ಕೊರೋನ ಮಾಹಿತಿಗಾಗಿ ಮೊಬೈಲ್ ನಲ್ಲಿ ಈ ಲಿಂಕ್ ಕ್ಲಿಕ್ ಮಾಡಬೇಡಿ: ಸಿಬಿಐ ನೀಡಿದ ಎಚ್ಚರಿಕೆ

Update: 2020-05-19 16:46 GMT

ಹೊಸದಿಲ್ಲಿ,ಮೇ 19: ‘ಸೆರ್ಬರಸ್’ ಎಂಬ ಅಪಾಯಕಾರಿ ಸಾಫ್ಟ್‌ವೇರ್ ಜನರಿಗೆ ಕೋವಿಡ್-19 ಬಗ್ಗೆ ಮಾಹಿತಿಗಳನ್ನು ಒದಗಿಸುವ ನೆಪದಲ್ಲಿ ಕ್ರೆಡಿಟ್ ಕಾರ್ಡ್ ಡಾಟಾದಂತಹ ಅವರ ಹಣಕಾಸು ವಿವರಗಳನ್ನು ಕದಿಯುತ್ತಿದೆ ಎಂದು ಸಿಬಿಐ ರಾಜ್ಯಗಳು,ಕೇಂದ್ರಾಡಳಿತ ಪ್ರದೇಶಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ಎಚ್ಚರಿಕೆಯನ್ನು ನೀಡಿದೆ. ಈ ದುರುದ್ದೇಶಪೂರಿತ ವೈರಸ್ ಬಗ್ಗೆ ಇಂಟರ್‌ಪೋಲ್ ಸಿಬಿಐಗೆ ಮಾಹಿತಿಗಳನ್ನು ನೀಡಿತ್ತು.

ಈ ಟ್ರೋಝನ್ ವೈರಸ್ ಟೆಕ್ಸ್ಟ್ ಸಂದೇಶಗಳ ಮೂಲಕ ಸ್ಮಾರ್ಟ್ ಫೋನ್ ಬಳಕೆದಾರರನ್ನು ಸಂಪರ್ಕಿಸುತ್ತದೆ ಮತ್ತು ಕೋವಿಡ್-19 ಕುರಿತು ಇತ್ತೀಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ತಾನು ನೀಡಿರುವ ಕೊಂಡಿಯೊಂದನ್ನು ಕ್ಲಿಕ್ಕಿಸುವಂತೆ ಸೂಚಿಸುತ್ತದೆ. ಬಳಕೆದಾರರು ಈ ಕೊಂಡಿಯನ್ನು ಕ್ಲಿಕ್ಕಿಸಿದರೆ ಅದು ಅವರ ಸ್ಮಾರ್ಟ್‌ಫೋನ್‌ಗಳಲ್ಲಿ ವಂಚಕ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡುತ್ತದೆ ಮತ್ತು ಈ ಆ್ಯಪ್ ಸೂಕ್ಷ್ಮ ಹಣಕಾಸು ಮಾಹಿತಿಗಳ ಕಳ್ಳತನ ಮಾಡುತ್ತದೆ ಎಂದು ಸಿಬಿಐ ವಿವರಿಸಿದೆ.

ಕ್ರೆಡಿಟ್ ಕಾರ್ಡ್ ನಂಬರ್‌ಗಳಂತಹ ಹಣಕಾಸು ಮಾಹಿತಿಗಳನ್ನು ಕದಿಯುವುದು ಈ ಟ್ರೋಝನ್ ವೈರಸ್‌ನ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ ಅದು ವಂಚಕ ತಂತ್ರಗಳನ್ನು ಬಳಸಿ ಬಳಕೆದಾರನ ವೈಯಕ್ತಿಕ ಮಾಹಿತಿಯನ್ನು ಮತ್ತು ಎರಡು ಅಂಶಗಳ ಪಾಸ್‌ವರ್ಡ್ ವಿವರಗಳನ್ನೂ ಪಡೆದುಕೊಳ್ಳಬಲ್ಲದು. ಹೀಗೆ ಕದಿಯಲಾದ ಮಾಹಿತಿಗಳನ್ನು ವಂಚಕರು ಅನಧಿಕೃತ ಹಣಕಾಸು ವಹಿವಾಟುಗಳನ್ನು ನಡೆಸಲು ಬಳಸುತ್ತಾರೆ ಎಂದು ಅದು ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News