್ಣ ವಿರೋಧ

Update: 2020-05-19 14:14 GMT

ಬಾಗಲಕೋಟೆ, ಮೇ 19: ವಿವಾದಿತ ಎಪಿಎಂಸಿ ತಿದ್ದುಪಡಿ ಕಾಯ್ದೆ 2020 ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದಕ್ಕೆ ಬಾಗಲಕೋಟೆಯ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ವಿರೋಧ ವ್ಯಕ್ತಪಡಿಸಿದ್ದಾರೆ.

ಕಾಯ್ದೆ ಜಾರಿ ವೇಳೆ ಮತ ಹಾಕುವಾಗ ವಿಪ್ ಜಾರಿ ಮಾಡಲಾಗುತ್ತದೆ. ಆಗ ಸರಕಾರದ ಪರ ನಾನು ಮತ ಹಾಕಲೇಬೇಕು. ಅದು ಬೇರೆ ವಿಷಯ. ಪಕ್ಷದಲ್ಲಿದ್ದೇನೆ ಎಂದ ಮಾತ್ರಕ್ಕೆ ಎಲ್ಲವನ್ನೂ ಒಪ್ಪಬೇಕಂತ ಏನಿಲ್ಲ. ನಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಸಂಬಂಧ ಈಗಾಗಲೇ ದೂರವಾಣಿ ಮೂಲಕ ಸಚಿವ ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಈಶ್ವರಪ್ಪ ಜತೆ ಮಾತನಾಡಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಕಾಯ್ದೆ ತಿದ್ದುಪಡಿಯಿಂದ ರೈತರಿಗಾಗುವ ಅನಾನುಕೂಲಗಳ ಬಗ್ಗೆ ತಿಳಿ ಹೇಳುತ್ತೇನೆ. ಸುಗ್ರೀವಾಜ್ಞೆಯಾಗಿದ್ದರೂ ಮಸೂದೆ ಬಗ್ಗೆ ಚರ್ಚೆ ನಡೆದಾಗ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಹೊಸ ಕಾಯ್ದೆಯಿಂದ ಏನಾಗುತ್ತದೆ ಅಂದರೆ ಈಗಾಗಲೇ ಅನೇಕರು ಹಳ್ಳಿಗಳಿಗೆ ಹೋಗಿ ದಾಸ್ತಾನು ಖರೀದಿ ಮಾಡುತ್ತಾರೆ. ರೈತರು ಮುಗ್ದರು, ಹೆಚ್ಚಿನ ಬೆಲೆ ಕೊಡುತ್ತೇವೆ ಎಂದಾಗ ದಾಸ್ತಾನು ಕೊಡುತ್ತಾರೆ. ಒಂದೆರಡು ಸಲ ಬೆಲೆ ಕೊಟ್ಟು ಮೂರನೇ ಸಲ ದುಡ್ಡು ಕೊಡದೇ ಪರಾರಿ ಆಗಬಹುದು. ಆದರೆ, ಎಪಿಎಂಸಿಯಲ್ಲಿ ಈ ರೀತಿ ಮೋಸ ಮಾಡಲು ಆಗಲ್ಲ. ರೈತರಿಗೆ ಪಟ್ಟಿ ಕೊಡುತ್ತಾರೆ. ಸರಕಾರಕ್ಕೆ ಭರಿಸಬೇಕಾದ ಜಿಎಸ್‍ಟಿ ವಂಚಿಸಲಾಗಲ್ಲ. ರೈತರು ಹಾಗೂ ಎಪಿಎಂಸಿಯ ಹಿತದೃಷ್ಟಿಯಿಂದ ಹಾಲಿಯಿರುವ ಪದ್ಧತಿಯನ್ನು ಮುಂದುವರಿಸಬೇಕು ಎಂದು ವೀರಣ್ಣ ಚರಂತಿಮಠ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News