ಗ್ರಾಮ ಪಂಚಾಯತ್‌ಗಳ ನೆತ್ತಿಯ ಮೇಲೆ ಕೊರೋನ ಕತ್ತಿ

Update: 2020-05-21 05:47 GMT

ಸರಕಾರದ ಸವಲತ್ತುಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎನ್ನುವ ಮಹತ್ ಉದ್ದೇಶದಿಂದ ಅಧಿಕಾರ ವಿಕೇಂದ್ರೀಕರಣ ಜಾರಿಗೆ ಬಂತು. ‘ಭಾರತ ಹಳ್ಳಿಯಲ್ಲಿ ಜೀವಿಸುತ್ತಿದೆ’ ಎನ್ನುವ ಮಹಾತ್ಮಾ ಗಾಂಧೀಜಿಯ ಆಶಯವನ್ನು ಈಡೇರಿಸುವಲ್ಲಿ ಸಣ್ಣ ಮಟ್ಟದ ಯಶಸ್ಸು ಅಧಿಕಾರ ವಿಕೇಂದ್ರೀಕರಣದಿಂದ ಸಿಕ್ಕಿದೆ. ಈ ಮೂಲಕ ದಿಲ್ಲಿಯನ್ನು ಹಳ್ಳಿಯೆಡೆಗೆ ಒಯ್ಯುವುದಕ್ಕೆ ಸಾಧ್ಯವಾಯಿತು. ಇಂದು, ರಾಜಕೀಯ ಪಕ್ಷಗಳ ಹಸ್ತಕ್ಷೇಪ ಈ ವಿಕೇಂದ್ರೀಕರಣ ವ್ಯವಸ್ಥೆಯನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆಯಾದರೂ, ಅದರ ನಡುವೆ ಇಂದಿಗೂ ಕೆಲವು ಗ್ರಾಮ ಪಂಚಾಯತ್‌ಗಳು ಪ್ರಜಾಸತ್ತೆಯ ಅಡಿಗಲ್ಲುಗಳಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ದಿಲ್ಲಿಯಲ್ಲಿ ಕೂತ ನಾಯಕರಿಗೆ ಸಾಧ್ಯವಾಗದೇ ಇರುವುದನ್ನು ಗ್ರಾಮ ಪಂಚಾಯತ್‌ನ ಸದಸ್ಯರು ತಮ್ಮ ಊರಿನಲ್ಲಿ ಮಾಡಿ ತೋರಿಸುತ್ತಿದ್ದಾರೆ. ಪ್ರಜಾಪ್ರಭುತ್ವ ಇಲ್ಲಿ ಜನಸಾಮಾನ್ಯರ ಜೊತೆಗೆ ನೇರವಾಗಿ ಸಂವಾದಿಸುತ್ತಿದೆ.

ಇಲ್ಲಿ ರಾಜಕೀಯ ಪಕ್ಷಗಳಿಗಿಂತ ಅಭ್ಯರ್ಥಿಯೇ ಮತದಾರನಿಗೆ ಮುಖ್ಯವಾಗುತ್ತಾನೆ. ರಾಷ್ಟ್ರೀಯ ಪಕ್ಷಗಳು ಗ್ರಾಮ ಪಂಚಾಯತ್‌ನಂತಹ ತಳಸ್ತರದಲ್ಲಿ ಕೈ ಕೈ ಹಿಸುಕಿಕೊಳ್ಳುವುದು ಇದೇ ಕಾರಣಕ್ಕೆ. ಗ್ರಾಮಪಂಚಾಯತ್‌ನಂತಹ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಕೋಮುದ್ರುವೀಕರಣ ಕೆಲಸಕ್ಕೆ ಬರುವುದಿಲ್ಲ. ಅಲ್ಲೇನಿದ್ದರೂ ಸ್ಥಳೀಯ ಅಭಿವೃದ್ಧಿಯೇ ಮುಖ್ಯ ವಿಷಯ. ಕೊರೋನ ಸಂದರ್ಭದಲ್ಲೂ ಗ್ರಾಮ ಪಂಚಾಯತ್‌ಗಳು ತಮ್ಮ ತಮ್ಮ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿವೆ. ಜನರ ನಾಡಿಮಿಡಿತವನ್ನು ತಿಳಿದಿರುವ ಜನಪ್ರತಿನಿಧಿಗಳು ಸರಕಾರದಿಂದ ಪೂರ್ಣ ಪ್ರಮಾಣದ ತರಬೇತಿಯನ್ನು ಪಡೆದು ಮೈದಾನಕ್ಕಿಳಿದಿದ್ದಾರೆ. ಇಂತಹ ಸಂದರ್ಭದಲ್ಲೇ, ಅನಿರೀಕ್ಷಿತವಾಗಿ ಎಲ್ಲ ಗ್ರಾಮ ಪಂಚಾಯತ್‌ಗಳನ್ನು ವಿಸರ್ಜಿಸಿ, ಅವರ ಸ್ಥಾನದಲ್ಲಿ ಜಿಲ್ಲಾಧಿಕಾರಿಗಳು ತಾತ್ಕಾಲಿಕವಾಗಿ ತಮಗೆ ತೋಚಿದ ಸಮಿತಿಯನ್ನು ನೇಮಿಸುವ ಪ್ರಕ್ರಿಯೆಯೊಂದಕ್ಕೆ ರಾಜ್ಯದಲ್ಲಿ ಚಾಲನೆ ದೊರಕಿದೆ. ಅದು ಕಾರ್ಯ ರೂಪಕ್ಕೆ ಬಂದದ್ದೇ ಆದರೆ, ಅಧಿಕಾರ ವಿಕೇಂದ್ರೀಕರಣದ ಆಶಯಗಳಿಗೆ ಸರಕಾರ ಮಾಡುವ ಬಹುದೊಡ್ಡ ದ್ರೋಹವಾಗಿಬಿಡಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಕೊರೋನ ವಿರುದ್ಧ ನಡೆಯುತ್ತಿರುವ ಹೋರಾಟ ವಿಫಲವಾಗುವುದಕ್ಕೂ ಕಾರಣವಾಗಬಹುದು.

ಕೊರೋನಾ ಸೋಂಕಿನಿಂದ ನಾಡು ತತ್ತರಿಸಿರುವ ಸಂದರ್ಭದಲ್ಲಿ, ಹಲವು ಗ್ರಾಮ ಪಂಚಾಯತ್‌ಗಳ ಅಧಿಕಾರಾವಧಿ ಮುಗಿದಿದೆ. ಕೊರೋನ ದೆಸೆಯಿಂದಾಗಿ ಸದ್ಯಕ್ಕೆ ಚುನಾವಣೆಯನ್ನು ಘೋಷಿಸುವಂತಿಲ್ಲ. ಸರಕಾರ ಆರು ತಿಂಗಳ ಕಾಲ ಚುನಾವಣೆಯನ್ನು ಮುಂದೂಡಲು ನಿರ್ಧರಿಸಿದೆ. ಚುನಾಯಿತ ಸದಸ್ಯರ ಜಾಗದಲ್ಲಿ ಆಡಳಿತ ಸಮಿತಿಗಳನ್ನು ರಚನೆ ಮಾಡುವ ಉದ್ದೇಶವನ್ನು ಸರಕಾರ ಹೊಂದಿದೆ. ಪರಿಣಾಮವಾಗಿ ಗ್ರಾಮ ಪಂಚಾಯತ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ, ನಾಮನಿರ್ದೇಶಿತ ಸದಸ್ಯರು ಗ್ರಾಮ ಪಂಚಾಯತ್‌ನ ಚುಕ್ಕಾಣಿಯನ್ನು ತಮ್ಮ ಕೈಗೆ ತೆಗೆದುಕೊಳ್ಳಲಿದ್ದಾರೆ. ಈ ಸದಸ್ಯರನ್ನು ನೇಮಿಸುವ ಅಧಿಕಾರವನ್ನು ಸಂಪೂರ್ಣವಾಗಿ ಜಿಲ್ಲಾಧಿಕಾರಿಗಳಿಗೆ ನೀಡಲು ಸರಕಾರ ನಿರ್ಧರಿಸಿದೆ. ಸರಕಾರದ ಈ ನಡೆಯ ‘ತಪ್ಪು-ಸರಿ’ಗಳು ಇದೀಗ ತೀವ್ರ ಚರ್ಚೆಯಲ್ಲಿವೆೆ. ಹಲವರು ಈ ನಿರ್ಧಾರದ ಹಿಂದೆ ದುರುದ್ದೇಶವಿದೆ ಎಂದು ಆರೋಪಿಸುತ್ತಿದ್ದಾರೆ. ‘ಕಾನೂನಿನ ಪ್ರಕಾರವೇ ತೀರ್ಮಾನಕ್ಕೆ ಬಂದಿದ್ದೇವೆ’ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸುತ್ತಿದ್ದಾರೆ. ಆರು ತಿಂಗಳು ಎನ್ನುವುದು ಸಣ್ಣ ಅವಧಿಯೇನೂ ಅಲ್ಲ. ಅರ್ಧವರ್ಷ ರಾಜ್ಯಾದ್ಯಂತ ಇರುವ ಗ್ರಾಮಪಂಚಾಯತ್‌ಗಳನ್ನು ಪರೋಕ್ಷವಾಗಿ ಜಿಲ್ಲಾಧಿಕಾರಿಯ ಕೈಗೊಪ್ಪಿಸುವುದು ಎಂದರೆ, ಸ್ವತಃ ಸರಕಾರವೇ ಅದನ್ನು ತನ್ನ ಕೈವಶ ಮಾಡಿಕೊಂಡಂತೆಯೇ ಸರಿ. ಎಲ್ಲ ರಾಜಕೀಯ ಪಕ್ಷಗಳು ಗ್ರಾಮಪಂಚಾಯತ್ ಮಟ್ಟದ ಅಧಿಕಾರದ ಕುರಿತಂತೆ ತೀವ್ರ ಆಸಕ್ತಿಯನ್ನು ವಹಿಸುತ್ತವೆ.

ಪಕ್ಷ ಕಟ್ಟುವಲ್ಲಿ ಈ ಹಂತ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎನ್ನುವುದೇ ಇದಕ್ಕೆ ಕಾರಣ. ತಳಮಟ್ಟದ ಕಾರ್ಯಕರ್ತರನ್ನು ಸಂಘಟಿಸಲು ಗ್ರಾಮಪಂಚಾಯತ್‌ಗಳ ಮೇಲೆ ನಿಯಂತ್ರಣ ಅತ್ಯಗತ್ಯ. ಈ ಕಾರಣಕ್ಕೇ, ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಯಾವುದೇ ಪಕ್ಷವನ್ನು ಪ್ರತಿನಿಧಿಸದೇ ಇದ್ದರೂ, ತಮ್ಮ ತಮ್ಮ ಅಭ್ಯರ್ಥಿಗಳನ್ನು ಪಕ್ಷಗಳು ಸ್ವಯಂಘೋಷಿಸಿಕೊಳ್ಳುತ್ತವೆ. ಗೆದ್ದವರನ್ನೆಲ್ಲ ತಮ್ಮ ಪಕ್ಷದ ಪ್ರತಿನಿಧಿಗಳು ಎಂದು ಸಾಧಿಸಲು ಯತ್ನಿಸುತ್ತವೆ. ರಾಜ್ಯದಲ್ಲಿ 6,000ಕ್ಕೂ ಅಧಿಕ ಗ್ರಾಮ ಪಂಚಾಯತ್‌ಗಳಿದ್ದು, ಅವುಗಳಲ್ಲಿ 2,000ಕ್ಕೂ ಹೆಚ್ಚಿನ ಪಂಚಾಯತ್‌ಗಳ ಅಧಿಕಾರ ಮುಕ್ತಾಯಗೊಳ್ಳಲಿದೆ. ಈ ಪಂಚಾಯತ್‌ಗಳ ಸದಸ್ಯರನ್ನು ವಜಾಗೊಳಿಸಿ, ಜಿಲ್ಲಾಧಿಕಾರಿಯ ಮೂಲಕ ಹೊಸದಾಗಿ ಸದಸ್ಯರನ್ನು