ಪಂಚಾಯತ್ ಚುನಾವಣೆಗಳು ಮುಂದೂಡದಂತೆ ಚು.ಆಯೋಗಕ್ಕೆ ಎಚ್.ಕೆ.ಪಾಟೀಲ್ ಪತ್ರ

Update: 2020-05-19 15:53 GMT

ಬೆಂಗಳೂರು, ಮೇ 19: ರಾಜ್ಯದಲ್ಲಿ ಪಂಚಾಯತ್ ಗಳ ಪುನರ್ ವಿಂಗಡಣೆಯಾಗಿ 5-6 ವರ್ಷವಾಗಿದೆ. ಪುನರ್ ವಿಂಗಡಣೆ ನಂತರ ಪಂಚಾಯತ್ ಗಳ ಸಂಖ್ಯೆ 5,628 ರಿಂದ 6,041ಕ್ಕೆ ಏರಿದೆ. ಈ ಎಲ್ಲಾ ಪಂಚಾಯತ್ ಗಳಿಗೆ 2015ರಲ್ಲಿ ಚುನಾವಣಾ ಸುಧಾರಣೆಗಳ ಹೊಸ ಕಾನೂನಿನ ಮೂಲಕ ಮೊದಲನೆ ಸಾರ್ವತ್ರಿಕ ಚುನಾವಣೆ ನಡೆದಿದೆ. ಈಗ 2ನೇ ಸಾರ್ವತ್ರಿಕ ಚುನಾವಣೆಯಾಗಬೇಕಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಈ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಕಡ್ಡಾಯ ಮತದಾನ, ನೋಟಾ, ಚುನಾವಣೆಯಲ್ಲಿ ಸಾರಾಯಿ ನಿರ್ಬಂಧದಂತಹ ಗಂಭೀರ ಹೆಜ್ಜೆ ಇತ್ಯಾದಿಗಳ ಮೂಲಕ ಚುನಾವಣೆಯನ್ನು ಅರ್ಥಪೂರ್ಣಗೊಳಿಸುವ ಕಾನೂನನ್ನು ಜಾರಿಗೊಳಿಸಲಾಗಿದೆ. 2020ರ ಜೂನ್-ಜುಲೈನಲ್ಲಿ ಮತ್ತೆ ಹೊಸ ಸದಸ್ಯರ ಆಯ್ಕೆ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಸಾರ್ವತ್ರಿಕ ಚುನಾವಣೆ ನಂತರ ಜೂನ್‍ನಲ್ಲಿ 2,400, ಜುಲೈನಲ್ಲಿ 3,500 ಹೀಗೆ ಪಂಚಾಯತ್ ಗಳ ಚುನಾಯಿತ ಸದಸ್ಯರ ಪ್ರಥಮ ಸಭೆ ತಾರೀಕನ್ನು ಗಮನಿಸಿ ಪಂಚಾಯತ್ ನ ಅವಧಿ ಪೂರ್ಣಗೊಂಡು ಚುನಾವಣೆ ನಡೆಸಬೇಕು. ಕೊರೋನ ವೈರಸ್ಸಿನ ಹಾವಳಿಯಿಂದಾಗಿ ವಿಶ್ವವೇ ತತ್ತರಿಸಿದೆ. ಈ ಸಂಕಷ್ಟದ ಕಾಲದಲ್ಲಿ ಚುನಾವಣೆಗಳು ನಡೆಯಬೇಕಿದೆ. ಈ ಸಂದರ್ಭದಲ್ಲಿ ಸರಕಾರ ಪಂಚಾಯತ್ ಚುನಾವಣೆಗಳನ್ನು ಮುಂದೂಡಬೇಕು ಎಂದು  ಚುನಾವಣಾ ಆಯೋಗಕ್ಕೆ ವಿನಂತಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಪಂಚಾಯತ್ ರಾಜ್ ಕಾನೂನಿನಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿ ಮೀಸಲಾತಿ ಕುರಿತಂತೆ ಇದ್ದ ಅವಧಿಯನ್ನು ಬದಲಾಯಿಸಿ ತಿದ್ದುಪಡಿಯನ್ನು ಮಾಡಿದ್ದಾರೆ. ಮೀಸಲಾತಿ ಅವಧಿ ಬದಲಾಯಿಸಿರುವುದರಿಂದ ಹೊಸ ಮ್ಯಾಟ್ರಿಕ್ಸ್ ಮಾಡಬೇಕಾಗಿದೆ. ಈ ದಿಸೆಯಲ್ಲಿ ನಡೆಯಬೇಕಿದ್ದ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಚುನಾವಣೆ ಮುಂದೂಡಿಕೆ ಆಯಿತು ಎಂದು ಸರಕಾರ ಭಾವಿಸಿಕೊಂಡಿದೆ ಎಂದು ಎಚ್.ಕೆ.ಪಾಟೀಲ್ ಟೀಕಿಸಿದ್ದಾರೆ.

ಸಂವಿಧಾನದ 73ನೇ ತಿದ್ದುಪಡಿಯ ಆಶಯಗಳು, ರಾಜ್ಯ ಪಂಚಾಯತ್ ಅಧಿನಿಯಮಗಳು ಪಕ್ಷಮುಕ್ತ ಗ್ರಾಮ ಪಂಚಾಯತ್ ಗಳಿಗೆ ಸದಾವಕಾಲ ಚುನಾಯಿತ ಸದಸ್ಯರು ಇರಬೇಕು ಎನ್ನುವ ತೀರ್ಮಾನ ಹೊಂದಿವೆ. ಈ ಹಿನ್ನೆಲೆಯಲ್ಲಿ ರಾಜಕೀಯವಾಗಿ ಈ ಸಂಸ್ಥೆಗಳು ದುರ್ಬಳಕೆ ಆಗದಂತೆ ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು ಎಂದು ಅವರು ಕೋರಿದ್ದಾರೆ.

ಚುನಾವಣೆಗಳನ್ನು ಮುಂದೂಡಿ ಪಂಚಾಯತ್ ಗಳಿಗೆ ಆಡಳಿತಗಾರರನ್ನು ಅಥವಾ ಆಡಳಿತ ಸಮಿತಿ ನೇಮಿಸಬೇಕೆ? ಸದಸ್ಯರನ್ನು ನಾಮನಿರ್ದೇಶನ ಮಾಡಬೇಕೆ? ಅಥವಾ ಇದ್ದ ಚುನಾಯಿತ ಸದಸ್ಯರನ್ನು 3 ಅಥವಾ 6 ತಿಂಗಳು ಮುಂದುವರೆಸಬೇಕೆ? ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿದೆ. ಆ ದಿಸೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ವರದಿ ತಯಾರಿಸಿ ಕಾನೂನಿನಲ್ಲಿರದ ನಾಮಕರಣ ಅವಕಾಶ ಹೇಗೆ ಪಡೆದುಕೊಳ್ಳಬೇಕು ಎನ್ನುವ ಕುರಿತು ಗಂಭೀರ ಪ್ರಯತ್ನದಲ್ಲಿ ಇದೆ ಎಂದು ಅವರು ಆರೋಪಿಸಿದ್ದಾರೆ.

ಸರಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಕಾಯ್ದೆ-1993ರ ಕಲಂ 8ರ ಪ್ರಕಾರ ಆಡಳಿತ ಸಮಿತಿಯ ಸದಸ್ಯರನ್ನು ಜಿಲ್ಲಾಧಿಕಾರಿಗಳಿಂದ ನಾಮನಿರ್ದೇಶನ ಮಾಡಲು ಹೊರಟಿದೆ. ಆದರೆ ಸದರಿ ಕಲಂ 8 ಹೊಸದಾಗಿ ಜಿಲ್ಲಾಧಿಕಾರಿಯಿಂದ ಸ್ಥಾಪಿಸಲ್ಪಡುವ ಗ್ರಾಮಪಂಚಾಯತ್ ಗೆ ಚುನಾವಣೆ ನಡೆಸುವುದಕ್ಕೆ ಯಾವುದೇ ತೊಂದರೆ ಇದ್ದಲ್ಲಿ ಮಾತ್ರ ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಆದರೆ ಸರಕಾರ ಕಾನೂನನ್ನು ದುರ್ಬಳಕೆ ಮಾಡಿಕೊಂಡು ತನ್ನ ಆದೇಶದ ಮೂಲಕ ಸಂವಿಧಾನದ ಸದಾಶಯವನ್ನು ಧಿಕ್ಕರಿಸಿ ಸದಸ್ಯರ ನಾಮನಿರ್ದೇಶನ ಮಾಡುವ ಪ್ರಯತ್ನದಲ್ಲಿದೆ. ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಗೊಳಿಸಲಾಗಿದೆ. ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ದಿನನಿತ್ಯದ ಚಟುವಟಿಕೆಗಳು, ಸಾರಾಯಿ ಅಂಗಡಿಯಿಂದ ಹಿಡಿದು ಎಲ್ಲವನ್ನು ಪ್ರಾರಂಭಿಸಿರುವಾಗ ಚುನಾವಣೆ ಮುಂದೂಡುವ ಯಾವುದೇ ಪ್ರಯತ್ನವನ್ನು ಮಾಡಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಬಹುಶಃ ಪ್ರಸ್ತುತ ಯಾವುದೆ ಪಂಚಾಯತ್ ಪ್ರದೇಶದಲ್ಲಿ ಕಂಟೈನ್‍ಮೆಂಟ್ ಪ್ರದೇಶ ಇಲ್ಲ. ಅಂತಹ ಪ್ರದೇಶದಲ್ಲಿ ಚುನಾವಣೆ ನಡೆಸಲು ಯಾವುದೆ ತೊಂದರೆ ಇಲ್ಲ. ರಾಜ್ಯ ಚುನಾವಣಾ ಆಯೋಗಕ್ಕೆ ಸಂವಿಧಾನವನ್ನು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ ರಾಜ್ ಕಾಯ್ದೆ-1993ನ್ನು ಪಾಲಿಸಲೇಬೇಕಾದ ಉತ್ತರದಾಯಿತ್ವವಿದೆ. ಈ ಪರಿಸ್ಥಿತಿ ಪರಿಗಣಿಸಿ ಸಂವಿಧಾನ ಹಾಗೂ ಕಾನೂನು ವಹಿಸಿರುವ ತನ್ನ ಜವಾಬ್ದಾರಿಯನ್ನು ಅರಿತು ಚುನಾವಣೆ ನಡೆಯುವಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News