ನೇಮಿಸುವುದೆಂದರೆ ಪರೋಕ್ಷವಾಗಿ ಸರಕಾರವೇ ತನ್ನ ಮೂಗಿನ ನೇರಕ್ಕೆ ಜನಪ್ರತಿನಿಧಿಯನ್ನು ಆರು ತಿಂಗಳಿಗಾಗಿ ಆಯ್ಕೆ ಮಾಡಿಕೊಂಡಂತೆ. ಜಿಲ್ಲಾಧಿಕಾರಿ ನೇಮಕ ಮಾಡುವ ಸದಸ್ಯರು ಯಾವ ಕಾರಣಕ್ಕೂ ಪಕ್ಷಾತೀತರಾಗಿರಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ ಆಳುವ ಸರಕಾರವನ್ನೇ ಪ್ರತಿನಿಧಿಸುವುದರಿಂದ, ಅವರ ನೇಮಕಾತಿ ಅಂತಿಮವಾಗಿ ಆಡಳಿತದಲ್ಲಿರುವ ಸರಕಾರದ ನೇಮಕಾತಿಯಾಗಿಯೇ ನಾವು ಗುರುತಿಸಬೇಕಾಗುತ್ತದೆ.

ಜಿಲ್ಲಾಧಿಕಾರಿಯ ನಿರ್ದೇಶನದಂತೆ ನೇಮಕಾತಿ ನಡೆದರೆ ಮುಂದಿನ ಆರು ತಿಂಗಳ ಕಾಲ 2,000ಕ್ಕೂ ಅಧಿಕ ಗ್ರಾಮ ಪಂಚಾಯತ್‌ಗಳ ನಿಯಂತ್ರಣ ಬಿಜೆಪಿಯ ಕೈಗೆ ಸಿಕ್ಕಿದಂತಾಗುತ್ತದೆ. ಗ್ರಾಮ ಮಟ್ಟದಲ್ಲಿ ಅಧಿಕಾರ ಹಿಡಿಯುವ ತನ್ನ ವಿಫಲ ಪ್ರಯತ್ನವನ್ನು ಬಿಜೆಪಿ ಅಡ್ಡ ದಾರಿಯಲ್ಲಿ ಸಾಧಿಸಲು ಹೊರಟಂತಿದೆ. ಒಂದು ವೇಳೆ ಅದರಲ್ಲಿ ಯಶಸ್ವಿಯಾದರೆ, ಗ್ರಾಮ ಪಂಚಾಯತ್‌ನ ಉದ್ದೇಶವೇ ಬುಡಮೇಲಾದಂತೆ. ಈಗಾಗಲೇ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳನ್ನೇ ಮುಂದುವರಿಸುವುದಕ್ಕೆ ಸರಕಾರದ ಮುಂದಿರುವ ಅಡ್ಡಿಯೇನು ಎನ್ನುವುದನ್ನು ಮೊದಲು ಸರಕಾರ ಸ್ಪಷ್ಟಪಡಿಸಬೇಕಾಗಿದೆ. ಗ್ರಾಮ ಪಂಚಾಯತ್ ಮತ್ತು ಜಿಲ್ಲಾಧಿಕಾರಿಯ ನಡುವಿನ ಅಂತರ ಅಗಾಧವಾದುದು. ಜಿಲ್ಲಾಧಿಕಾರಿ ಆಯ್ಕೆ ಮಾಡುವ ಸಮಿತಿಗಳು ಜನರ ಆಶೋತ್ತರಗಳನ್ನು ಈಡೇರಿಸುವುದು ಸಾಧ್ಯವಿಲ್ಲ. ಒಂದು ವೇಳೆ ಜಿಲ್ಲಾಡಳಿತ ಹೊಸ ಸಮಿತಿಯನ್ನು ಆಯ್ಕೆ ಮಾಡಿತು ಎಂದೇ ಇಟ್ಟುಕೊಳ್ಳೋಣ. ಕೊರೋನ ಎದುರಿಸುವುದಕ್ಕೆ ಬೇಕಾದ ತರಬೇತಿಯನ್ನು ಅವರಿಗೆ ಹೊಸದಾಗಿ ನೀಡಬೇಕಾಗುತ್ತದೆ. ಈಗಾಗಲೇ ಕೊರೋನ ವಿರುದ್ಧ ಯುದ್ಧ ಘೋಷಣೆಯಾಗಿದೆ.

ಹೊಸದಾಗಿ ಕತ್ತಿ ವರಸೆ ಕಲಿಸಿ ಹೊಸ ಯೋಧರನ್ನು ತಯಾರು ಮಾಡುವುದಕ್ಕಿಂತ, ಈ ಯುದ್ಧದ ಕುರಿತಂತೆ ಅಪಾರ ಅನುಭವ ಇರುವ ಹಾಲಿ ಯೋಧರನ್ನೇ ಕೊರೋನ ವಿರುದ್ಧ ಬಳಸುವುದು ಬುದ್ಧಿವಂತಿಕೆಯಾಗಿದೆ. ಜಿಲ್ಲಾಧಿಕಾರಿ ಹೊಸದಾಗಿ ನೇಮಕ ಮಾಡುವ ಸದಸ್ಯರಿಗಿಂತ, ಜನರಿಂದಲೇ ನೇರವಾಗಿ ಆಯ್ಕೆಯಾಗಿರುವ ಹಾಲಿ ಸದಸ್ಯರೇ ಸದ್ಯದ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎನ್ನುವುದು ಸರಕಾರಕ್ಕೆ ಯಾಕೆ ಅರ್ಥವಾಗುತ್ತಿಲ್ಲ? ಅಂದರೆ ಸರಕಾರ ಜಿಲ್ಲಾಧಿಕಾರಿಯನ್ನು ಬಳಸಿಕೊಂಡು ಗ್ರಾಮಪಂಚಾಯತ್‌ನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟಿರುವುದು ಸ್ಪಷ್ಟ. ಹೊಸ ಸಮಿತಿಯಲ್ಲಿ ತನ್ನದೇ ಜನರನ್ನು ಸೇರಿಸಿ, ಮುಂದಿನ ಆರು ತಿಂಗಳ ಕಾಲ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಕ್ಷದ ಬೇರನ್ನು ಗಟ್ಟಿಗೊಳಿಸುವ ದುರುದ್ದೇಶವೂ ಎದ್ದು ಕಾಣುತ್ತದೆ. ಇದು ನಿಜಕ್ಕೂ ಅಪಾಯಕಾರಿಯಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಇದು ಹಲವು ತಿಕ್ಕಾಟಗಳಿಗೆ ಕಾರಣವಾಗಲಿದೆ ಮಾತ್ರವಲ್ಲ, ನೇಮಕಾತಿಯ ಗೊಂದಲಗಳು ಕೊರೋನವನ್ನು ಎದುರಿಸುವುದಕ್ಕೆ ಅಡ್ಡಿಯಾಗಲಿವೆ. ಈಗಾಗಲೇ ಹತ್ತು ಹಲವು ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟುಗಳಿಂದ ಹೊರಬರಲಾರದೆ ಏದುಸಿರು ಬಿಡುತ್ತಿರುವ ಸರಕಾರ, ಗ್ರಾಮಪಂಚಾಯತ್ ನೇಮಕಕ್ಕೆ ಸಂಬಂಧಿಸಿ ಅನಗತ್ಯವಾದ ಹೊಸ ಸಮಸ್ಯೆಯೊಂದನ್ನು ಮೈಮೇಲೆ ಎಳೆದು ಕೊಳ್ಳದಿರುವುದೇ ವಾಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News